
ಶಿವಮೊಗ್ಗ (ಮೇ.8): ಕರ್ನಾಟಕದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ತಕ್ಷಣವೇ ದೇಶಕ್ಕೆ ಕಳುಹಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ರಾಜ್ಯ ಬಿಜೆಪಿ ಪ್ರಕೋಷ್ಠಗಳ ಅಧ್ಯಕ್ಷ ಎಸ್ ದತ್ತಾತ್ರಿ ಅವರು ಶಿವಮೊಗ್ಗದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ, ಘೋಷಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ನಾಳೆ (ಮೇ 9, 2025) ರಾಜ್ಯಪಾಲರಿಗೆ ಈ ಮನವಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಹಿ ಸಂಗ್ರಹ ಅಭಿಯಾನ
ಬಿಜೆಪಿಯ 24 ಪ್ರಕೋಷ್ಠಗಳು ರಾಜ್ಯಾದ್ಯಂತ ನಡೆಸಿರುವ ಸಹಿ ಸಂಗ್ರಹ ಅಭಿಯಾನದ ಮೂಲಕ, ಪಾಕ್ ಪ್ರಜೆಗಳನ್ನು ಗುರುತಿಸಿ ಹೊರದಬ್ಬುವಂತೆ ಒತ್ತಾಯಿಸಲಾಗಿದೆ. ರಾಜ್ಯದಲ್ಲಿ 100 ರಿಂದ 150 ಪಾಕಿಸ್ತಾನಿ ಪ್ರಜೆಗಳು ವಾಸಿಸುತ್ತಿರುವ ಶಂಕೆಯಿದೆ ಎಂದು ದತ್ತಾತ್ರಿ ಆರೋಪಿಸಿದ್ದಾರೆ. ಆದರೆ ಗೃಹ ಸಚಿವರು 80 ಜನರಿದ್ದಾರೆ ಎಂದು ಅಂದಾಜಿಸಿದ್ದರೂ, ನಿಖರವಾದ ಅಂಕಿಅಂಶವಿಲ್ಲದಿರುವುದಕ್ಕೆ ರಾಜ್ಯ ಸರ್ಕಾರವನ್ನು ಟೀಕಿಸಿದರು. ಪಾಕ್ ಪ್ರಜೆಗಳನ್ನು ಹೊರದಬ್ಬಿದರೆ ಮುಸ್ಲಿಂ ಸಮುದಾಯದ ಅಸಮಾಧಾನಕ್ಕೆ ಗುರಿಯಾಗಿಸುತ್ತಾರೆ ಎಂಬ ಭಯದಿಂದ ಕಾಂಗ್ರೆಸ್ ಸರ್ಕಾರ ಉದಾಸೀನತೆ ತೋರಿದೆ ಎಂದು ದತ್ತಾತ್ರಿ ಆಕ್ಷೇಪಿಸಿದರು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಪ್ರವಾಹದ ಭೀತಿ: ನೆಲ, ಜಲ, ಆಗಸ ಮೂರು ಕಡೆಯಿಂದಲೂ ಭಾರತ ದಾಳಿ; ಕಂಗಾಲಾಗಿ ಕುಳಿತ ಪಾಕ್!
ಆಪರೇಷನ್ ಸಿಂದೂರ, ಭಾರತೀಯ ಸೇನೆಗೆ ಧನ್ಯವಾದ
ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂಧೂರ'ಗೆ ಬಿಜೆಪಿ ಪ್ರಕೋಷ್ಠಗಳು ಧನ್ಯವಾದ ಸಲ್ಲಿಸಿವೆ. 26 ಹೆಣ್ಣುಮಕ್ಕಳ ಸಿಂದೂರವನ್ನು ಒರಸಿಹಾಕಿದ ಉಗ್ರರ ವಿರುದ್ಧ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಈ ಕಾರ್ಯಾಚರಣೆಯಿಂದ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿದೆ, ಎಂದು ದತ್ತಾತ್ರಿ ಹೇಳಿದರು.
ಭಾರತವು ಪಾಕಿಸ್ತಾನದ ವಿರುದ್ಧ ಐದು ಪ್ರಮುಖ ರಾಜತಾಂತ್ರಿಕ ಕ್ರಮಗಳನ್ನು ರೂಪಿಸಿರುವುದಾಗಿ ಉಲ್ಲೇಖಿಸಿದರು ದತ್ತಾತ್ರಿ, ಪಾಕ್ ಪ್ರಜೆಗಳನ್ನು ದೇಶದಿಂದ ಹೊರದಬ್ಬುವುದು, ಸಿಂಧೂ ನದಿಯ ನೀರು ಹಂಚಿಕೆಯನ್ನು ತಡೆಯುವುದು, ಉಗ್ರರ ನೆಲೆಗಳ ಮೇಲೆ ಕಾರ್ಯಾಚರಣೆ, ರಾಜತಾಂತ್ರಿಕ ಒತ್ತಡ ಹೆಚ್ಚಿಸುವುದು, ಗಡಿಯಲ್ಲಿ ಕಟ್ಟುನಿಟ್ಟಿನ ಭದ್ರತೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕ್ರಮ, ಕಾಂಗ್ರೆಸ್ ರಾಜ್ಯಗಳಲ್ಲಿ ಉದಾಸೀನತೆ ತೋರಿದೆ ಎಂದು ಟೀಕಿಸಿದರು.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪಾಕ್ ಪ್ರಜೆಗಳನ್ನು ಗುರುತಿಸಿ ಹೊರದಬ್ಬಲಾಗಿದೆ. ಆದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಇಂತಹ ಕ್ರಮಗಳಿಗೆ ಒತ್ತು ನೀಡದೆ, ಪಾಕ್ ನಿವಾಸಿಗಳನ್ನು ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರವು ಪಾಕ್ ಪ್ರಜೆಗಳ ಸಂಖ್ಯೆಯ ಬಗ್ಗೆ ಸರಿಯಾದ ಮಾಹಿತಿಯನ್ನೇ ಇಟ್ಟುಕೊಂಡಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: S 400 missile system: ಭಾರತೀಯ ಸೇನೆಯ ಶೌರ್ಯವನ್ನು ತೋರಿಸುವ ವಿಡಿಯೋ ವೈರಲ್!
ಮುಂದೇನು?
ಬಿಜೆಪಿಯ 24 ಪ್ರಕೋಷ್ಠಗಳು ರಾಜ್ಯಾದ್ಯಂತ ಈ ವಿಷಯವನ್ನು ಜನರಿಗೆ ತಲುಪಿಸಲು ಮನವಿ ಅಭಿಯಾನವನ್ನು ತೀವ್ರಗೊಳಿಸಲಿವೆ. ನಾಳೆಯ ಮನವಿ ಸಲ್ಲಿಕೆಯಲ್ಲಿ ಶಿವಮೊಗ್ಗದ ಸಂಸದ ಬಿವೈ ರಾಘವೇಂದ್ರ, ಶಾಸಕ ಎಸ್ ಎನ್ ಚನ್ನಬಸಪ್ಪ ಮತ್ತು ಜಿಲ್ಲಾಧ್ಯಕ್ಷ ಎನ್‌ಕೆ ಜಗದೀಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ