ಆಹಾರ ನೀಡದಿದ್ದರೆ ಜೀವಿಸುವ ಹಕ್ಕು ಉಲ್ಲಂಘನೆ| ಜನೌಷಧಿ ಕೇಂದ್ರಗಳಲ್ಲಿ 25 ರು.ಗೆ ಎನ್ -95 ಮಾಸ್ಕ್‌ಗಳು ಲಭ್ಯವಿದೆ ಎಂದು ವಿಚಾರಣೆ ವೇಳೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ| ಜನ ಸಾಮಾನ್ಯರಿಗೆಲ್ಲರಿಗೂ ಮಾಸ್ಕ್ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ|
ಬೆಂಗಳೂರು(ನ.11): ರಾಜ್ಯದಲ್ಲಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಿದ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆಹಾರ ಒದಗಿಸದಿದ್ದರೆ ಸಂವಿಧಾನ ನೀಡಿದ ಜೀವಿಸುವ ಹಕ್ಕು ಉಲ್ಲಂಘನೆಯಾಗಲಿದೆ ಎಂದು ಖಾರವಾಗಿ ನುಡಿದಿದೆ.
ಕೊರೋನಾ ಸೋಂಕು ತಡೆಯಲು ಲಾಕ್‌ಡೌನ್ ಘೋಷಿಸಿದ ಪರಿಣಾಮ ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.
undefined
ಕೊರೋನಾ ಕಾಟ: ಬಿಸಿಯೂಟ ಬದಲು ಮಕ್ಕಳಿಗೆ ಆಹಾರ ಧಾನ್ಯ
ವಾದ ಆಲಿಸಿದ ನ್ಯಾಯಪೀಠ, ಆಹಾರ ವಂಚಿತ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ, ಮಧ್ಯಾಹ್ನದ ಊಟ ಒದಗಿಸುವ ಬಗ್ಗೆ ಕ್ರಮ ಕೈಗೊಂಡು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಪ್ರಮಾಣ ಪತ್ರ ಸಲ್ಲಿಸಬೇಕು. ಯಾವ ಕಾರಣಕ್ಕೆ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಸ್ಥಗಿತಗೊಳಿಸಲಾಯಿತು, ಆಹಾರ ವಂಚಿತ ವಿದ್ಯಾರ್ಥಿಗಳಿಗೆ ಹೇಗೆ ಪರಿಹಾರ ಕಲ್ಪಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಸಲ್ಲಿಸಬೇಕೆಂದು ಎಂದು ಸೂಚಿಸಿ, ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು.
ಜನೌಷಧಿ ಕೇಂದ್ರಗಳಲ್ಲಿ 25 ರು.ಗೆ ಎನ್ -95 ಮಾಸ್ಕ್‌ಗಳು ಲಭ್ಯವಿದೆ ಎಂದು ವಿಚಾರಣೆ ವೇಳೆ ಕೇಂದ್ರ ಸರ್ಕಾರ ಮಾಹಿತಿ ನೀಡಿತು. ಅದನ್ನು ಪ್ರತಿಕ್ರಿಯಿಸಿದ ನ್ಯಾಯಪೀಠ, ಜನೌಷಧಿ ಕೇಂದ್ರಗಳಲ್ಲಿ ದಾಸ್ತಾನು ಕೊರತೆ ಇದೆ. ಹಾಗಾಗಿ ಜನ ಸಾಮಾನ್ಯರಿಗೆಲ್ಲರಿಗೂ ಮಾಸ್ಕ್ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.