ಪಟಾಕಿ ನಿಷೇಧ: ರಾಜ್ಯ ಸರ್ಕಾರದ ‘ಅರ್ಥಹೀನ ಆದೇಶ’: ಹೈಕೋರ್ಟ್‌ ಗರಂ

Kannadaprabha News   | Asianet News
Published : Nov 13, 2020, 08:51 AM IST
ಪಟಾಕಿ ನಿಷೇಧ: ರಾಜ್ಯ ಸರ್ಕಾರದ ‘ಅರ್ಥಹೀನ ಆದೇಶ’: ಹೈಕೋರ್ಟ್‌ ಗರಂ

ಸಾರಾಂಶ

ಆದೇಶ ಅಸ್ಪಷ್ಟ ಹಾಗೂ ಅರ್ಥಹೀನ| ಹಸಿರು ಪಟಾಕಿ ಎಂದರೇನು ಎಂದೇ ಸರ್ಕಾರ ಹೇಳಿಲ್ಲ| ಇತರ ಪಟಾಕಿಗೂ ಹಸಿರು ಪಟಾಕಿಗೂ ವ್ಯತ್ಯಾಸ ತಿಳಿಸಿಲ್ಲ| ಪಟಾಕಿ ಮಾರಾಟ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಪಟಾಕಿ ಮಾರಾಟ ಮತ್ತು ಬಳಕೆಗೆ ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಕೆ| 

ಬೆಂಗಳೂರು(ನ.13): ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ಮೇಲಿನ ನಿಷೇಧ ಹೇರುವ ವಿಚಾರದಲ್ಲಿ ಸರ್ಕಾರ ಅಸ್ಪಷ್ಟ ಹಾಗೂ ಅರ್ಥಹೀನ ಆದೇಶ ಹೊರಡಿಸಿದೆ ಎಂದು ಹೈಕೋರ್ಟ್‌ ಕಿಡಿಕಾರಿದೆ. ರಾಜ್ಯದಲ್ಲಿ ಎಲ್ಲ ಬಗೆಯ ಪಟಾಕಿ ನಿಷೇಧಿಸುವಂತೆ ಕೋರಿ ನಗರದ ಚಾರ್ಟರ್ಡ್‌ ಅಕೌಂಟಂಟ್‌ ಡಾ. ಎ.ಎಸ್‌. ವಿಷ್ಣು ಭರತ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರ ರಾಜ್ಯದಲ್ಲಿ ಪಟಾಕಿ ಮಾರಾಟ ಹಾಗೂ ಬಳಕೆಗೆ ಸಂಬಂಧಿಸಿದಂತೆ ನ.6 ಮತ್ತು ನ.10ರಂದು ಹೊರಡಿಸಿರುವ ಆದೇಶವನ್ನು ಪರಿಶೀಲಿಸಿದ ನ್ಯಾಯಪೀಠ, ‘ಸರ್ಕಾರ ತನ್ನ ಆದೇಶದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದೆ. ಆದರೆ, ಹಸಿರು ಪಟಾಕಿ ಎಂದರೇನು, ಇತರೆ ಪಟಾಕಿ ಹಾಗೂ ಹಸಿರು ಪಟಾಕಿಗೆ ಇರುವ ವ್ಯತ್ಯಾಸವೇನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಸರ್ಕಾರ ಅಸ್ಪಷ್ಟಆದೇಶ ಹೊರಡಿಸಿದ್ದು, ಹಸಿರು ಪಟಾಕಿ ಯಾವುದು ಎಂಬುದನ್ನು ಜನ ಹೇಗೆ ಗುರುತಿಸುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ‘ಹಸಿರು ಪಟಾಕಿ ಹೆಸರಲ್ಲಿ ಇತರೆ ಪಟಾಕಿಗಳನ್ನು ಮಾರಾಟ ಮಾಡಿದರೆ ಅದನ್ನು ಸರ್ಕಾರ ಹೇಗೆ ನಿಯಂತ್ರಿಸುತ್ತದೆ?’ ಎಂದು ಪ್ರಶ್ನಿಸಿದ ನ್ಯಾಯಪೀಠ, ‘ಹಸಿರು ಪಟಾಕಿ ಕುರಿತು ನಾಳೆಯೊಳಗೆ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದು ತಾಕೀತು ಮಾಡಿತು. ಹಾಗೆಯೇ, ‘ವಾಯುಮಾಲಿನ್ಯ ಅಳೆಯಲು ಮತ್ತು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳೇನು ಎಂಬುದರ ವಿವರ ನೀಡಬೇಕು’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಕೊರೋನಾ ರೋಗಿಗಳ ಸುರಕ್ಷೆ: ಈ ಬಾರಿ ಪಟಾಕಿ ಸಿಡಿಸುವಂತಿಲ್ಲ

ಸರ್ಕಾರಕ್ಕೆ ಎಚ್ಚರಿಕೆ:

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರ್ಜಿ ಸಲ್ಲಿಕೆ ವಿಳಂಬವಾಗಿದೆ. ಮೊದಲೇ ಅರ್ಜಿ ಸಲ್ಲಿಸಿದ್ದರೆ ಕಠಿಣ ಆದೇಶ ಹೊರಡಿಸುವ ಅವಕಾಶ ಇರುತ್ತಿತ್ತು. ಪ್ರಸ್ತುತ ಕೊರೋನಾ ಸಂದರ್ಭದಲ್ಲಿ ಪಟಾಕಿ ಮಾರಾಟದಿಂದ ವಾಯುಮಾಲಿನ್ಯಸಮಸ್ಯೆ ಉಲ್ಭಣಿಸುವ ಸಾಧ್ಯತೆ ಇದೆ. ಹೀಗಾಗಿ, ಪಟಾಕಿ ಮಾರಾಟ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಪಟಾಕಿ ಮಾರಾಟ ಮತ್ತು ಬಳಕೆಗೆ ನಿರ್ಬಂಧ ವಿಧಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿತು.

ವಾದ ಪ್ರತಿವಾದ:

ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲ ಬಿ.ಕೆ ನರೇಂದ್ರ ಬಾಬು ವಾದಿಸಿ, ‘ವಾಯುಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪಟಾಕಿ ನಿರ್ಬಂಧಿಸಬೇಕು. ಈಗಾಗಲೇ ಹಲವು ರಾಜ್ಯಗಳಲ್ಲಿ ಪಟಾಕಿ ನಿರ್ಬಂಧಿಸಿ ಸರ್ಕಾರಗಳು ಹಾಗೂ ಹೈಕೋರ್ಟ್‌ಗಳು ಆದೇಶ ಹೊರಡಿಸಿ’ ಎಂದು ಕೋರಿದರು.

ವಕೀಲ ಜಿ.ಆರ್‌ ಮೋಹನ್‌, ‘ಪಟಾಕಿ ಬಳಕೆ ನಿಷೇಧಿಸಲು ಕೋರಿ ಆ.31ರಂದೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಸರ್ಕಾರ ಸೂಕ್ತ ಕ್ರಮ ಜರುಗಿಸಿಲ್ಲ. ಈಗಾಗಲೇ ಪಟಾಕಿ ಮಾರಾಟಕ್ಕೆ ಸ್ಟಾಲ್‌ಗಳು ನಿರ್ಮಾಣವಾಗಿವೆ’ ಎಂದು ವಿವರಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!