ಎಂಜಿನಿಯರ್‌ ನೇಮಕದಲ್ಲಿ ಕಲ್ಯಾಣ ಕರ್ನಾಟಕ ಮೀಸಲಿಗೆ ಹೈಕೋರ್ಟ್‌ ಅಸ್ತು

Published : Aug 31, 2023, 11:29 AM IST
ಎಂಜಿನಿಯರ್‌ ನೇಮಕದಲ್ಲಿ ಕಲ್ಯಾಣ ಕರ್ನಾಟಕ ಮೀಸಲಿಗೆ ಹೈಕೋರ್ಟ್‌ ಅಸ್ತು

ಸಾರಾಂಶ

ಸ್ಥಳೀಯ ವೃಂದದಲ್ಲಿ ಸಹಾಯಕ ಎಂಜಿನಿಯರ್‌ಗಳ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿದ್ದು, ಸ್ಥಳೀಯರಲ್ಲದ ವೃಂದದಲ್ಲಿ ಅಸಂಖ್ಯಾತ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಕಾದು ಕೂತಿದ್ದಾರೆ. ಉದ್ಯೋಗ ಪಡೆಯುವುದು ಅತ್ಯಂತ ಕಷ್ಟ ಎನ್ನುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದು, ಮುಂದೆ ನೇಮಕಾತಿ ನಡೆಯುವವರಿಗೆ ಬಹುತೇಕ ಅಭ್ಯರ್ಥಿಗಳು ಅನರ್ಹರಾಗುತ್ತಾರೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌  

ಬೆಂಗಳೂರು(ಆ.31): ಕರ್ನಾಟಕ ವಿದ್ಯುತ್‌ ಪ್ರಸರಣಾ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್‌) ಸಹಾಯಕ ಎಂಜಿನಿಯರ್‌ (ಎಲೆಕ್ಟ್ರಿಕಲ್‌) ಮತ್ತು ಕಿರಿಯ ಎಂಜಿನಿಯರ್‌ಗಳ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಸಂವಿಧಾನದ ಪರಿಚ್ಛೇದ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ (ಹೈದರಾಬಾದ್‌-ಕರ್ನಾಟಕ ಭಾಗದ) ಅಭ್ಯರ್ಥಿಗಳಿಗೆ ಮೀಸಲು ಸೌಲಭ್ಯ ಒದಗಿಸಿ 2023ರ ಫೆ.1ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್‌ ಪುರಸ್ಕರಿಸಿದೆ.

ರಾಜ್ಯ ಸರ್ಕಾರದ ಸುತೋಲೆ ಪ್ರಶ್ನಿಸಿ ಎಚ್‌.ಎನ್‌. ನವೀನ್‌ಕುಮಾರ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ಎಸ್‌. ಸಂಜಯ್‌ಗೌಡ ಅವರ ಪೀಠ ಈ ಆದೇಶ ಮಾಡಿದೆ.

ಕೊಲೆ, ದರೋಡೆ ಕೇಸ್‌ ನಿತ್ಯ ವಿಚಾರಣೆ, ರಾಜ್ಯದ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್‌ನಿಂದ ಆದೇಶ

ಕಲ್ಯಾಣ ಕರ್ನಾಟಕದ ಭಾಗದ ಪ್ರದೇಶಗಳು ತೀರಾ ಹಿಂದುಳಿದಿದೆ ಎಂಬ ಕಾರಣಕ್ಕೆ ಸಂವಿಧಾನಕ್ಕೆ ತಿದ್ದುಪಡಿ ಮಾಡಿ, ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಲಾಗಿದೆ. ಅದರಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೆಲವೊಂದು ವಿಶೇಷ ವಿನಾಯ್ತಿ ನೀಡಲಾಗಿದೆ. ಆ ಪ್ರದೇಶದಲ್ಲಿ ನಡೆಯುವ ನೇಮಕದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಕೆಲವು ಹುದ್ದೆಗಳನ್ನು ಮೀಸಲಿಡುವುದು. ಆ ಮೂಲಕ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಾತಿನಿಧ್ಯ ಒದಗಿಸುವುದು ಪರಿಚ್ಛೇದ 371-ಜೆ ಉದ್ದೇಶವಾಗಿದೆ. ಅದರಂತೆ ರಾಜ್ಯ ಸರ್ಕಾರದ ಅಧಿಸೂಚನೆಯು ಸ್ಥಳೀಯರು ಮತ್ತು ಸ್ಥಳೀಯರಲ್ಲದವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಇದೇ ವೇಳೆ ಸ್ಥಳೀಯ ವೃಂದದಲ್ಲಿ ಸಹಾಯಕ ಎಂಜಿನಿಯರ್‌ಗಳ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿದ್ದು, ಸ್ಥಳೀಯರಲ್ಲದ ವೃಂದದಲ್ಲಿ ಅಸಂಖ್ಯಾತ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಕಾದು ಕೂತಿದ್ದಾರೆ. ಉದ್ಯೋಗ ಪಡೆಯುವುದು ಅತ್ಯಂತ ಕಷ್ಟ ಎನ್ನುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದು, ಮುಂದೆ ನೇಮಕಾತಿ ನಡೆಯುವವರಿಗೆ ಬಹುತೇಕ ಅಭ್ಯರ್ಥಿಗಳು ಅನರ್ಹರಾಗುತ್ತಾರೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ ಸೀಮಿತವಾಗಿ ಸರ್ಕಾರ ಮತ್ತು ಕೆಪಿಟಿಸಿಎಲ್‌ಗೆ ಕೆಲವೊಂದು ನಿರ್ದೇಶನ ನೀಡಿದೆ.

ಸ್ಥಳಿಯರಲ್ಲದ ವೃಂದದಲ್ಲಿ ಆಯ್ಕೆಯಾಗಿರುವ ಹೈದರಾಬಾದ್‌ ಕರ್ನಾಟಕ ಭಾಗದ ಸ್ಥಳೀಯರು ಸ್ಥಳೀಯ ವೃಂದ ಆಯ್ಕೆ ಮಾಡಿಕೊಳ್ಳುವ ಇಚ್ಛೆ ಹೊಂದಿದ್ದಾರೆಯೇ ಎಂದು ಕೇಳುವ ಮೂಲಕ ಹೊಸ ಆಯ್ಕೆ ಮಾಡಬೇಕು. ಸ್ಥಳೀಯರು ಸ್ಥಳೀಯ ವೃಂದ ಆಯ್ಕೆ ಮಾಡಿಕೊಳ್ಳುವುದರಿಂದ ಸ್ಥಳೀಯರಲ್ಲದ ಹುದ್ದೆಗಳು ಖಾಲಿ ಇರಲಿದೆ. ಹಾಗಾಗಿ ಈ ಹುದ್ದೆಗಳನ್ನು ಸ್ಥಳಿಯರಲ್ಲದ ಅಭ್ಯರ್ಥಿಗಳಿಗೆ ಅರ್ಹತೆಯ ಆಧಾರದಲ್ಲಿ ನೀಡಬೇಕು.

ಸ್ಥಳೀಯ ಅಭ್ಯರ್ಥಿಗಳು ಸ್ಥಳಿಯರಲ್ಲದ ವೃಂದಕ್ಕೆ ಆಯ್ಕೆಯಾಗಲು ಬಯಸಿದರೆ ಮತ್ತು ಅವರು ಸ್ಥಳೀಯ ವೃಂದ ಆಯ್ಕೆ ಮಾಡಿಕೊಳ್ಳುವಂತೆ ಬಲವಂತ ಮಾಡುವಂತಿಲ್ಲ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನಪಡೆದಿರುವ ಯಾವುದೇ ಸ್ಥಳೀಯ ವ್ಯಕ್ತಿಯನ್ನು ಬದಲಾವಣೆ ಮಾಡುವಂತಿಲ್ಲ. ಸ್ಥಳೀಯ ವ್ಯಕ್ತಿಯನ್ನು ಸ್ಥಳೀಯ ವೃಂದ ಹುದ್ದೆಯಿಂದ ಬದಲಿಸಿದರೆ ಸ್ಥಳೀಯ ವೃಂದ ಆಯ್ಕೆ ಮಾಡಿದ್ದ ಸ್ಥಳೀಯರಲ್ಲದ ವೃಂದ ವ್ಯಕ್ತಿಯನ್ನು ಸ್ಥಳೀಯರಲ್ಲದ ವೃಂದದಲ್ಲೇ ಮುಂದುವರಿಸಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ವಿವರ:

ಕೆಪಿಟಿಸಿಎಲ್‌ ಸಹಾಯಕ ಎಂಜಿನಿಯರ್‌ ಮತ್ತು ಕಿರಿಯ ಎಂಜಿನಿಯರ್‌ (ಎಲೆಕ್ಟ್ರಿಕಲ್‌) ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿಗೆ 2022ರ ಜ.24ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿತ್ತು. ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. 2023ರ ಫೆ.1ರಂದು ಸುತ್ತೋಲೆ ಹೊರಡಿಸಿದ್ದ ರಾಜ್ಯ ಸರ್ಕಾರ, ಸಂವಿಧಾನದ 371-ಜೆ ಅಡಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಾತಿ ಅನ್ವಯಿಸಲಿದೆ. ಕಲ್ಯಾಣ ಕರ್ನಾಟಕದ ಸ್ಥಳೀಯ ಅಭ್ಯರ್ಥಿಗಳನ್ನು ಮೊದಲು ಸ್ಥಳೀಯರಲ್ಲದ ವೃಂದದ ಹುದ್ದೆಗಳಿಗೆ ಬಡ್ತಿ ಅಥವಾ ನೇರ ನೇಮಕಾತಿ ಮೂಲಕ ಪರಿಗಣಿಸಲಾಗುವುದು. ಆ ಹುದ್ದೆಗಳನ್ನು ಪಡೆಯುವಲ್ಲಿ ಅಭ್ಯರ್ಥಿಗಳು ವಿಫಲವಾದರೆ ಅವರನ್ನು ನಂತರ ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸಲಾಗುವುದು ಎಂದು ಹೇಳಿತ್ತು.

ಮೊದಲನೇ ಮದುವೆ ಬಚ್ಚಿಟ್ಟಿದ್ದವಳಿಗೆ ಡೈವೋರ್ಸ್‌: ಹೈಕೋರ್ಟ್‌

ಅದನ್ನು ಪ್ರಶ್ನಿಸಿದ್ದ ಸ್ಥಳೀಯರಲ್ಲದ ಅಭ್ಯರ್ಥಿಗಳು, ನೇಮಕ ಪ್ರಕ್ರಿಯೆಯಲ್ಲಿ ತಮ್ಮ ಆಯ್ಕೆಯನ್ನು ಸಲ್ಲಿಸಿದ್ದ ನಂತರ ಅದನ್ನು ಮಾರ್ಪಾಡು ಮಾಡುವುದು ಕಾನೂನು ಬಾಹಿರ. ಸ್ಥಳೀಯ ವೃಂದವನ್ನು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು, ಸ್ಥಳೀಯರಲ್ಲದ ವೃಂದದಲ್ಲೂ ನೇಮಕವಾಗುವ ಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ಆಕ್ಷೇಪಿಸಿದ್ದರು.

ಅದನ್ನು ಆಕ್ಷೇಪಿಸಿದ್ದ ರಾಜ್ಯ ಸರ್ಕಾರ, ಸಂವಿಧಾನದ ಪರಿಚ್ಛೇದ 371-ಜೆ ನಿಜವಾದ ಆಶಯ ಸಾಕಾರವಾಗಬೇಕಾದರೆ ಈ ಕ್ರಮ ಅನಿವಾರ್ಯವಾಗಿದೆ. ಆದೇಶದಲ್ಲಿ ಮೀಸಲು ಅನ್ವಯ ಸಂಬಂಧ ಉಲ್ಲೇಖಿಸಿರುವುದು ಸಂವಿಧಾನದ ಅಶಯಕ್ಕೆ ಅನುಗುಣವಾಗಿದೆ. ಈ ರೀತಿಯ ಆದೇಶ ಹೊರಡಿಸಿರುವ ಎಲ್ಲ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ಸಮರ್ಥಿಸಿಕೊಂಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!