ಹೇಮಾವತಿ ಹೆಗ್ಗಡೆ ಸೇರಿ ಮೂವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

Published : Apr 21, 2022, 06:50 PM IST
ಹೇಮಾವತಿ ಹೆಗ್ಗಡೆ ಸೇರಿ ಮೂವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

ಸಾರಾಂಶ

ಮಂಗಳೂರು ವಿವಿ ಈ ಬಾರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ಹೇಮಾವತಿ ವಿ ಹೆಗ್ಗಡೆ, ಹರಿಕೃಷ್ಣ ಪುನರೂರು ಹಾಗೂ ದೇವದಾಸ್ ಕಾಪಿಕಾಡ್ ಅವರಿಗೆ ಈ ಗೌರವ ನೀಡಲಾಗುತ್ತದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.  

ಮಂಗಳೂರು (ಏ.21): ಮಂಗಳೂರು ವಿವಿಯಿಂದ (university of Mangalore) ಈ ಬಾರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದ್ದು, ಮೂರು ಕ್ಷೇತ್ರದ ಸಾಧಕರನ್ನ ಗುರುತಿಸಿ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಮಂಗಳೂರು ವಿವಿ ಉಪಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ( P Subrahmanya Yadapadithaya) ಹೇಳಿದ್ದಾರೆ. 

ಶಿಕ್ಷಣ, ಸಾಮಾಜಿಕ ಸೇವೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ಮಪತ್ನಿ‌ ಹೇಮಾವತಿ ಹೆಗ್ಗಡೆ (Hemavathi v heggade), ಸಾಮಾಜಿಕ ಸೇವೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹರಿಕೃಷ್ಣ ಪುನರೂರು (Harikrishna Punaroor), ಕಲಾಕ್ಷೇತ್ರದಲ್ಲಿ ಸಿನಿಮಾ ಮತ್ತು ತುಳು ರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ಗೆ (Devdas Kapikad) ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಶನಿವಾರ ಮಂಗಳೂರು ವಿವಿಯ 40ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಸೇರಿ ಗಣ್ಯರು ಭಾಗಿಯಾಗಲಿದ್ದಾರೆ.

ಹೇಮಾವತಿ ಹೆಗ್ಗಡೆಯವರ ಬಗ್ಗೆ: ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರು 1951 ಎಪ್ರಿಲ್ 2 ರಂದು ಪೆರಾಡಿ ಬೀಡಿನಲ್ಲಿ ರಘುಚಂದ್ರ ಮತ್ತು ಪುಷ್ಪಾವತಿ ಅಮ್ಮ ದಂಪತಿಗೆ ಜನಿಸಿದರು. ಪದವಿಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮುಗಿಸಿದರು. 1972ರ ಡಿಸೆಂಬರ್ 27ರಂದು ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಮದುವೆಯಾದದ್ದು ಅವರ ಜೀವನದ ದೊಡ್ಡ ಅದೃಷ್ಟ. ಧರ್ಮಸ್ಥಳದ ಶ್ರೀಮತಿ ಹೇಮಾವತಿ.ವಿ.ಹೆಗ್ಗಡೆಯವರು ಕರ್ನಾಟಕದ ಲಕ್ಷಾಂತರ ಗ್ರಾಮೀಣ ಮಹಿಳೆಯರ ಪಾಲಿಗೆ ಸ್ಫೂರ್ತಿಯ ಮೂಲ. ಅವರ ದೂರದೃಷ್ಟಿ, ಆಲೋಚನೆಗಳು ಮತ್ತು ವಿವಿಧ ಮಹಿಳಾ ಸಬಲೀಕರಣ ಚಟುವಟಿಕೆಗಳ ಪ್ರಾರಂಭವು ರಾಜ್ಯದ ಗ್ರಾಮೀಣ ಮಹಿಳೆಯರ ಜೀವನದಲ್ಲಿ ಮಹತ್ತರವಾದ ಪರಿವರ್ತನೆಯನ್ನು ಮಾಡಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟ್‌ನ ಟ್ರಸ್ಟಿ. ಪ್ರಸ್ತುತ ಟ್ರಸ್ಟ್ ಕರ್ನಾಟಕ ರಾಜ್ಯದಾದ್ಯಂತ 50 ಲಕ್ಷ ಸದಸ್ಯರನ್ನು ಒಳಗೊಂಡ ಸುಮಾರು 6 ಲಕ್ಷ ಸ್ವಸಹಾಯ ಸಂಘಗಳು/ಜೆಎಲ್‌ಜಿಗಳನ್ನು ಹ್ಯಾಂಡ್‌ಹೋಲ್ಡ್ ಮಾಡುತ್ತಿದೆ ಮತ್ತು ನಿರ್ವಹಿಸುತ್ತಿದೆ. ಇವರು ಪ್ರಾರಂಭಿಸಿದ ಜ್ಞಾನವಿಕಾಸ ಕಾರ್ಯಕ್ರಮವು ಕೇವಲ ಆರ್ಥಿಕ ಸಬಲೀಕರಣವನ್ನು ಮೀರಿ ಗ್ರಾಮದ ಮಹಿಳೆಯರ ಸಮಗ್ರ ಸಬಲೀಕರಣಕ್ಕಾಗಿ ಒಂದು ಅನನ್ಯ ಕಾರ್ಯಕ್ರಮವಾಗಿದೆ. ಪ್ರಸ್ತುತ 8,853 ಜ್ಞಾನವಿಕಾಸ ಕೇಂದ್ರದ ಮೂಲಕ 4,25,039 ಮಹಿಳೆಯರು ಸಬಲರಾಗುತ್ತಿದ್ದಾರೆ.

ಎಸ್.ಡಿ.ಎಂ ಯೋಗ ಮತ್ತು ನೇಚರ್ ಕ್ಯೂರ್ ಆಸ್ಪತ್ರೆಯ ಟ್ರಸ್ಟಿ. ಶಾಂತಿವನ ಟ್ರಸ್ಟ್: ಶಾಂತಿವನ ಟ್ರಸ್ಟ್, ಆರೋಗ್ಯ ರಕ್ಷಣೆಯ ಸಾಂಪ್ರದಾಯಿಕ ಭಾರತೀಯ ಪ್ರಕೃತಿ ಚಿಕಿತ್ಸಾ ವ್ಯವಸ್ಥೆಯನ್ನು ಪರಿಶೀಲಿಸುವ ಮತ್ತು ಜನಪ್ರಿಯಗೊಳಿಸುವ ಮತ್ತು ನೈತಿಕ ಶಿಕ್ಷಣವನ್ನು ಪ್ರಚಾರ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ನ ಟ್ರಸ್ಟಿ: ರಾಜ್ಯಾದ್ಯಂತ ಇರುವ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವನ್ನು ಟ್ರಸ್ಟ್ ಕೈಗೆತ್ತಿಕೊಳ್ಳುತ್ತಿದೆ. ಜನತಾ ಶಿಕ್ಷಣ ಸಮಿತಿ, ಧಾರವಾಡದ ಟ್ರಸ್ಟಿ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಟ್ರಸ್ಟ್ ನ ಆಡಳಿತ ಮಂಡಳಿ ಸದಸ್ಯರು. ಇದು ಕರ್ನಾಟಕ ರಾಜ್ಯದಲ್ಲಿ ಕಳೆದ 40 ವರ್ಷಗಳಿಂದ ಆರೋಗ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ಶಿಕ್ಷಣವನ್ನು ನೀಡುತ್ತಿದೆ. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಆಡಳಿತ ಮಂಡಳಿ.

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ: ಸಿರಿ (ಎ ಸೆಕ್ಷನ್ 25 ಕಂಪನಿ) ಎಂದು ಜನಪ್ರಿಯವಾಗಿ 2001 ರಲ್ಲಿ "ಕೃಷಿಯೇತರ ವಲಯ" ದಲ್ಲಿ ಗುಂಪು ಆಧಾರಿತ ಜೀವನೋಪಾಯ ಚಟುವಟಿಕೆಗಳನ್ನು ಉತ್ತೇಜಿಸಲು ಗ್ರಾಮೀಣ ಮಹಿಳೆಯರಿಗೆ ಅವಕಾಶಗಳನ್ನು ಒದಗಿಸಲು ಪ್ರಾರಂಭಿಸಲಾಯಿತು. 

ದೇವದಾಸ್ ಕಾಪಿಕಾಡ್ ಬಗ್ಗೆ: ತುಳುನಾಡಿನ ಶ್ರೇಷ್ಠ ಕಲಾವಿದ, ತುಳು ರಂಗಭೂಮಿ ಮತ್ತು ತುಳು ಚಿತ್ರರಂಗದ ನಟ, ಅದ್ಭುತ ಬರಹಗಾರ, ನಿರ್ದೇಶಕ, ಕಥೆಗಾರ, ಗೀತರಚನೆಕಾರ, ಗಾಯಕ, ನಿರ್ಮಾಪಕ, ಹಾಸ್ಯನಟ, ಮತ್ತು ತುಳುನಾಡಿನಾದ್ಯಂತ ವ್ಯಾಪಕವಾಗಿ ಅಭಿಮಾನಿ ವರ್ಗ ಗಳಿಸಿರುವ ಕಲಾವಿದ.‌ 1964ರ ಜುಲೈ 1ರಂದು ಮಂಗಳೂರು ತಾಲೂಕಿನ ಸಜಿಪ ಎಂಬ ಪುಟ್ಟ ಊರಿನಲ್ಲಿ ಜನನ. ತುಳು ನಾಟಕ ಮತ್ತು ಚಲನಚಿತ್ರೋದ್ಯಮದ ತಾರೆ. 1989ರಲ್ಲಿ ಮಂಗಳೂರಿನ ಶಕ್ತಿನಗರದಲ್ಲಿ ನಡೆದ “ಬಲೇ ಚಾ ಪರ್ಕ” ಎಂಬ ನಾಟಕ ಪ್ರದರ್ಶನ ಇವರ ಬದುಕಿಗೆ ತಿರುವು ನೀಡಿ, “ಚಾ ಪರ್ಕ” ಎಂಬ ತಂಡ ಕಟ್ಟಿಕೊಂಡು ನಾಟಕ ಪ್ರದರ್ಶನ ನೀಡಿದ್ದಾರೆ.  

ತುಳು ರಂಗಭೂಮಿಯಲ್ಲಿ ಸುಮಾರು 55 ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ ಜಗತ್ತಿನಾದ್ಯಂತ 8000 ಕ್ಕೂ ಹೆಚ್ಚು ಪ್ರದರ್ಶನಗಳು ಮತ್ತು 55 ನಾಟಕಗಳನ್ನು ಅಭಿನಯಿಸಿ ನಿರ್ಮಿಸಿದ್ದಾರೆ. ಸುಮಾರು 30 ವರ್ಷಗಳಿಂದ ಬಹುತೇಕ ಎಲ್ಲ ಯುವ ಕಲಾವಿದರ ಅಚ್ಚುಮೆಚ್ಚಿನ ಮಾಸ್ಟರ್ ಆಗಿ ಹೊಸ ಮತ್ತು ಯುವ ಕಲಾವಿದರಿಗೆ ಅವಕಾಶವನ್ನು ಒದಗಿಸಿದ ನಿಜವಾದ ವಾಸ್ತುಶಿಲ್ಪಿ ಮತ್ತು ಗಾಡ್ ಫಾದರ್ ಆಗಿರೋ ಕಲಾವಿದ. ತುಳು ರಂಗಭೂಮಿ ಮತ್ತು ಚಲನಚಿತ್ರೋದ್ಯಮಕ್ಕೆ ನೀಡಿದ ಉತ್ತಮ ಕೊಡುಗೆಗಳನ್ನು ಗುರುತಿಸಿ "ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ" ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸಂದಿದೆ. ಆಡು ಮುಟ್ಟದ ಸೊಪ್ಪಿಲ್ಲ" ಎಂಬ ಪ್ರಸಿದ್ಧ ಗಾದೆಯಂತೆ, ಕಾಪಿಕಾಡ್ ಮುಟ್ಟದ ಕ್ಷೇತ್ರವಿಲ್ಲ ಎಂದು ತೋರುತ್ತದೆ. ನಟನೆ, ನಿರ್ದೇಶನ, ಹಾಡುಗಾರಿಕೆ, ಸಾಹಿತ್ಯ, ಬರವಣಿಗೆ, ಕಥೆ ಹೇಳುವುದು, ನಿರ್ಮಾಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದ್ದಾರೆ. 

ಹರಿಕೃಷ್ಣ ಪುನರೂರು ಬಗ್ಗೆ: ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ  ಧರ್ಮದರ್ಶಿ ಎಂಬ ಬಿರುದನ್ನು ಪಡೆದಿರುವ ವ್ಯಕ್ತಿ ದಕ್ಷಿಣ ಕನ್ನಡದ ಹರಿಕೃಷ್ಣ ಪುನರೂರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಎನ್ನುವ ಹೆಸರಲ್ಲೇ ಅಲ್ಲಿನ ಜನ ಅವರನ್ನು ಗುರುತಿಸುತ್ತಾರೆ. ವಾಸುದೇವರಾವ್-ಲಕ್ಷ್ಮಿ ಅಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಇವರು ಹೋಟೆಲ್ ಉದ್ಯಮಿಯಾಗಿ ವೃತ್ತಿರಂಗಕ್ಕೆ ಕಾಲಿಟ್ಟು ಉದ್ಯಮದಲ್ಲಿ ಮುನ್ನಡೆ ಸಾಧಿಸಿ ಇಂಡಿಯನ್ ಆಯಿಲ್ ವಿತರಕರಾಗಿ ಬೆಳವಣಿಗೆ ಕಂಡಿದ್ದರು.  ಅದರಿಂದ ಬಂದ ಶ್ರೀಮಂತಿಕೆಯನ್ನು ಸಮಾಜೋದ್ಧಾರಕ್ಕಾಗಿ  ಶಿಕ್ಷಣ ಕಲಾಭಿವೃದ್ಧಿಗೆ ಸದಾ ಶ್ರಮಿಸಿ ಅರ್ಥ ವಿನಿಯೋಗ ಮಾಡಿದ್ದಾರೆ.

ಬಡಕೂಲಿಕಾರ ಮಕ್ಕಳಿಗೆ ಶಾಲೆ ನಿರ್ಮಿಸಿಕೊಟ್ಟಿದ್ದಾರೆ. ಮೂಲ್ಕಿ ಶಿಕ್ಷಣ ಸಂಸ್ಥೆ, ಶಾರದಾ ಶಿಕ್ಷಣ ಸಂಸ್ಥೆ, ನೇತ್ರ ಚಿಕಿತ್ಸಾ ಕೇಂದ್ರ, ನೃತ್ಯಕಲಾ ಸಂಸ್ಥೆ ಮೊದಲಾದ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಬ್ಯಾಂಕ್ ಮತ್ತು ಉದ್ಯಮ ಸಂಸ್ಥೆ, ಪರಿರಕ್ಷಣ ಸಂಘ, ಅರಣ್ಯ ಪೋಷಣೆ ಸಂಸ್ಥೆ, ಭಾರತ ಸೇವಾದಳ, ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನ, ಯಕ್ಷಭಾರತ ಮತ್ತು ಸಹಕಾರ ಸಂಸ್ಥೆಗಳು, ಲಯನ್ಸ್ ಸಂಸ್ಥೆ ಮೊದಲಾದವುಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ.  ವಸತಿಹೀನರಿಗೆ, ಅಂಗಹೀನರಿಗೆ, ವೃದ್ಧರಿಗೆ ವಸತಿ ನಿರ್ಮಾಣ ಇವರ ಇನ್ನೊಂದು ದೊಡ್ಸ ಸಾಧನೆ.
ಸಾಹಿತ್ಯ ಚಟುವಟಿಕೆಗಳಲ್ಲಿ ಸದಾಸಕ್ತರಾದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 2001 ರಿಂದ 2004ರವರೆಗೆ ಶ್ರಮಿಸಿದ್ದಾರೆ. ಸಾಹಿತ್ಯ, ಧರ್ಮ, ಕಲೆ ಮೂರರಲ್ಲೂ ಸಮಾನಾಸಕ್ತರಾಗಿ ಶ್ರದ್ಧೆಯಿಂದ ದುಡಿದ ಕೀರ್ತಿ ಇವರದ್ದಾಗಿದೆ.

ಪುನರೂರು ಅವರು ತಮ್ಮ ಅಧಿಕಾರವಧಿಯಲ್ಲಿ 6000ಕ್ಕೂ ಹೆಚ್ಚು ಸದಸ್ಯರನ್ನು ಪರಿಷತ್ತಿಗೆ ಸೇರಿಸಿದರು. ತಾಲ್ಲೂಕು ಜಿಲ್ಲಾ ಸಮ್ಮೇಳನಗಳಿಗೆ ಹಣ ಬಿಡುಗಡೆ ಮಾಡಲು ಯೋಜನೆಯನ್ನು ಸರ್ಕಾರದ ಮುಂದೆ ಮಂಡಿಸಿದರು. ಜಿಲ್ಲಾ ಅಧ್ಯಕ್ಷರು ಪರಿಷತ್ತಿಗೆ ಬಂದು ಹೋಗಲು ಉಚಿತ ಬಸ್‍ಪಾಸ್ ವ್ಯವಸ್ಥೆಯನ್ನು ಸಾರಿಗೆ ಸಂಸ್ಥೆಯಿಂದ ಮಾಡಿಸಿದರು. ಎಸ್. ಎಸ್. ಎಲ್. ಸಿ.ಯಲ್ಲಿ ಅತ್ಯುನ್ನತ ಅಂಕಗಳಿಸಿದವರಿಗೆ ಕನ್ನಡದಲ್ಲಿ ಡಾಕ್ಟರೇಟ್ ಪಡೆದವರಿಗೆ ಸನ್ಮಾನ ಮಾಡುವ ವ್ಯವಸ್ಥೆ ಮಾಡಿದರು. ಜಿಲ್ಲಾ ಸಮ್ಮೇಳನಗಳ ಜತೆಗೆ ತಾಲ್ಲೂಕು, ಹೋಬಳಿ, ಗ್ರಾಮ, ಮಟ್ಟದ ಸಮ್ಮೇಳನಗಳನ್ನು ನಡೆಸಿದರು. ದತ್ತಿನಿಧಿಗಳನ್ನು ಹೆಚ್ಚಿಸಿದ ಅವರು ಪುಸ್ತಕ ಭಂಡಾರದಲ್ಲಿ ಗಣಕೀಕರಣ ವ್ಯವಸ್ಥೆ ಮಾಡಿದರು. ಅಚ್ಚುಕೂಟವನ್ನು ಅಭಿವೃದ್ಧಿಗೊಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?