
ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ರಾಜ್ಯದಿಂದ ಗುರುವಾರ ಅಧಿಕೃತವಾಗಿ ನಿರ್ಗಮನವಾಗಿದ್ದು, ಇದರ ಬೆನ್ನಲ್ಲೇ ದಕ್ಷಿಣ ಒಳನಾಡಿನ ವಿವಿಧೆಡೆ ಮಳೆಯೊಂದಿಗೆ ಹಿಂಗಾರು ಪ್ರವೇಶವಾಗಿದೆ. ಹಾಸನ, ಚಿಕ್ಕಮಗಳೂರು, ಕೊಡಗು ಸೇರಿ ರಾಜ್ಯದ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಅ.16ರಿಂದ 21ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಗುಡುಗು ಸಹಿತ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಅ.16ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಮೈಸೂರು, ಶಿವಮೊಗ್ಗ, ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವಿವಿಧೆಡೆ ಸಾಧಾರಣ ಮತ್ತು ಕೆಲವೆಡೆ ಭಾರಿ ಮಳೆಯಾಗಲಿದೆ.
ಇನ್ನು ಅ.17ರಿಂದ ಅ.21ರ ವರೆಗೆ ಉತ್ತರ ಒಳನಾಡಿನ ದಾವಣಗೆರೆ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಗುರುವಾರದಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಹಾಸನ, ಚಿಕ್ಕಮಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರದ ವಿವಿಧೆಡೆ ಉತ್ತಮ ಮಳೆಯಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಕರಾವಳಿ ಜಿಲ್ಲೆಯಲ್ಲಿ ಅಕ್ಟೋಬರ್ 15ರ ರಾತ್ರಿ ಅಲ್ಲಲ್ಲಿ ಮಳೆ ಹನಿ ಹಾಕಿದ್ದು, ಅಕ್ಟೋಬರ್ 16ರಿಂದ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದೆ.
ನಗರದಲ್ಲಿ ಗುರುವಾರ ಸಂಜೆ ಬಿರುಸಿನ ಮಳೆಯಾಗಿದ್ದು, ತಗ್ಗು ಪ್ರದೇಶಗಳು, ರಸ್ತೆಗಳಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ದಿಢೀರ್ ಸುರಿದ ಮಳೆಯಿಂದ ಮನೆಗೆ ತೆರಳುತ್ತಿದ್ದ ಸಾರ್ವಜನಿಕರು ಮಳೆಗೆ ಸಿಲುಕಿದರು.
ವೈಟ್ಫೀಲ್ಡ್, ಶಾಂತಿನಗರ, ಸಾರಕ್ಕಿ ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಬೆನ್ನಿಗಾನಹಳ್ಳಿ, ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಪ್ಯಾಲಸ್ ಗುಟ್ಟಹಳ್ಳಿ, ಟೌನ್ಹಾಲ್, ಅಶೋಕ ಪಿಲ್ಲರ್, ಆಚಾರ್ಯ ಲೇಔಟ್, ಎಂ.ಜಿ.ರಸ್ತೆ, ಶಾಂತಿನಗರ, ಕಮೀಷನರೆಟ್ ರಸ್ತೆ, ಸಿಲ್ಕ್ಬೋರ್ಡ್ ಮೆಟ್ರೋ ನಿಲ್ದಾಣ ಸೇರಿದಂತೆ ಹಲವೆಡೆ ರಸ್ತೆಗಳು, ಫ್ಲೈಓವರ್, ಅಂಡರ್ಪಾಸ್ಗಳು ಜಲಾವೃತಗೊಂಡಿದ್ದವು. ಆನಂದರಾವ್ ವೃತ್ತದ ಬಳಿಯ ಒಳಚರಂಡಿಯ ಮ್ಯಾನ್ಹೋಲ್ ಉಕ್ಕಿ ಹರಿದ ಪರಿಣಾಮ ಅಪಾರ ಪ್ರಮಾಣದ ಗಲೀಜು ನೀರು ಹರಿದು ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು.
ಸಾರಕ್ಕಿಯಲ್ಲಿ ಗರಿಷ್ಠ 40 ಮಿ.ಮೀ, ಶಾಂತಿನಗರ 38, ಶ್ರೀನಗರದಲ್ಲಿ 22 ಮಿ.ಮೀ ಮಳೆಯಾಗಿದೆ. ದೀಪಾಂಜಲಿ ನಗರ 22, ಎಚ್ಎಎಲ್ ವಿಮಾನ ನಿಲ್ದಾಣ 20, ಮಹದೇವಪುರ 13, ವರ್ತೂರು 18, ಎ. ನಾರಾಯಣಪುರ 14, ದೇವಸಂದ್ರದಲ್ಲಿ 14, ಉಲ್ಲಾಳ 6.5 ಮಿ.ಮೀ ಮಳೆಯಾಗಿದೆ. ಶುಕ್ರವಾರವೂ ನಗರದ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ