ಬೆಂಕಿಯಂತಹ ಬರಗಾಲದಲ್ಲೂ ರಾಜ್ಯದಲ್ಲಿ ಮಾಯದಂಥ ಮಳೆ ಬಂತಣ್ಣ! ಕರಾವಳಿ, ಮಲೆನಾಡಲ್ಲಿ ಪುನರ್ವಸು ಮಳೆ ಅಬ್ಬರ । 12 ತಾಲೂಕಿನ ಶಾಲೆಗಳಿಗಿಂದು ರಜೆ ಘೋಷಣೆ!

Kannadaprabha News   | Kannada Prabha
Published : Jul 07, 2026, 06:03 AM IST
Heavy rainfall in the Malnad and coastal regions Karnataka school holiday declared for 13 taluks today

ಸಾರಾಂಶ

ಬರಗಾಲದ ಬಿಸಿಯ ನಡುವೆಯೂ ರಾಜ್ಯದಲ್ಲಿ ಮಾಯದಂತಹ ಮಳೆ ಶುರುವಾಗಿದೆ. ಕೊಡಗು ಸೇರಿ ಮಲೆನಾಡು, ಕರಾವಳಿ ಭಾಗದಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದೆ. ಪರಿಣಾಮವಾಗಿ ನದಿಗಳಲ್ಲಿ ನೀರು ಬರುತ್ತಿದ್ದು, ಜಲಾಶಯಗಳಿಗೆ ಅಲ್ಪಪ್ರಮಾಣದ ಒಳಹರಿವು ಆರಂಭವಾಗಿದೆ. ಇಂದು ಯಾವ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ?

ಬೆಂಗಳೂರು (ಜು.7) ಬರಗಾಲದ ಬಿಸಿಯ ನಡುವೆಯೂ ರಾಜ್ಯದಲ್ಲಿ ಮಾಯದಂತಹ ಮಳೆ ಶುರುವಾಗಿದೆ. ಕೊಡಗು ಸೇರಿ ಮಲೆನಾಡು, ಕರಾವಳಿ ಭಾಗದಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದೆ. ಪರಿಣಾಮವಾಗಿ ನದಿಗಳಲ್ಲಿ ನೀರು ಬರುತ್ತಿದ್ದು, ಜಲಾಶಯಗಳಿಗೆ ಅಲ್ಪಪ್ರಮಾಣದ ಒಳಹರಿವು ಆರಂಭವಾಗಿದೆ. ಮತ್ತೊಂದೆಡೆ, ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದು ಬೆಳಗಾವಿಯ 7 ಸೇತುವೆಗಳು ಮುಳುಗಡೆಯಾಗಿವೆ. ಆಲಮಟ್ಟಿ ಅಣೆಕಟ್ಟೆಯ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ.

ಇಂದು ಕೂಡ ಮಳೆ ಹವಾಮಾನ ಇಲಾಖೆ ಮುನ್ಸೂಚನೆ

ಈ ನಡುವೆ, ಮಂಗಳವಾರ ಹಾಗೂ ಬುಧವಾರ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ದಾಂಡೇಲಿ, ಬೆಳಗಾವಿ ಜಿಲ್ಲೆಯ ಬೆಳಗಾವಿ ಹಾಗೂ ಖಾನಾಪುರ ಸೇರಿ 12 ತಾಲೂಕಿನ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಸೋಮವಾರ ಕೂಡ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕುಗಳ ಶಾಲೆಗಳಿಗೆ ನೀಡಲಾಗಿತ್ತು.

ನದಿ ಪ್ರವಾಹ ಆಗುಂಬೆ ಸಮೀಪ ಅನಾಹುತ

ಈ ನಡುವೆ, ಆಗುಂಬೆ ಸಮೀಪದ ಕೇಳೂರು ಗ್ರಾಮದಲ್ಲಿ ಮಾಲತಿ ನದಿಯ ಪ್ರವಾಹದಲ್ಲಿ ವೃದ್ಧನೊಬ್ಬ ತೇಲಿಹೋಗಿದ್ದಾನೆ. ಚಿಕ್ಕಮಗಳೂರಿನ ಮಲೆಮನೆ ಹಾಗೂ ಕೊಡಗಿನ ಬೇಟೊಳಿಯಲ್ಲಿ ಮರ ಬಿದ್ದು ಮಹಿಳೆಯರಿಬ್ಬರು ಗಾಯಗೊಂಡಿದ್ದರೆ, ಉಡುಪಿಯ ವಾರಂಬಳ್ಳಿಯಲ್ಲಿ ಶಾಲೆಯ ಮೇಲ್ಛಾವಣಿಯ ಹೆಂಚು ಬಿದ್ದು ವಿದ್ಯಾರ್ಥಿನಿಯೊಬ್ಬಳು ಗಾಯಗೊಂಡಿದ್ದಾಳೆ.

ಕೃಷ್ಣಾ ನದಿಗೆ 84 ಸಾವಿರ ಕ್ಯುಸೆಕ್‌:

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಬೆಳಗಾವಿ ಸುತ್ತಮುತ್ತ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ 84 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ 7 ಸೇತುವೆಗಳು ಜಲಾವೃತಗೊಂಡಿವೆ. ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ರಾಜ್ಯ ಹೆದ್ದಾರಿ ಮೇಲೆ ಬೃಹತ್ ಮರ ಉರುಳಿ ಬಿದ್ದು, ಬೆಳಗಾವಿ-ಗೋವಾ ರಸ್ತೆ ಸಂಪರ್ಕ ಸುಮಾರು ಎರಡು ತಾಸು ಸ್ಥಗಿತಗೊಂಡಿತ್ತು. ಬೆಳಗಾವಿಯ ಭಾಗ್ಯನಗರ 3ನೇ ಕ್ರಾಸ್‌ನಲ್ಲಿ ಮರ ಬಿದ್ದು ಕಾರೊಂದು ಸಂಪೂರ್ಣ ಜಖಂಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಇದೇ ವೇಳೆ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿಯೂ ಮಳೆಯಾಗುತ್ತಿದೆ.

ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಚುಂಚನಕಟ್ಟೆ ಸಮೀಪದ ಧನುಷ್ಕೋಟಿ ಜಲಪಾತ ಮೈದುಂಬಿ ಹರಿಯುತ್ತಿದೆ. ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ 4,291 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟ 81.55 ಅಡಿಗೆ ಏರಿದೆ. ಶೃಂಗೇರಿಯಲ್ಲಿ ತುಂಗಾ ನದಿಯ ಪ್ರವಾಹಕ್ಕೆ ನದಿ ತೀರದ ಕಪ್ಪೆಶಂಕರ ದೇಗುಲ ಮುಳುಗಿದೆ. ತುಂಗಾ ಡ್ಯಾಂ ಭರ್ತಿಯಾದ ಹಿನ್ನೆಲೆಯಲ್ಲಿ ಸಿಂಗಟಾಲೂರು ಬ್ಯಾರೇಜ್‌ಗೆ 6,600 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಇದೇ ವೇಳೆ, ಮಂಗಳೂರು-ಶೃಂಗೇರಿ ಸಂಪರ್ಕ ರಸ್ತೆಯಲ್ಲಿ ಗುಡ್ಡ ಕುಸಿತ ಸಂಭವಿಸಿದೆ.

ಶಿವಮೊಗ್ಗದಲ್ಲಿ ಮಳೆ ಅಬ್ಬರ:

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತಿದ್ದು, ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಕೇಳೂರು ಗ್ರಾಮದಲ್ಲಿ ಮಾಲತಿ ನದಿಯ ಪ್ರವಾಹದಲ್ಲಿ ರಾಮಪ್ಪ (62) ಎಂಬುವರು ತೇಲಿ ಹೋಗಿದ್ದಾರೆ. ತೋಟದಿಂದ ಮನೆಗೆ ಮರಳುವಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಲೆಮನೆ ಸಮೀಪದ ತೋಟವೊಂದರಲ್ಲಿ ಮರಕಸಿ ಮಾಡುತ್ತಿದ್ದ ಪುಷ್ಪ (45) ಎಂಬುವರ ಮೇಲೆ ಮರ ಬಿದ್ದು ಅವರ ಎಡಗೈ ತುಂಡಾಗಿದೆ. ಕೊಡಗಿನ ವಿರಾಜಪೇಟೆ ಸಮೀಪದ ಬೇಟೊಳಿಯಲ್ಲಿ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಸಿಂಧು ಎಂಬುವರು ಗಾಯಗೊಂಡಿದ್ದಾರೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯಲ್ಲಿ ಶಾಲೆಯ ಮೇಲ್ಚಾವಣಿಯ ಹೆಂಚು ಬಿದ್ದು ವಿದ್ಯಾರ್ಥಿನಿಯೊಬ್ಬಳ ಕಾಲಿಗೆ ಗಾಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಅಪರೂಪದ ಎಂಜಿನಿಯರಿಂಗ್ ಮೈಲಿಗಲ್ಲು ಸಾಧಿಸಿದ MEIL
ಬಂಗಾರದ ವಂಚನೆ ಆರೋಪಿ ಐಶ್ವರ್ಯ ಗೌಡಗೆ ಹೈಕೋರ್ಟ್‌ ಬಿಗ್ ರಿಲೀಫ್: 5 ಕೇಸುಗಳ ಖುಲಾಸೆಗೆ ಇಲ್ಲಿವೆ ಕಾರಣ!