ವಾಯುಭಾರ ಕುಸಿತ: ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ

By Kannadaprabha NewsFirst Published Nov 7, 2021, 6:17 AM IST
Highlights

*   ಇನ್ನೂ 2 ದಿನ ವಾಯುಭಾರ ಕುಸಿತದ ಎಫೆಕ್ಟ್
*   ಮಲೆನಾಡು, ದಕ್ಷಿಣದ ಜಿಲ್ಲೆಗಳಲ್ಲಿ ವರ್ಷಧಾರೆ
*   ನಾಡಿದ್ದಿನಿಂದ ವರುಣನ ಅಬ್ಬರ ಇಳಿಮುಖ ಸಾಧ್ಯತೆ
 

ಬೆಂಗಳೂರು(ನ.07):  ರಾಜ್ಯದ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾನುವಾರ ಹಾಗೂ ಸೋಮವಾರ ಮಳೆಯ ಅಬ್ಬರ ಇರಲಿದೆ. ಮಂಗಳವಾರದ ಬಳಿಕ ರಾಜ್ಯಾದ್ಯಂತ ಮಳೆ ಕಡಿಮೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(Indian Meteorological Department) ಹೇಳಿದೆ. 

ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ(Airway collapse), ಮೇಲ್ಮೈ ಸುಳಿಗಾಳಿ, ತಮಿಳುನಾಡಿನ(Tamil Nadu) ಕರಾವಳಿಯಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ಪೂರ್ವ ಮಾರುತದ ‘ಟ್ರಫ್‌’ಗಳು ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮಳೆಗೆ ಕಾರಣವಾಗಿದ್ದು, ಇದರ ಪ್ರಭಾವ ಇನ್ನೆರಡು ದಿನ ಇರಲಿದೆ. ಭಾನುವಾರ ಬೆಂಗಳೂರು(Bengaluru) ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಮಲೆನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಒಂದೆರಡು ಕಡೆ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ‘ಯೆಲ್ಲೊ’ ಅಲರ್ಟ್‌ ನೀಡಲಾಗಿದೆ. ಸೋಮವಾರ ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಲಿದೆ. ಉಳಿದಂತೆ ರಾಜ್ಯದ (Karnataka) ಇತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Yellow Alert: ಬೆಂಗ್ಳೂರಲ್ಲಿ 3 ದಿನ ಗುಡುಗು ಸಹಿತ ಭಾರೀ ಮಳೆ

ಉಳಿದಂತೆ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿಯ ತೆಂಕನಿಡಿಯೂರಿನಲ್ಲಿ 18.3 ಸೆಂ.ಮೀ., ಕಡೆಕ್ಕಾರ್‌ 14 ಸೆಂ.ಮೀ., ಉಡುಪಿ 11 ಸೆಂ.ಮೀ. ಮಳೆ ಸುರಿದಿದೆ. ಉತ್ತರ ಕರ್ನಾಟಕದ ಬೀದರ್‌, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ಬಳ್ಳಾರಿ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ರಾಜ್ಯದಲ್ಲಿ ಸೆಪ್ಟೆಂಬರ್‌ನಿಂದ ಈಚೆಗೆ ಉತ್ತಮ ಮಳೆಯಾಗುತ್ತಿದೆ. ನವೆಂಬರ್‌ನಲ್ಲಿಯೂ ಇದೇ ಪ್ರವೃತ್ತಿ ಮುಂದುವರಿದಿದ್ದು, ಉತ್ತರ ಒಳನಾಡಿನ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ.

ಚಾಮರಾಜನಗರದಲ್ಲಿ ವರ್ಷಧಾರೆ

ವಾಯುಭಾರ ಕುಸಿತ ಹಿನ್ನೆಲೆ ಜಿಲ್ಲಾದ್ಯಂತ ಮಳೆಯಾಗುತ್ತಿದ್ದು, ಶನಿವಾರ ರಾತ್ರಿ ಭರ್ಜರಿ ಮಳೆಯಾಗಿದೆ. ಮಳೆಯಿಂದಾಗಿ ಜಿಲ್ಲೆಯ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಮಳೆಯ ನೀರು ಹೊಳೆಯಂತೆ ಹರಿದ ಪರಿಣಾಮ ಪಾದಚಾರಿಗಳು ಮತ್ತು ವಾಹನ ಸವಾರರು ಪರದಾಡಬೇಕಾಯಿತು.

ಸತತ ಮಳೆಯಿಂದಾಗಿ ಮಹದೇಶ್ವರನ ಬೆಟ್ಟದ ಕಲ್ಯಾಣಿ ಭರ್ತಿಯಾಗಿದ್ದು, ಗೋಪಾಲಸ್ವಾಮಿ ಬೆಟ್ಟಮತ್ತು ಬಿಳಿಗಿರಿರಂಗನ ಬೆಟ್ಟಹಾಗೂ ಬಂಡೀಪುರದಲ್ಲಿ ಸುರಿದ ಮಳೆಗೆ ಹಳ್ಳಕೊಳ್ಳ ತುಂಬಿ ಹರಿದ ಹಿನ್ನೆಲೆ ಪ್ರವಾಸಿಗರು ಪರದಾಡಬೇಕಾಯಿತು.

ಇದರೊಟ್ಟಿಗೆ, ಲಾಂಗ್‌ ರೈಡಿಗೆಂದು ಬಿಳಿಗಿರಿರಂಗನ ಬೆಟ್ಟ, ಬಂಡೀಪುರ, ಭರಚುಕ್ಕಿಗೆ ಆಗಮಿಸಿದವರು ಮಳೆಯಿಂದ ತೊಂದರೆ ಅನುಭವಿಸಬೇಕಾಯಿತು. ಜಿಲ್ಲಾ ಕೇಂದ್ರದಲ್ಲೂ ಸಂಜೆ ಜೋರು ಮಳೆಯಾದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು, ಜೋಡಿ ರಸ್ತೆ, ಸತ್ತಿ ರಸ್ತೆಯಲ್ಲಿ ಎರಡು ಅಡಿ ನೀರು ನಿಂತಿದ್ದರಿಂದ ವಾಹನ ಸವಾರರು ಪರಿದಾಡಿದರು.

2 ದಿನ ರಾಜ್ಯದಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಮಹದೇಶ್ವರ ಬೆಟ್ಟದ ಕಲ್ಯಾಣಿ ಭರ್ತಿ

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸುತ್ತಮುತ್ತ ಸುರಿದ ಭಾರಿ ಮಳೆಯಿಂದ ಮಹದೇಶ್ವರ ಬೆಟ್ಟದ ಕಲ್ಯಾಣಿ ಹಾಗೂ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಕಲ್ಯಾಣಿಯಿಂದ ಸರಾಗವಾಗಿ ನೀರು ಹರಿದು ಹೋಗಲು ತೂಬು ಇದ್ದರೂ ತೂಬು ಚಿಕ್ಕದಾದ್ದರಿಂದ ಚಿಕ್ಕ ಕಲ್ಯಾಣಿ ಹಾಗೂ ನಂದನವನದಲ್ಲಿ ಸಾಮಾನ್ಯ ಗರಿಷ್ಠ ಮಟ್ಟಕ್ಕಿಂತ ಸುಮಾರು 5 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ. ಬೆಟ್ಟದಲ್ಲಿ ಎಲ್ಲೇ ಮಳೆ ಬಿದ್ದರೂ ದೊಡ್ಡ ಕಲ್ಯಾಣಿ ಮೊದಲು ತುಂಬುವುದು, ನಂತರ ಚಿಕ್ಕ ಕಲ್ಯಾಣಿ ಮತ್ತು ಮಜ್ಜನಬಾವಿ ಇರುವ ನಂದನವನ ತುಂಬುವುದು. ಸಾಮಾನ್ಯವಾಗಿ ವರ್ಷಕ್ಕೆ 1 ಅಥಾವ 2 ಬಾರಿ ತುಂಬುವ ಈ ಕಟ್ಟೆಗಳು ಈ ಬಾರಿಯ ವರ್ಷಧಾರೆಗೆ 3 ರಿಂದ 4 ಬಾರಿ ತುಂಬಿದೆ. ಇದರಿಂದ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟಅಭಿವೃದ್ಧಿ ಆಗುವ ನಿರೀಕ್ಷೆ ಇದೆ.

ಶೃಂಗೇರಿ: ಸಿಡಿಲು, ಮಳೆ

ತಾಲೂಕಿನಾದ್ಯಂತ ಶನಿವಾರ ಮತ್ತೆ ಮಳೆ ಮುಂದುವರಿಯಿತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದಿಂದಲೇ ತಾಲೂಕಿನ ಕೆಲವೆಡೆ ಮಳೆ ಆರಂಭಗೊಂಡಿತು. ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ದಟ್ಟಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆ ಬಿದ್ದಿತು.

ಸಂಜೆ ವೇಳೆ ಪಟ್ಟಣ ಸೇರಿದಂತೆ ನೆಮ್ಮಾರು, ಕೆರೆಕಟ್ಟೆ, ಕಿಗ್ಗಾ, ಮೆಣಸೆ, ಬೇಗಾರು, ಅಡ್ಡಗೆದ್ದೆ ಸಹಿತ ತಾಲೂಕಿನಾದ್ಯಂತ ಉತ್ತಮ ಮಳೆ ಸುರಿಯಲಾರಂಭಿಸಿತು. ಸಂಜೆಯಿಂದ ಆರಂಭಗೊಂಡ ಮಳೆ ಎಡಬಿಡದೇ ನಿರಂತರವಾಗಿ ಸುರಿಯಲಾರಂಭಿಸಿತು. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಧ್ಯಾಹ್ನದಿಂದ ಮಳೆಗಾಲದ(Rainy season) ವಾತಾವರಣ ಉಂಟಾಗಿದೆ.

click me!