* 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
* ಉಡುಪಿಯಲ್ಲಿ 11 ಸೆಂಮೀ ಮಳೆ
* ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ಶೇ.90ಕ್ಕಿಂತ ಹೆಚ್ಚು ಭರ್ತಿ
ಬೆಂಗಳೂರು(ಆ.30): ರಾಜ್ಯವ್ಯಾಪಿ ಮುಂಗಾರು ಮಳೆ ಚುರುಕಾಗಿದೆ. ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಮೂರು ದಿನ ರಾಜ್ಯವ್ಯಾಪಿ ಉತ್ತಮ ಮಳೆಯ ನಿರೀಕ್ಷೆಯಿದೆ.
ದಕ್ಷಿಣ ಒಳನಾಡಿನ ಜಿಲ್ಲೆಯಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಮತ್ತು ಉತ್ತರ ಒಳನಾಡಿನ ಬಹುತೇಕ ಎಲ್ಲ ಕಡೆ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ಈಗಾಗಲೇ ಶೇ.90ಕ್ಕಿಂತ ಹೆಚ್ಚು ಭರ್ತಿಯಾಗಿದೆ.
ಕರಾವಳಿ ತೀರ ಪ್ರದೇಶದಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 40 ರಿಂದ 50 ಕಿಮೀ ಇರುವ ಸಾಧ್ಯತೆಯಿದ್ದು ಸೋಮವಾರ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ನಂದಿ ಬೆಟ್ಟ ಮಾರ್ಗದಲ್ಲಿ ಭಾರಿ ಭೂ ಕುಸಿತ : ಸಂಚಾರ ಸಂಪೂರ್ಣ ಬಂದ್
ಉಡುಪಿಯಲ್ಲಿ 11 ಸೆಂಮೀ ಮಳೆ:
ಭಾನುವಾರ ಬೆಳಗ್ಗೆ 8-30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿಯ ಕೋಟದಲ್ಲಿ 11 ಸೆಂಮೀ , ಕೊಪ್ಪಳದ ಬೇವೂರಲ್ಲಿ 10 ಸೆಂಮೀ, ಬೆಳ್ತಂಗಡಿ 9 ಸೆಂಮೀ, ಮಾಣಿ 8 ಸೆಂಮೀ, ಉಡುಪಿಯ ಕುಂದಾಪುರ, ಕಾರ್ಕಳ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ತಲಾ 7 ಸೆಂಮೀ, ಬಾಗಲಕೋಟೆಯ ಬೀಳಗಿ 6 ಸೆಂಮೀ, ಬಾಗಲಕೋಟೆಯ ಹುನಗುಂದ, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ.