ಬೆಂಗಳೂರು (ಆ.30): ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ವರದಿ) ವರದಿಯನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲದ ಬಿಜೆಪಿ ನಾಯಕರು ವರದಿ ಸೋರಿಕೆಯಾಗಿದೆ, ವೈಜ್ಞಾನಿಕವಾಗಿಲ್ಲ ಎಂಬ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಸೋರಿಕೆ ಬಗ್ಗೆ ಖಚಿತ ಮಾಹಿತಿ ಇದ್ದರೆ ಅದರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ತನಿಖೆ ನಡೆಸಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಭಾನುವಾರ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಸೋರಿಕೆ ಆಗಿದೆ ಎನ್ನಲಾದ ಜಾತಿಗಣತಿ ವರದಿಯ ಅಂಶಗಳೇ ಮೂಲ ವರದಿಯಲ್ಲಿ ಇವೆ ಎನ್ನುವುದನ್ನು ಬಿಜೆಪಿ ಅಷ್ಟೊಂದು ವಿಶ್ವಾಸದಿಂದ ಹೇಗೆ ಹೇಳಲು ಸಾಧ್ಯ? ಸರ್ಕಾರದ ಬಳಿ ಇರಬೇಕಾದ ಮೂಲ ವರದಿ ಬಿಜೆಪಿಯ ರಾಜ್ಯ ಕಚೇರಿಯಲ್ಲಿದೆಯೇ? ಮುಖ್ಯಮಂತ್ರಿಗಳ ಕಚೇರಿಯಿಂದ ಅದು ಸೋರಿಕೆಯಾಗಿದೆಯೇ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಾತಿಗಣತಿ ವರದಿಯನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಪೂರ್ಣಗೊಳಿಸಿ ಸ್ವೀಕರಿಸಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಅಂಕಿ ಅಂಶಗಳ ಮಾಹಿತಿ ಸಂಗ್ರಹವಾಗಿದ್ದರೂ ವಿಶ್ಲೇಷಣೆಯ ಕೆಲಸ ಪೂರ್ಣಗೊಂಡಿರದ ಕಾರಣ ಸಾಧ್ಯವಾಗಿರಲಿಲ್ಲ. ಜಾತಿ ಗಣತಿ ವರದಿಯನ್ನು ನಮ್ಮ ಪಕ್ಷದ ನಾಯಕರು ವಿರೋಧಿಸಿದ್ದರು ಎನ್ನುವುದು ಕಪೋಲ ಕಲ್ಪಿತ ಆರೋಪ. ಯಾರು? ಯಾವಾಗ? ವಿರೋಧಿಸಿದ್ದರು ಎನ್ನುವುದನ್ನು ಬಿಜೆಪಿ ನಾಯಕರು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
'ಡಿಕೆಶಿ ಮತ್ತು ಸಿದ್ದು ದೆಹಲಿ ಪೋಟೋ ಫ್ರೆಂಡ್ಸ್'
ಜಾತಿ ಗಣತಿ ವರದಿ ಸೋರಿಕೆಯಾಗಿದ್ದರೂ ಅದರ ಪಾವಿತ್ರ್ಯವೇನು ಕಳೆದುಹೋಗುವುದಿಲ್ಲ. ಸೋರಿಕೆಯಿಂದಾಗಿ ಅಪರಾಧಿಗಳು ಓಡಿಹೋಗಲು ಅದೇನು ಅಪರಾಧದ ತನಿಖಾ ವರದಿಯೇ? ಅದೊಂದು ಸಮೀಕ್ಷಾ ವರದಿ. ಪರಿಶೀಲನೆ ನಡೆಯಬೇಕಾಗಿರುವುದು ಸಮೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ. ಅದರ ಬಗ್ಗೆ ಚರ್ಚೆ ನಡೆಯಲಿ ಎಂದಿದ್ದಾರೆ.
ಕೇಂದ್ರ ತಪ್ಪು ಸರಿಪಡಿಸಿಕೊಂಡಿದೆ: ಸಂವಿಧಾನದ 123ನೇ ತಿದ್ದುಪಡಿ ಮೂಲಕ ಕಿತ್ತುಕೊಂಡದ್ದನ್ನು ಕೇಂದ್ರ ಬಿಜೆಪಿ ಸರ್ಕಾರ 127ನೇ ತಿದ್ದುಪಡಿ ಮೂಲಕ ಮರಳಿ ನೀಡಿದೆ. ಇದೇನು ಹಿಂದುಳಿದ ಜಾತಿಗಳಿಗೆ ಮಾಡಿರುವ ಉಪಕಾರ ಅಲ್ಲ. ಮಾಡಿರುವ ತಪ್ಪನ್ನು ಒಪ್ಪಿ ಸರಿಪಡಿಸಿದೆಯಷ್ಟೇ ಎಂದು ಒಬಿಸಿ ಮೀಸಲು ತಿದ್ದುಪಡಿ ಪ್ರಸ್ತಾಪಿಸಿ ಸಿದ್ದರಾಮಯ್ಯ ಹೇಳಿದ್ದಾರೆ.