* ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಭರ್ಜರಿ ಮಳೆ
* ಕರಾವಳಿಯಲ್ಲಿ ಇಂದು ಆರೆಂಜ್, ನಾಳೆ ಯೆಲ್ಲೋ ಅಲರ್ಟ್
* ಮೇ 18ರವರೆಗೆ ಚಂಡಮಾರುತದ ಪರಿಣಾಮ ಮಳೆ
ಬೆಂಗಳೂರು(ಮೇ.16): ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ‘ತೌಕ್ಟೆ’ ಚಂಡಮಾರುತದಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ, ಮಲೆನಾಡು ಪ್ರದೇಶಗಳಾದ ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಹಾಗೂ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಗಳಲ್ಲಿ ಈಗಾಗಲೇ ಬಿರುಸಿನ ಮಳೆಯಾಗುತ್ತಿದೆ. ಉಳಿದಂತೆ ರಾಜ್ಯದ ವಿವಿಧೆಡೆಯೂ ಸಾಧಾರಣ ಮಳೆಯಾಗುತ್ತಿದೆ. ಮೇ 18ರವರೆಗೆ ಚಂಡಮಾರುತದ ಪರಿಣಾಮ ಮಳೆ ಸುರಿಯಲಿದೆ. ಅದರ ನಂತರವೂ ಪೂರ್ವ ಮುಂಗಾರು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಚನ್ನಬಸವನಗೌಡ ಎಸ್. ಪಾಟೀಲ್ ತಿಳಿಸಿದ್ದಾರೆ.
ಅರಬ್ಬಿ ಸಮುದ್ರದಲ್ಲಿ 3 ಬೋಟು ದುರಂತ: ಐವರು ನಾಪತ್ತೆ
ಸದ್ಯ ತೌಕ್ಟೆ ಚಂಡಮಾರುತ ಅರಬ್ಬಿ ಸಮುದ್ರದ ಮಧ್ಯೆ ಭಾಗದಲ್ಲಿದೆ. ಇದು ತೀವ್ರಗೊಳ್ಳುತ್ತಾ ಉತ್ತರದ ಕಡೆ ಚಲಿಸುವ ಸಾಧ್ಯತೆ ಇದೆ. ಹೀಗಾಗಿ, ಕರಾವಳಿ ಪ್ರದೇಶಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. 16ರಂದು ‘ಆರೆಂಜ್’ಹಾಗೂ 17,18ರಂದು ‘ಯೆಲ್ಲೋ’ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ 19 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಧಾರವಾಡ, ಹಾವೇರಿ, ಬೆಳಗಾವಿ ಹಾಗೂ ಗದಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ 30ರಿಂದ 40 ಕಿ.ಮೀ. ವೇಗದಲ್ಲಿ ಸಮುದ್ರದ ಅಲೆಗಳು ಹಾಗೂ ಗಾಳಿ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ ಎಂದು ತಿಳಿಸಿದ್ದಾರೆ.