ರಾಜ್ಯದ ಹಲವೆಡೆ ಭಾರಿ ಮಳೆ : ಮೈಸೂರಿನಲ್ಲಿ 1 ಸಾವು

By Kannadaprabha NewsFirst Published Oct 17, 2021, 8:17 AM IST
Highlights
  • ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಮತ್ತು ಹಳೇ ಮೈಸೂರಿನ ಕೆಲಭಾಗಗಳಲ್ಲಿ ಶನಿವಾರವೂ ಭಾರೀ ಮಳೆ
  • ಭಾರೀ ಮಳೆಯಾಗಿದ್ದು, ಮಳೆ ಸಂಬಂಧಿ ಕಾರಣಕ್ಕೆ ವ್ಯಕ್ತಿಯೊಬ್ಬರು ಮೃತ

ಬೆಂಗಳೂರು (ಅ.17):  ಅರಬ್ಬಿ ಸಮುದ್ರದಲ್ಲಿ (Arabian sea) ವಾಯುಭಾರ ಕುಸಿತದ ಪರಿಣಾಮ ಕರಾವಳಿ (Coastal) ಮತ್ತು ಹಳೇ ಮೈಸೂರಿನ (Old Mysuru) ಕೆಲಭಾಗಗಳಲ್ಲಿ ಶನಿವಾರವೂ ಭಾರೀ ಮಳೆಯಾಗಿದ್ದು, ಮಳೆ ಸಂಬಂಧಿ ಕಾರಣಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

"

ಮೈಸೂರು ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ (HD Kote) ತಾಲೂಕಿನ ಸಮೀಪದ ಜಿ.ಬಿ. ಸರಗೂರು ಗ್ರಾಮದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ಗೋಡೆ ಕುಸಿದು ಬೋರೆಗೌಡ(55) ಎಂಬವರು ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯ (chamarajanagar District) ಗುಂಡ್ಲುಪೇಟೆ ತಾಲೂಕಿನ ಬೇಗೂರಲ್ಲಿ ನಾಲ್ಕೈದು ಮನೆಗಳಿಗೆ ಮಳೆ ನೀರು ನುಗ್ಗಿದ್ದು ಒಂದು ಮನೆಯ ಗೋಡೆ ಸಂಪೂರ್ಣ ಕುಸಿದಿದೆ. ರಾಜ್ಯ ರಾಜಧಾನಿ ಬೆಂಗಳೂರು (Bengaluru), ಮಂಡ್ಯ (Mandya) ಜಿಲ್ಲೆಗಳ ಹಲವೆಡೆ ಉತ್ತಮ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

Bengaluru ನಿಲ್ಲದ ವರುಣನ ಆರ್ಭಟ, ಹೊಳೆಯಂತಾಗಿವೆ ರಸ್ತೆಗಳು, ವಾಹನ ಸವಾರರ ಪರದಾಟ

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ (Heavy Rain). ಮಂಗಳೂರು ನಗರದಲ್ಲಿ ಸಂಜೆ ಬಳಿಕ ಸುರಿದ ಭಾರಿ ಮಳೆಗೆ ಕುದ್ರೋಳಿ ಸಮೀಪದ ಅಳಕೆಯಲ್ಲಿ ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ನಗರದ ಕೊಟ್ಟಾರ ಚೌಕಿ ಮತ್ತು ಪಂಪ್‌ವೆಲ್‌ಗಳಲ್ಲಿ (Pumpwell) ನೀರು ನಿಂತು ವಾಹನ (Vehicle) ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಬೆಳ್ತಂಗಡಿ ತಾಲೂಕಿನಲ್ಲಿ ಶನಿವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪ ರಸ್ತೆಗೆ ಚರಂಡಿ ನೀರು ನುಗ್ಗಿ ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ರಸ್ತೆಗೆ ನೀರು ನುಗ್ಗಿ ಯಾವುದೇ ವಾಹನಗಳ ಸಂಚಾರ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ರಾಜ್ಯ ಹೆದ್ದಾರಿ ನದಿಯಾಗಿ ಮಾರ್ಪಟ್ಟಿತ್ತು. ಧರ್ಮಸ್ಥಳದಿಂದ (Dharmasthala) ಉಜಿರೆವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಏರ್‌ಪೋರ್ಟ್ ಟರ್ಮಿನಲ್‌ಗೆ ನುಗ್ಗಿದ ನೀರು, ಟ್ರಾಕ್ಟರ್ ಏರಿದ ನಿಲ್ದಾಣ ತಲುಪಿದ ಪ್ರಯಾಣಿಕರು!

ಇನ್ನು ಉಡುಪಿಯಲ್ಲೂ (Udupi) ಸಂಜೆ ಬಳಿಕ ಉತ್ತಮ ಮಳೆ ಸುರಿದಿದ್ದು ಜಿಲ್ಲಾಡಳಿತದಿಂದ ಯಲ್ಲೋ ಅಲರ್ಟ್‌ (Yellow Alert) ಘೋಷಿಸಲಾಗಿದೆ. ಬೀದರ್‌ (Bidar) ಮತ್ತು ಯಾದಗಿರಿ (Yadgir) ಜಿಲ್ಲೆಗಳ ಕೆಲಭಾಗಗಳಲ್ಲೂ ಉತ್ತಮ ಮಳೆ ಸುರಿದಿದೆ.

ಇಂದಿನಿಂದ ಮಳೆ ಇಳಿಕೆ ಸಂಭವ

 ಕಳೆದ ಕೆಲವು ದಿನಗಳಿಂದ ಅಬ್ಬರಿಸುತ್ತಿರುವ ಮಳೆ ಭಾನುವಾರದಿಂದ ಮಳೆ ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ (Weather Department) ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಕಡಿಮೆ ಒತ್ತಡ ಪ್ರದೇಶ, ಮೇಲ್ಮೈ ಸುಳಿಗಾಳಿ, ಲಕ್ಷದ್ವೀಪ ಭಾಗ ಹಾಗೂ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಆಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಅದರಲ್ಲಿಯೂ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ.

ಶನಿವಾರ ರಾಜ್ಯದ ಕೊಡಗು, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಅತಿ ಭಾರಿ ಮಳೆಯಾಗಿದೆ. ಉಳಿದಂತೆ ದಕ್ಷಿಣ ಒಳನಾಡಿನ ಬೆಂಗಳೂರು ನಗರ (Bengaluru) ಮತ್ತು ಗ್ರಾಮಾಂತರ, ಕೋಲಾರ (Kolar), ಚಿಕ್ಕಬಳ್ಳಾಪುರ, ರಾಮನಗರ (Ramanagara), ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ (Shivamogga), ಚಿಕ್ಕಮಗಳೂರು (Chikkamagaluru) ಮತ್ತು ಹಾಸನ (Hassan) ಜಿಲ್ಲೆಯ ಅಲ್ಲಲ್ಲಿ ಭಾರಿ ಮಳೆಯಾಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿಯೂ ಹೆಚ್ಚು ಮಳೆ ಸುರಿದಿದೆ.

ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ಕಡಿಮೆ ಮಳೆಯಾಗಿದೆ. ಆದರೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಹಾಸನದಲ್ಲಿ 11 ಸೆಂಮೀ, ಬೆಂಗಳೂರಿನ ಜ್ಞಾನಭಾರತಿ 7 ಸೆಂಮೀ, ದಕ್ಷಿಣ ಕನ್ನಡದ ಬೆಳ್ತಂಗಡಿ ಮತ್ತು ಬೆಂಗಳೂರಿನ ಎಚ್‌ಎಎಲ್‌ನಲ್ಲಿ ತಲಾ 6 ಸೆಂಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

click me!