
ರಾಕೇಶ್ ಎನ್.ಎಸ್.
ಬೆಂಗಳೂರು (ಮೇ. 7): ರಾಜ್ಯದೆಲ್ಲೆಡೆ ಮುಂಗಾರು ಪೂರ್ವ ಮಳೆ ಭರ್ಜರಿಯಾಗಿ ಸುರಿದಿದೆ. ಅದರಲ್ಲೂ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಇನ್ನು 17 ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದೆ. ಕೇವಲ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಮಳೆ ಕೊರತೆ ಉಂಟಾಗಿದೆ. ಸದ್ಯದ ಹವಾಮಾನ ಪರಿಸ್ಥಿತಿ ಗಮನಿಸಿದರೆ ಮುಂದಿನ ಒಂದು ವಾರಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.
ಭಾರತೀಯ ಹವಾಮಾನ ಕೇಂದ್ರ ನೀಡಿರುವ ಮಾಹಿತಿಯಂತೆ ಮಾಚ್‌ರ್ 1 ರಿಂದ ಮೇ 4ರವರೆಗೆ ದಕ್ಷಿಣ ಕನ್ನಡ (ಶೇ. 180), ಉಡುಪಿ (ಶೇ. 161), ಉತ್ತರ ಕನ್ನಡ (158), ಚಾಮರಾಜನಗರ (ಶೇ.134), ಧಾರವಾಡ (ಶೇ.133), ಶಿವಮೊಗ್ಗ (ಶೇ. 128), ದಾವಣಗೆರೆ (ಶೇ.111), ಹಾವೇರಿ (ಶೇ.107) ಬೆಂಗಳೂರು ಗ್ರಾಮಾಂತರ (ಶೇ. 102) ಜಿಲ್ಲೆಗಳಲ್ಲಿ ಕಳೆದೊಂದು ತಿಂಗಳಿನಿಂದ ಭರ್ಜರಿ ಮಳೆಯಾಗಿದೆ. ಈ ಜಿಲ್ಲೆಗಳಲ್ಲಿ ವಾಡಿಕೆಗಿಂತ ದುಪ್ಟಟ್ಟು ಮಳೆ ಬಿದ್ದಿದೆ. ಇನ್ನು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ನಗರ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ವಾಡಿಗೆಗಿಂತ ಅತ್ಯಧಿಕ ಮಳೆಯಾಗಿದೆ. ವಿಜಯಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಮೈಸೂರು ಮತ್ತು ತುಮಕೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಸುರಿದಿದೆ. ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಾಡಿಕೆಯ ಪ್ರಮಾಣದ ಮಳೆ ಬಿದ್ದಿದೆ.
ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. ಒಟ್ಟಾರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಳೆಯಾಗಿದೆ. ವಾಡಿಕೆಯಂತೆ ರಾಜ್ಯದಲ್ಲಿ ಈ ಅವಧಿಯಲ್ಲಿ 49.9 ಮಿ.ಮೀ ಮಳೆಯಾಗುತ್ತಿದ್ದರೆ ಈ ವರ್ಷ 80.2 ಮಿ.ಮೀ ಮಳೆಯಾಗಿದೆ. ತನ್ಮೂಲಕ ವಾಡಿಕೆಗಿಂತ ಶೇ. 61ರಷ್ಟುಹೆಚ್ಚು ಮಳೆಯಾಗಿದೆ.
ಮೇ 8ರಿಂದ ಮತ್ತೆ ಮಳೆ: ರಾಜ್ಯದ ಭೂ ಭಾಗದಲ್ಲಿ ಮಳೆ ತರುವ ವಿದ್ಯಮಾನಗಳು ಸಕ್ರಿಯವಾಗಿದ್ದುದ್ದರಿಂದ ಹೆಚ್ಚು ಮಳೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಮೇಲ್ಮೈ ಸುಳಿಗಾಳಿ, ಕಡಿಮೆ ಒತ್ತಡ ಪ್ರದೇಶ ಮತ್ತು ಟ್ರಫ್‌ಗಳು ನಿರಂತರವಾಗಿ ನಿರ್ಮಾಣವಾಗುತ್ತಿದೆ. ಮೇ 8ಕ್ಕೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಅದರ ಪ್ರಭಾವದಿಂದ ನಾಲ್ಕೈದು ದಿನ ಮಳೆಯಾಗುವ ನಿರೀಕ್ಷೆ ಇದೆ. ಜೂನ್ ಮೊದಲ ವಾರ ರಾಜ್ಯದ ಕರಾವಳಿಗೆ ಮುಂಗಾರು ಅಪ್ಪಳಿಸಲಿದೆ. ಕಳೆದ ಬಾರಿಯು ಮುಂಗಾರು ಪೂರ್ವ ಮಳೆ ಉತ್ತಮವಾಗಿತ್ತು.
Monsoon Rains ಭಾರತದಲ್ಲಿ ಈ ವರ್ಷ ಸರಾಸರಿ ಮಾನ್ಸೂನ್!
ಜಲಾಶಯಗಳಲ್ಲಿಯೂ ಉತ್ತಮ ನೀರಿನ ಸಂಗ್ರಹ: ಪಶ್ಚಿಮ ಘಟ್ಟಸೇರಿದಂತೆ ಜಲ ಮೂಲಗಳಿರುವ ಕಡೆ ಚೆನ್ನಾಗಿ ಮಳೆ ಸುರಿಯುತ್ತಿರುವುದರಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕೂಡ ಚೆನ್ನಾಗಿದೆ. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಮೇಲುಸ್ತುವಾರಿ ಪ್ರಾಧಿಕಾರ ನೀಡಿದ ಮಾಹಿತಿಯಂತೆ ರಾಜ್ಯದ ಕಾವೇರಿ ಮತ್ತು ಕೃಷ್ಣಾ ನದಿ ಕೊಳ್ಳದ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ನೀರಿನ ಸಂಗ್ರಹವಿದೆ. ಕೃಷ್ಣಾ ಕೊಳ್ಳದ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಅಲಮಟ್ಟಿಮತ್ತು ನಾರಾಯಣಪುರ ಜಲಾಶಯಗಳಲ್ಲಿ ಕಳೆದ ವರ್ಷ 97.31 ಟಿಎಂಸಿ ನೀರಿನ ಸಂಗ್ರಹಿವಿದ್ದರೆ ಈ ವರ್ಷ 129.27 ಟಿಎಂಸಿ ನೀರಿನ ಸಂಗ್ರಹವಿದೆ. ಘಟಪ್ರಭ ಕೊಳ್ಳ ಹೊರತು ಪಡಿಸಿ ಉಳಿದೆಡೆ ಕಳೆದ ವರ್ಷಕ್ಕಿಂತ ಹೆಚ್ಚು ನೀರಿನ ಸಂಗ್ರಹವಿದೆ.
Monsoon: ಈ ವರ್ಷ ಸಾಮಾನ್ಯ ಮುಂಗಾರು, ವರದಿ ನೀಡಿದ ಸ್ಕೈಮೆಟ್
ಅದೇ ರೀತಿ ಕಾವೇರಿ ಕೊಳ್ಳದ ಹಾರಂಗಿ, ಕಬಿನಿ, ಕೆ.ಆರ್. ಎಸ್. ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷ ಈ ಹೊತ್ತಿಗೆ 38.64 ಟಿಎಂಸಿ ನೀರಿನ ಸಂಗ್ರಹವಿದ್ದರೆ ಈ ಬಾರಿ 56.42 ಟಿಎಂಸಿ ನೀರಿನ ಸಂಗ್ರಹವಿದೆ.
ಪ್ರದೇಶ ವಾಡಿಕೆಮಳೆ ಸುರಿದ ಮಳೆ ವ್ಯತ್ಯಾಸ (ಶೇ)
ದಕ್ಷಿಣ ಒಳನಾಡು 6.58 10.75 63
ಉತ್ತರ ಒಳನಾಡು 3.68 5.07 38
ಮಲೆನಾಡು 8.14 14.08 73
ಕರಾವಳಿ 4.93 11.29 129
*ಮಳೆ ಪ್ರಮಾಣ ಸೆಂಟಿ ಮೀಟರ್‌ಗಳಲ್ಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ