ವಾಯುಭಾರ ಕುಸಿತ ಎಫೆಕ್ಟ್, ರಾಜ್ಯದಲ್ಲಿ ವರುಣ ಮೃದಂಗ!

By Kannadaprabha NewsFirst Published Oct 15, 2020, 7:30 AM IST
Highlights

ರಾಜ್ಯದಲ್ಲಿ ವರುಣ ಮೃದಂಗ!| ಉತ್ತರ ಕರ್ನಾಟಕದ 6 ಜಿಲ್ಲೆಗಳಲ್ಲಿ ಎಲ್ಲೆಲ್ಲೂ ನೀರು, ನೀರು, ನೀರು...| ಬಂಗಾಳಕೊಲ್ಲಿ ವಾಯುಭಾರ ಕುಸಿತ ಎಫೆಕ್ಟ್| ಉತ್ತರ ಕರ್ನಾಟಕ, ಕರಾವಳಿಯಲ್ಲಿ ಭಾರೀ ಮಳೆ| ನೂರಾರು ಗ್ರಾಮ, ಕೃಷಿ ಭೂಮಿ ಜಲಾವೃತ| ಮನೆ, ರಸ್ತೆ, ಸೇತುವೆಗಳಿಗೆ ಹಾನಿ

ಬೆಂಗಳೂರು(ಅ.15): ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಉತ್ತರ ಕರ್ನಾಟಕದ ಆರು ಜಿಲ್ಲೆಗಳು ಹಾಗೂ ಕರಾವಳಿ ಭಾಗದಲ್ಲಿ ಮಂಗಳವಾರ ರಾತ್ರಿಯಿಂದೀಚೆಗೆ ಭರ್ಜರಿ ಮಳೆಯಾಗಿದೆ. ಕಾಗಿಣಾ, ಘಟಪ್ರಭಾ, ಡೋಣಿ, ಭೀಮಾ ಸೇರಿ ಉತ್ತರ ಕರ್ನಾಟಕದ ಅನೇಕ ನದಿಗಳು, ಪ್ರಮುಖ ಹಳ್ಳಗಳು ಅಪಾಯಮಟ್ಟಮೀರಿ ಹರಿಯುತ್ತಿದ್ದು, 113ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಭತ್ತ, ಜೋಳ, ಕಬ್ಬು, ಹತ್ತಿ ಸೇರಿದಂತೆ 2.68 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ನಾಲ್ವರು ಬಲಿಯಾಗಿದ್ದು, 325ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಉತ್ತರ ಕರ್ನಾಟಕ ಭಾಗದ ಒಟ್ಟು 10 ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಇದರಲ್ಲಿ ಯಾದಗಿರಿ, ಕಲಬುರಗಿ, ವಿಜಯಪುರ, ಬಳ್ಳಾರಿ, ಬೆಳಗಾವಿ, ಬಾಗಲಕೋಟೆಯಲ್ಲಿ ಅಬ್ಬರದಿಂದ ಮಳೆ ಸುರಿದಿದೆ. ಬೀದರ್‌, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಸಾಧಾರಣ ಮಳೆಬಿದ್ದಿದೆ. ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಕರಾವಳಿ ಜಿಲ್ಲೆಗಳ ಮೇಲೂ ಆಗಿದ್ದು, ಉಡುಪಿ, ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಡೀ ರಾತ್ರಿ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸಮುದ್ರದಲ್ಲಿ ಭಾರೀ ಅಲೆ ಏಳುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಬೋಟ್‌ಗಳೆಲ್ಲ ತೀರದಲ್ಲೇ ಲಂಗರು ಹಾಕಬೇಕಾಯಿತು.

ಪ್ರವಾಹಕ್ಕೆ ಕೊಚ್ಚಿಹೋದ ಇಬ್ಬರು: ಮಳೆ ಸಂಬಂಧಿ ಅನಾಹುತಕ್ಕೆ ಕಲಬುರಗಿಯಲ್ಲಿ ಇಬ್ಬರು ಸೇರಿ ರಾಜ್ಯದಲ್ಲಿ ಒಟ್ಟು ನಾಲ್ಕು ಮಂದಿ ಬಲಿಯಾಗಿದ್ದಾರೆ. ಕಲಬುರಗಿ ನಗರದಲ್ಲಿ ವಿದ್ಯುತ್‌ ಸ್ಪರ್ಶಿಸಿ ಸುಂದರ ನಗರದ ನಿವಾಸಿ ಭೀಮಾಬಾಯಿ (96), ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ಗೋಡೆ ಕುಸಿದು ಶಂಕ್ರಮ್ಮ ಭೀಮನಗೌಡ್ರ (63), ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ರೈತ ವೆಂಕನಗೌಡ ಸಾಲಿಗೌಡ್ರ (51) ಮಲಪ್ರಭಾ ನದಿದಾಟುವಾಗ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ಭೀಮಾ ನದಿದಾಟುವಾಗ ಭಾಗಣ್ಣ (21) ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ಕಲಬುರಗಿಯಲ್ಲಿ ಮುಸಲಧಾರೆ: ಕಳೆದೈದು ದಿನಗಳಿಂದ ಮಳೆ ಕಾಣುತ್ತಿದ್ದ ಕಲಬುರಗಿಯಲ್ಲಂತೂ ಮಂಗಳವಾರ ರಾತ್ರಿಯಿಂದೀಚೆಗೆ ಮುಸಲಧಾರೆಯೇ ಸುರಿದಿದೆ. ಮಳೆ ಆರ್ಭಟಕ್ಕೆ ನದಿ, ಹಳ್ಳಗಳ ಪಕ್ಕದ 100ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿ ಭಾರೀ ಅನಾಹುತ ಸಂಭವಿಸಿದೆ. ತಗ್ಗುಪ್ರದೇಶದ ಹಲವಡೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಅಪಾಯದಲ್ಲಿ ಸಿಕ್ಕಿಹಾಕಿಕೊಂಡಿದ್ದ 10ಕ್ಕೂ ಹೆಚ್ಚು ಮಂದಿಯನ್ನು ಎನ್‌ಡಿಆರ್‌ಎಫ್‌ ನೆರವಿನಿಂದ ರಕ್ಷಣೆ ಮಾಡಲಾಗಿದೆ. ಕಲಬುರಗಿ ನಗರದ ರಸ್ತೆಗಳಂತು ನದಿಯಂತಾಗಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ಜನ ಪರದಾಡುವಂತಾಗಿದೆ.

ಭಾರೀ ಬೆಳೆ ಹಾನಿ: ಭಾರೀ ಮಳೆಯಿಂದಾಗಿ ಕಲಬುರಗಿಯಲ್ಲಿ ಅತೀ ಹೆಚ್ಚು ಬೆಳೆಹಾನಿಯಾಗಿದ್ದು, 2.47ಲಕ್ಷ ಎಕರೆ, ಯಾದಗಿರಿಯಲ್ಲಿ 4,942 ಎಕರೆ, ಬೆಳಗಾವಿಯಲ್ಲಿ 11 ಸಾವಿರ ಎಕರೆ, ವಿಜಯಪುರದಲ್ಲಿ 2 ಸಾವಿರ ಎಕರೆ, ಬಳ್ಳಾರಿ, ಬಾಗಲಕೋಟೆ ಮತ್ತಿತರ ಕಡೆ 200ಕ್ಕೂ ಅಧಿಕ ಎಕರೆ ಬೆಳೆ ಜಲಾವೃತಗೊಂಡಿದೆ. ಜೋಳ, ಕಬ್ಬು, ಭತ್ತದ ಬೆಳೆಗೆ ಅತೀ ಹೆಚ್ಚು ಹಾನಿಯಾಗಿದೆ. ಇನ್ನೇನು ಮೆಕ್ಕೆಜೋಳ ಬೆಳೆ ಕಟಾವಿಗೆ ಬರಲಿದೆ ಎನ್ನುವಾಗ ಹಲವೆಡೆ ಈ ರೀತಿ ಬೆಳೆದು ನಿಂತ ಬೆಳೆ ನೀರು ಪಾಲಾಗಿರುವುದರಿಂದ ರೈತರು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಮುಳುಗಡೆ, ಮನೆಗಳಿಗೆ ಹಾನಿ: ಮಳೆ, ಪ್ರವಾಹದಬ್ಬರಕ್ಕೆ ಕಲಬುರಗಿಯಲ್ಲಿ 100ಕ್ಕೂ ಹೆಚ್ಚು, ಯಾದಗಿರಿಯಲ್ಲಿ 1 ಗ್ರಾಮ ಜಲಾವೃತವಾಗಿದೆ. ಇನ್ನು ಬೆಳಗಾವಿಯಲ್ಲಿ 188, ಬಾಗಲಕೋಟೆಯಲ್ಲಿ 50, ವಿಜಯಪುರದಲ್ಲಿ 1, ಯಾದಗಿರಿಯಲ್ಲಿ 72, ಗದಗದಲ್ಲಿ 13, ಕಲಬುರಗಿಯಲ್ಲಿ 110ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಘಟಪ್ರಭಾ ನದಿ ದಡದಲ್ಲಿ ಮತ್ತೆ ಆತಂಕ: ಕೆಲ ತಿಂಗಳ ಹಿಂದಷ್ಟೇ ಮಹಾ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿ ಪಾತ್ರದ ಗ್ರಾಮಸ್ಥರು ಮಂಗಳವಾರ ರಾತ್ರಿಯಿಂದ ಆತಂಕದಿಂದಲೇ ದಿನದೂಕುತ್ತಿದ್ದು, ತಗ್ಗುಪ್ರದೇಶದ ಹಲವು ಮಂದಿ ಈಗಾಗಲೇ ಮನೆ-ಮಠ ತೊರೆದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದಾರೆ. ಒಂದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಈಗಾಗಲೇ ಎರಡ್ಮೂರು ಹಳ್ಳಿಗಳಿಗೆ ನೀರು ನುಗ್ಗಿದೆ. ಮುಂದಿನ ಎರಡ್ಮೂರು ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಬೀದರ್‌, ಕಲಬುರಗಿ, ಯಾದಗಿರಿ, ವಿಜಯಪುರದಲ್ಲೂ ತಗ್ಗುಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.

13 ಜಿಲ್ಲೆ: ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆ

113 ಗ್ರಾಮ: ಭಾರೀ ಮಳೆಯಿಂದಾಗಿ ಜಲಾವೃತವಾದ ಹಳ್ಳಿಗಳು

325 ಮನೆ: ಪ್ರವಾಹ ಪರಿಸ್ಥಿತಿಯಿಂದಾಗಿ ಹಾನಿಯಾದ ಮನೆಗಳು

2.7 ಲಕ್ಷ ಎಕರೆ: ಅಂದಾಜು ಬೆಳೆಹಾನಿಯಾದ ಕೃಷಿ ಭೂಮಿ ಪ್ರದೇಶ

click me!