ತಡ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಮರಗಳು ಧರೆಗುರುಳಿದೆ. ಇದರ ಪರಿಣಾಮ ಈ ರಸ್ತೆಗಳಲ್ಲಿ ಭಾರಿ ಜಾಮ್ ಸಂಭವಿಸಿದೆ. ಈ ರಸ್ತೆಗಳಲ್ಲಿ ಸಂಚರಿಸುವ ಸವಾರರು ಬದಲಿ ಮಾರ್ಗ ಉಪಯೋಗಿಸುವುದು ಸೂಕ್ತ.
ಬೆಂಗಳೂರು(ಆ.12) ನಗರದಲ್ಲಿ ಸುರಿದ ಭಾರಿ ಮಳೆಯಿಂದ ಬೆಂಗಳೂರಿನ ಹಲವು ಭಾಗದಲ್ಲಿ ನೀರು ನುಗ್ಗಿದೆ. ರಸ್ತೆಗಳು ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತುಕೊಂಡಿದೆ. ಇತ್ತ ಭಾರಿ ಗಾತ್ರದ ಮರಗಳು ಧರೆಗುರುಳಿದೆ. ಇದರ ಪರಿಣಾಮ ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಕೆಲ ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮೆಜೆಸ್ಟಿಕ್ ಸುತ್ತ ಮುತ್ತ ಭಾರಿ ಮಳೆ ನೀರು ನಿಂತುಕೊಂಡಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ. ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮೆಜೆಸ್ಟಿಕ್ ಸುತ್ತಮುತ್ತ, ನಾಗವಾರ ಜಂಕ್ಷನ್, ಹೆಬ್ಬಾಳ, ಮೇಕ್ರಿ ಸರ್ಕಲ್, ವೀರಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಮಾರತಹಳ್ಳಿ, ಕಲ್ಯಾಣ ನಗರ, ಪುಟ್ಟೇನಹಳ್ಳಿ, ವರ್ತೂರು, ಸಕ್ರ ಆಸ್ಪತ್ರೆ, ಬೆಳ್ಳಂದೂರು ಕಡಗಳಲ್ಲೂ ಟ್ರಾಫಿಕ್ ಜಾಮ್ ಸಂಭವಿಸಿದೆ. ನಾಗಾರ-ಹೆಬ್ಬಾಳ ಔಟರ್ ರಿಂಗ್ ರೋಡ್ ಕೂಡ ಜಲಾವೃತಗೊಂಡಿದೆ. ಹೀಗಾಗಿ ಈ ಪ್ರದೇಶಗಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.
ಕಾರಿನಲ್ಲಿ ಮದುವೆಗೆ ತೆರಳುತ್ತಿದ್ದ ವೇಳೆ ಪ್ರವಾಹಕ್ಕೆ ಸಿಲುಕಿದ ಕುಟುಂಬ, 11 ಮಂದಿ ಪೈಕಿ ಮಗುವಿನ ರಕ್ಷಣೆ!
ನಾಗವಾರ ಜಂಕ್ಷನ್ ಹಾಗೂ ಹೆಬ್ಬಾಳ ನಡುವಿನ ORR ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಎಸ್ಟೀಮ್ ಮಾಲ್‌ನಿಂದ ಮೇಖ್ರಿ ವೃತ್ತದ ಕಡೆಗೆ ಬರುವ ಹೆಬ್ಬಾಳ ಫ್ಲೈ ಓವರ್ ಮೇಲೂ ಟ್ರಾಫಿಕ್ ಜಾಮ್ ಸಂಭವಿಸಿದೆ. ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ರಸ್ತೆಯ ವೀರಸಂದ್ರ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮಲ್ಲೇಶ್ವರದ ಕ್ಲೌಡ್ ನೈನ್ ಆಸ್ಪತ್ರೆ ಬಳಿ ಭಾರಿ ಗಾತ್ರದ ಮರ ಧರೆಗುರುಳಿದೆ. ಇದರ ಪರಿಣಾಮ ವಾಹನ ಸಂಚಾರ ಬಂದ್ ಆಗಿದೆ.
ಗೋವಿಂದರಾಜನಗರದಲ್ಲಿ ಕಾರಿನ ಮೇಲೆ ಮರ ಬಿದ್ದು ಜಖಂ ಗೊಂಡಿದೆ. ತಡರಾತ್ರಿಯಿಂದ ಬೆಳಗ್ಗೆ ಸರಿಸುಮಾರು 7 ಗಂಟೆ ವರೆಗೂ ಮಳೆ ಸುರಿದಿದೆ. ಸದ್ಯ ಜಿಟಿ ಜಿಟಿ ಮಳೆ ಮುಂದುವರಿದಿದೆ. ಮುಂದಿನ ಮೂರರಿಂದ ನಾಲ್ಕು ದಿನ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ಇನ್ನು ಮಾರತಹಳ್ಳಿಯಲ್ಲಿ ಅಪಾರ್ಟ್‌ಮೆಂಟ್ ಒಳಗೆ ನೀರು ನುಗ್ಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದೆ. ಸೊನೆಸ್ಟಾ ಸಿಲ್ವರ್ ಓಕ್ ಅಪಾರ್ಟ್ಮೆಂಟ್‌ಗೆ ನೀರು ನುಗ್ಗಿದ ಪರಿಣಾಮ ಪಕ್ಕದ ಗೋಡೆ ಕುಸಿದುಬಿದ್ದಿದೆ. ಇತ್ತ ನಿರ್ಮಾಣ ಹಂತದ ಕಟ್ಟಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ತಗ್ಗು ಪ್ರದೇಶಗಲ್ಲಿ ನೀರು ನಿಂತುಕೊಂಡು ಅವಾಂತರಗಳು ಸೃಷ್ಟಿಯಾಗಿದೆ.