12 ಜಿಲ್ಲೆಗಳಲ್ಲಿ ಭಾರೀ ಮಳೆ: ಸೇತುವೆ, ದೇಗುಲ ಮುಳುಗಡೆ, 1 ಸಾವು

By Kannadaprabha NewsFirst Published Jul 20, 2023, 3:39 AM IST
Highlights

ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೃಷ್ಣ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂದಗಂಗಾ ಸೇರಿದಂತೆ ಈ ಭಾಗದ ಬಹುತೇಕ ನದಿಗಳ ಮಟ್ಟ ಏರಿಕೆಯಾಗಿದೆ. ಖಾನಾಪುರ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ 12ಕ್ಕೂ ಹೆಚ್ಚು ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಖಾನಾಪುರ ತಾಲೂಕಿನ 50 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. 

ಬೆಂಗಳೂರು(ಜು.20):  ಉತ್ತರ ಒಳನಾಡು, ಮಲೆನಾಡು ಸೇರಿ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದಾದದಹಳ್ಳಿಯಲ್ಲಿ ದೇವಮ್ಮ (63) ಎಂಬುವರು ಹೇಮಾವತಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇದೇ ವೇಳೆ, ಮಳೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಆಗುಂಬೆ​ಯಲ್ಲಿ ಶಾಲೆ​-ಕಾಲೇ​ಜು​ಗ​ಳಿಗೆ ಬುಧವಾರ ರಜೆ ನೀಡಲಾಗಿತ್ತು.

ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೃಷ್ಣ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂದಗಂಗಾ ಸೇರಿದಂತೆ ಈ ಭಾಗದ ಬಹುತೇಕ ನದಿಗಳ ಮಟ್ಟ ಏರಿಕೆಯಾಗಿದೆ. ಖಾನಾಪುರ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ 12ಕ್ಕೂ ಹೆಚ್ಚು ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಖಾನಾಪುರ ತಾಲೂಕಿನ 50 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮಲಪ್ರಭಾ ನದಿ ಪಕ್ಕದಲ್ಲಿರುವ ಹಬ್ಬಾನಟ್ಟಿಮಾರುತಿ ಮಂದಿರ, ಎಂ.ಕೆ.ಹುಬ್ಬಳ್ಳಿ ಬಳಿಯ ಗಂಗಾಂಬಿಕೆ ಐಕ್ಯ ಮಂಟಪ, ಘಟಪ್ರಭಾ ಜಲಾಶಯದ ಹಿನ್ನೀರಿನಲ್ಲಿರುವ ವಿಠ್ಠಲ-ರುಕ್ಮಿಣಿ ಮಂದಿರಗಳು ಜಲಾವೃತಗೊಂಡಿವೆ. ಗೋಕಾಕ ಜಲಪಾತ ಧುಮುಕ್ಕುತ್ತಿದ್ದು, ಸೆಲ್ಪಿಗಾಗಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಜಲಪಾತಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಯಾದಗಿರಿ: ಕೃಪೆ ತೋರದ ವರುಣ, ರೈತರು ಕಂಗಾಲು

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟಮೀರಿ ಹರಿಯುತ್ತಿದ್ದು, ಶೃಂಗೇರಿ ಶಾರದಾಂಬಾ ದೇಗುಲದ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ಮಳೆಗೆ ಮನೆಯ ಚಾವಣಿ ಕುಸಿದು ನಾಲ್ವರು ಗಾಯಗೊಂಡಿದ್ದಾರೆ. ಧಾರವಾಡ ತಾಲೂಕು ಬೋಗೂರು ಸರ್ಕಾರಿ ಶಾಲೆಯ ಸ್ಲಾ್ಯಬ್‌ನ ಪದರ ಕುಸಿದು ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಸರ್ಕಾರಿ ಶಾಲೆಯ ಗೋಡೆಯೊಂದು ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಳೆಯಿಂದಾಗಿ ಹಾಸನ ತಾಲೂಕಿನ ದೋಣಿಗಾಲ್‌ ಬಳಿ ಶಿರಾಡಿಘಾಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವುಂಟಾಗಿದ್ದು, ಮತ್ತಷ್ಟುಭೂಕುಸಿತ ತಡೆಯಲು ಟಿಪ್ಪರ್‌ ಲಾರಿಗಳ ಮೂಲಕ ಮಣ್ಣು ಸುರಿಯಲಾಗುತ್ತಿದೆ. ಮಂಗಳೂರು-ಶಿವಮೊಗ್ಗ ರಾ.ಹೆದ್ದಾರಿಯ ಶಂಕ್ರಾಪುರ ಬಳಿಯೂ ರಸ್ತೆ ಬಿರುಕು ಬಿಟ್ಟಿದೆ. ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮರ ಬಿದ್ದು, 8ಕ್ಕೂ ಹೆಚ್ಚುಗಳು ಮನೆಗಳು ಹಾನಿಗೊಳಗಾಗಿವೆ. ಇದೇ ವೇಳೆ, ದ.ಕನ್ನಡ, ಉಡುಪಿ, ಹಾವೇರಿ, ಕೊಡಗು, ಗದಗ ಜಿಲ್ಲೆಗಳಲ್ಲಿಯೂ ಮಳೆಯಾದ ವರದಿಯಾಗಿದೆ.

click me!