
ಬೆಂಗಳೂರು (ಆ.02): ಆಗಸ್ಟ್ ತಿಂಗಳ ಮೊದಲ ವಾರ ರಾಜ್ಯದ ಕರಾವಳಿ ಮತ್ತು ಒಳನಾಡಿನಲ್ಲಿ ಭರ್ಜರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಂಗಳವಾರದಿಂದ ಶನಿವಾರದವರೆಗೆ ರಾಜ್ಯದ ಹಲವು ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ‘ಆರೆಂಜ್’ ಮತ್ತು ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಆ.6 ಶನಿವಾರದವರೆಗೂ ಅತಿ ಭಾರಿ ಮಳೆಯ ‘ಆರೆಂಜ್ ಅಲರ್ಟ್’ (11ರಿಂದ 20 ಸೆಂ.ಮೀ) ನೀಡಲಾಗಿದೆ.
ಉಳಿದಂತೆ ಮಂಗಳವಾರದಿಂದ ಬುಧವಾರ ಬೆಳಗ್ಗೆ 8.30ರ ತನಕ ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು ಮತ್ತು ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ (6.4 ಸೆಂ. ಮೀ ನಿಂದ 11 ಸೆಂ.ಮೀ) ನೀಡಲಾಗಿದೆ. ಬುಧವಾರದಿಂದ ಗುರುವಾರದವರೆಗೆ ಕಲಬುರಗಿ, ವಿಜಯಪುರ, ಬಾಗಲಕೋಟೆ, ತುಮಕೂರು, ಮೈಸೂರು, ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಗುರುವಾರದಿಂದ ಶುಕ್ರವಾರದವರೆಗೆ ತುಮಕೂರು ಮತ್ತು ರಾಮನಗರ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ಪ್ರಕಟಿಸಲಾಗಿದ್ದು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ಇರಲಿದೆ.
ಮಂಗಳೂರಲ್ಲಿ ಮತ್ತೆ ಕೃತಕ ‘ಜಲಪ್ರಳಯ’: ನರಕಯಾತನೆ ಪಟ್ಟ ಜನತೆ
ಶುಕ್ರವಾರದಿಂದ ಶನಿವಾರದ ತನಕ ಬೀದರ್ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಕಲಬುರಗಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬಳ್ಳಾರಿ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿತ್ತು. ಉತ್ತರ ಒಳನಾಡು ಮತ್ತು ಕರಾವಳಿಯ ಕೆಲವೆಡೆ ಉತ್ತಮ ಮಳೆಯಾಗಿದೆ. ತುಮಕೂರಿನ ವೈ.ಎನ್.ಹೊಸಕೋಟೆ ಮತ್ತು ಕೊಡಗಿನ ಸಂಪಾಜೆಯಲ್ಲಿ ತಲಾ 11 ಸೆಂ.ಮೀ, ಕೊಡಗಿನ ಭಾಗಮಂಡಲ 9. ನಾಪೋಕ್ಲು 8, ಗದಗದ ಬೆಳ್ಳಟ್ಟಿ, ಕೋಲಾರದ ಮುಳಬಾಗಿಲು ತಲಾ 7, ಗದಗದ ಶಿರಹಟ್ಟಿ, ಗದಗ, ರಾಮನಗರದ ಮಾಗಡಿ, ಮಂಡ್ಯದ ಬಸರಾಳು, ತುಮಕೂರಿನ ಕುಣಿಗಲ್ ಮತ್ತು ಗುಬ್ಬಿಯಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ.
ಸಿಎಂ ವೈಮಾನಿಕ ಸಮೀಕ್ಷೆ ಮಳೆ ಅಡ್ಡಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿ ಬೆಟ್ಟದ ವೈಮಾನಿಕ ಸಮೀಕ್ಷೆಯನ್ನು ನಡೆಸುವುದಕ್ಕೆ ಮಳೆ ಅಡ್ಡಿಯಾಯಿತು. ಆನೆಗೊಂದಿಯಲ್ಲಿ ಲ್ಯಾಂಡ್ ಆಗಿದ್ದ ಹೆಲಿಕಾಪ್ಟರ್ ಅಲ್ಲಿಂದ ಕೊಪ್ಪಳಕ್ಕೆ ತೆರಳುವ ವೇಳೆ ಅಂಜನಾದ್ರಿ ಬೆಟ್ಟವನ್ನು ಸುತ್ತಿ ವೈಮಾನಿಕ ಸಮೀಕ್ಷೆ ಮಾಡಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ವೈಮಾನಿಕ ಸಮೀಕ್ಷೆ ನಡೆಸದೇ ನೇರವಾಗಿ ಹೆಲಿಕಾಪ್ಟರ್ ಮೂಲಕ ಕೊಪ್ಪಳಕ್ಕೆ ತೆರಳಿದರು.
Vijayapura: ಡೋಣಿ ನದಿಯಲ್ಲಿ ಭಾರಿ ಪ್ರವಾಹ: ಸೇತುವೆ ಮುಳುಗಡೆಯಾಗಿ ಪ್ರಯಾಣಿಕರ ಪರದಾಟ
ಒಂದು ಹಂತದಲ್ಲಿ ಸುರಿಯುತ್ತಿದ್ದ ಮಳೆಯಿಂದಾಗಿ ಹೆಲಿಕಾಪ್ಟರ್ ಸಂಚಾರ ಕಷ್ಟ. ಹೀಗಾಗಿ ಸಿಎಂ ಬರುವುದೇ ಅನುಮಾನ ಎನ್ನುವ ಮಾತು ಮಧ್ಯಾಹ್ನದ ಹೊತ್ತಿನ ವರೆಗೂ ಕೇಳಿಬಂದಿತು. ಕೊನೆಗೂ ಸಿಎಂ ಆಗಮಿಸಿದರು. ಗಂಗಾವತಿಯಿಂದ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಲ್ಯಾಂಡ್ ಆಗಬೇಕಾಗಿದ್ದ ಹೆಲಿಕಾಪ್ಟರ್ ಮಳೆಯ ಕಾರಣದಿಂದಾಗಿ ಏರೋಡ್ರೋಮ್‌ನಲ್ಲಿ ಲ್ಯಾಂಡ್ ಆಯಿತು. ಅಲ್ಲಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊಪ್ಪಳಕ್ಕೆ ರಸ್ತೆ ಮೂಲಕ ಆಗಮಿಸಿದರು. ಸಿಎಂ ಜತೆ ಸಚಿವರಾದ ಡಾ. ಕೆ. ಸುಧಾಕರ್, ಬೈರತಿ ಬಸವರಾಜ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ