15 ವರ್ಷದಲ್ಲಿ ಒಂದೇ ಕುಟುಂಬದ 7 ಮಂದಿಗೆ ಹೃದಯಾಘಾತ: ಕಾರಣವೇನು?

Kannadaprabha News   | Kannada Prabha
Published : Jul 03, 2025, 07:25 AM IST
heart attack

ಸಾರಾಂಶ

ಅದೊಂದು ಹಸಿರಿನ ಮಧ್ಯದ ಪುಟ್ಟ ದ್ವೀಪದಂತ ಪ್ರದೇಶ. ತಮ್ಮದೇ ತೋಟ- ಹೊಲಗಳಲ್ಲಿ ಬೆವರು ಸುರಿಸಿ ದುಡಿದು ಬದುಕುವ ಕಷ್ಟಜೀವಿಗಳ ತುಂಬು ಕುಟುಂಬವೊಂದು ಅಲ್ಲಿ ನೂರಾರು ವರ್ಷಗಳಿಂದ ನೆಮ್ಮದಿಯಿಂದ ನೆಲೆಸಿದೆ.

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ (ಜು.03): ಅದೊಂದು ಹಸಿರಿನ ಮಧ್ಯದ ಪುಟ್ಟ ದ್ವೀಪದಂತ ಪ್ರದೇಶ. ತಮ್ಮದೇ ತೋಟ- ಹೊಲಗಳಲ್ಲಿ ಬೆವರು ಸುರಿಸಿ ದುಡಿದು ಬದುಕುವ ಕಷ್ಟಜೀವಿಗಳ ತುಂಬು ಕುಟುಂಬವೊಂದು ಅಲ್ಲಿ ನೂರಾರು ವರ್ಷಗಳಿಂದ ನೆಮ್ಮದಿಯಿಂದ ನೆಲೆಸಿದೆ. ಆದರೀಗ, ಆ ನೆಮ್ಮದಿಗೆ ಬೆಂಕಿ ಬಿದ್ದಿದೆ. ‘ಹೃದಯ ಬೇನೆ’ ಎಂಬ ಮಹಾಮಾರಿ ಇಡೀ ಕುಟುಂಬದ ವಂಶವಾಹಿನಿಯನ್ನೇ ನುಂಗಿ ನೀರು ಕುಡಿಯುತ್ತಿದೆ! ಹೌದು! ಈ ಕುಟುಂಬದ ಬರೋಬ್ಬರಿ 7 ಜನ ಈಗಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದು, ನಾಲ್ವರು ಬೈಪಾಸ್‌ ಸರ್ಜರಿ ಮಾಡಿಸಿಕೊಂಡು ತಪಾಸಣೆ, ಚಿಕಿತ್ಸೆ, ಔಷಧಿಯಿಂದ ದಿನದೂಡುತ್ತಿದ್ದಾರೆ!

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಲೋಕಾಪುರ ಹೋಬಳಿಯ ‘ಚೌಡಾಪುರ ತೋಟ’ ಎಂಬ ಪುಟ್ಟ ಊರಿನಲ್ಲಿ ಹೃದಯ ಬೇನೆ ಅಜ್ಜಿ, ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು ಸಾಲು ಸಾಲಾಗಿ ಬಲಿ ಪಡೆಯುತ್ತ ಅಕ್ಷರಶಃ ಕೇಕೆ ಹಾಕುತ್ತಿದೆ. ಕಳೆದ ಒಂದೂವರೆ ದಶಕದಲ್ಲಿ ಆಸ್ಪತ್ರೆ ಸೇರಿ ಅಸುನೀಗಿದ 7 ಮಂದಿಯ ಸಾವಿಗೆ ಹೃದಯಾಘಾತವೇ ಕಾರಣ ಎಂದು ಖಚಿತವಾಗಿದೆ. ಆದರೆ, ಮನೆಯಲ್ಲೇ ಸತ್ತ ಎಷ್ಟೋ ಜನರ ಸಾವಿಗೂ ಇದೇ ಹೃದಯ ಬೇನೆಯೇ ಕಾರಣ ಎನ್ನುವ ಶಂಕೆ ಆ ಕುಟುಂಬದಲ್ಲೀಗ ಬಲವಾಗುತ್ತಿದೆ. ಹಾಗಾಗಿ ಈ ಕುಟುಂಬದ ಎಲ್ಲೂರ ಆಗಾಗ ಇಸಿಜಿ ಮಾಡಿಸಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರಂತೆ.

ಇಡೀ ವಂಶವಕ್ಕೆ ಬೆನ್ನು: ಮೂಲ ಬೇರಿನ ಯಲ್ಲಪ್ಪ-ಯಮನವ್ವ ದಂಪತಿಗೆ ದುರಗಪ್ಪ, ಸಂತಪ್ಪ, ರಾಮಪ್ಪ, ರಾಣಪ್ಪ, ಸಂತವ್ವ, ನೀಲವ್ವ, ಹನುಮವ್ವ ಎಂಬ ಏಳು ಮಕ್ಕಳು. ಎಲ್ಲರದೂ ಮದುವೆ ಮಾಡಿ, ಅವರೆಲ್ಲ ತಮ್ಮದೇ ಸಂಸಾರ ಹೂಡಿ ಆರಾಮಾಗಿದ್ದಾರೆ ಎನ್ನುವ ಹೊತ್ತಿಗೆ ತಾಯಿ ಯಮನವ್ವ ಮಲಗಿದಲ್ಲೇ ಇಹಲೋಕ ತ್ಯಜಿಸಿದ್ದಳು. ವೈದ್ಯರು ಬಂದು ನೋಡಿದಾಗ ಗೊತ್ತಾಗಿದ್ದು ಸೀವಿಯರ್‌ ಹಾರ್ಟ್ ಅಟ್ಯಾಕ್‌! ಮಕ್ಕಳಾದ ಸಂತಪ್ಪ, ರಾಮಪ್ಪ, ರಾಣಪ್ಪ, ಸಂತವ್ವ, ಸಂತಪ್ಪನ ಮಗಳು ಪಾರವ್ವ, ಸಂತವ್ವನ ಮಗ ಕಾಶಪ್ಪ ಸಾಲು ಸಾಲಾಗಿ ಹೃದಯ ಬೇನೆಗೆ ಬಲಿಯಾದರು. ನೀಲವ್ವ ಮತ್ತು ಆಕೆಯ ಹಿರಿಯ ಮಗ ಈರಣ್ಣ, ಮೊಮ್ಮಗ ರಾಜು, ದುರಗಪ್ಪನ ಮೊಮ್ಮಗ ಯಲ್ಲಪ್ಪ, ಹನುಮವ್ವನ ಮೊಮ್ಮಗ ಸಂಗಮೇಶ (15) ಅವರಿಗೆ ಬೈಪಾಸ್‌ ಸರ್ಜರಿ ಆಗಿದೆ.

3 ದಿನದಲ್ಲಿ 2 ಸಾವು: ಹೊಲದ ಬದುವಿನಲ್ಲಿ ದನ ಮೇಯಿಸುತ್ತಿದ್ದ ರಾಣಪ್ಪ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಎಷ್ಟೊತ್ತಾದರೂ ಮನೆಗೆ ಬಾರದ ರಾಣಪ್ಪನನ್ನು ಹುಡುಕಿಕೊಂಡು ಹೋದಾಗ ಸಿಕ್ಕಿದ್ದು ಆತನ ಶವ. ವೈದ್ಯರು ಬಂದು ತಪಾಸಿಸಲಾಗಿ ಸೀವಿಯರ್‌ ಹಾರ್ಟ್ ಅಟ್ಯಾಕ್‌! ಈ ರಾಣಪ್ಪನ ಶವ ಸಂಸ್ಕಾರ ಮಾಡಿದ ಬೂದಿ ಇನ್ನೂ ಆರಿರಲಿಲ್ಲ. ಬಂಧುಗಳ ಕಣ್ಣೀರು ಇನ್ನೂ ಇಂಗಿರಲಿಲ್ಲ. ರಾಣಪ್ಪನ ಅಣ್ಣ ಸಂತಪ್ಪನ ಮಗಳಿಗೆ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟೊತ್ತಿಗೆ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆಗಲೂ ವೈದ್ಯರು ಹೇಳಿದ್ದು ಹಾರ್ಟ್ ಅಟ್ಯಾಕ್! ಮೂರು ದಿನಗಳ ಅಂತರದಲ್ಲಿ ಈ ಕುಟುಂಬ ಇಬ್ಬರನ್ನು (ಚಿಕ್ಕಪ್ಪ-ಮಗಳು) ಕಳೆದುಕೊಂಡಿತು. ಹೀಗೆ ಸಾಲುಗಟ್ಟಿ ನಡೆಯುವ ಸಾವುಗಳ ಸರಣಿ ನೋಡುತ್ತಿರುವ ಈ ಕುಟುಂಬದ ಸದಸ್ಯರನ್ನು ಸಂತೈಸುವ ಕೈಗಳೇ ಸೋತುಹೋಗಿವೆ. ಯಾರಿಗಾಗಿ ಅಳುವುದು? ಎಷ್ಟುಬಾರಿ ಅಳುವುದು?

ಕಾಲ್‌ ಬಂದರೆ ಕೈ ನಡುಗುತ್ತವೆ: ಈ ಚೌಡಾಪುರ ತೋಟದಿಂದ ಯಾವುದಾದರು ಊರಿನ ಬಂಧುಗಳಿಗೆ ಮೊಬೈಲ್‌ ಕಾಲ್‌ ಹೋದರೆ ಅವರ ಕೈಗಳು ಅರೆಕ್ಷಣ ನಡುಗುತ್ತವೆ. ಕಾರಣ, ‘ಮತ್ತ್ಯಾರ ಸಾವಿನ ಸುದ್ದಿ ಹೊತ್ತು ತಂದಿದೆ ಈ ಕಾಲ್‌’ ಎನ್ನುವುದು ಅವರ ಆತಂಕ. ಬಳಿಕ ಬೆವರುತ್ತಲೇ ನಿಧಾನಕ್ಕೆ ರಿಸೀವ್‌ ಮಾಡುತ್ತಾರೆ. ಅಷ್ಟು ಭಯ ಹುಟ್ಟಿಸಿದೆ ಈ ಸಾವಿನ ಮೆರವಣಿಗೆ! ಊಟಕ್ಕೆ ಕುಳಿತಿದ್ದ ರಾಮಪ್ಪ ಊಟ ಮುಗಿಸಿ ಏಳಲಾಗದೇ ಕುಸಿದು ಕುಂತು ಜೀವಬಿಟ್ಟರು. ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ ಕಾಶಪ್ಪ ಕುಸಿದುಬಿದ್ದರು. ಕಸಗೂಡಿಸುತ್ತಿದ್ದ ಕಾಶವ್ವ ಎದೆ ಚುಚ್ಚುತ್ತಿದೆ ಎಂದು ಜೀವ ಬಿಟ್ಟರು.

ಹೀಗೆ, ಯಾರು ಯಾವ ಹೊತ್ತಿನಲ್ಲಿ ಕುಸಿದುಬಿದ್ದು ಜೀವ ಬಿಡುತ್ತಾರೆ, ಕುಂತಲ್ಲೇ ಉಸಿರು ಚಲ್ಲುತ್ತಾರೆ ಮತ್ತು ಹೊಲಕ್ಕೆ ಹೋದವರು ವಾಪಸ್‌ ಮನೆ ಬರುತ್ತಾರೆ ಎನ್ನುವ ಯಾವ ಭರವಸೆಯೂ ಇಡೀ ಕುಟುಂಬಕ್ಕೆ ಇಲ್ಲದಂತಾಗಿದೆ. ಅಕ್ಷರ ಲೋಕ ಮತ್ತು ಆಧುನಿಕ ಜಗತ್ತಿನಿಂದ ತುಸು ದೂರವೇ ಇರುವ ಈ ಕುಟುಂಬ ಜನ ಸುಂದರ ಹಸಿರು ಪರಿಸರದ ಮಧ್ಯೆ ತೋಟ- ಹೊಲ, ದನಕರು, ಆಡು-ಕುರಿಗಳನ್ನು ನಂಬಿ ಬದುಕುತ್ತಿದ್ದಾರೆ. ದಿನವಿಡೀ ಮೈಮುರಿದು ಬೆವರು ಸುರಿಸಿ ದುಡಿಯುತ್ತಾರೆ. ತಾವೇ ಬೆಳೆದ ಶುದ್ಧ ಆಹಾರವನ್ನು ಸೇವಿಸುತ್ತಾರೆ. ಆದಾಗ್ಯೂ ಈ ‘ಹೃದಯ ಬೇನೆ’ ಇವರ ಬೆನ್ನು ಬಿದ್ದಿರುವುದು ವೈದ್ಯಕೀಯ ಲೋಕವೇ ಬೆಕ್ಕಸ ಬೆರಗಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!