
ನಂದಿಬೆಟ್ಟ : ಮುಂದಿನ ಎರಡು ವರ್ಷಗಳಲ್ಲಿ ಎತ್ತಿನ ಹೊಳೆ ಕುಡಿಯುವ ನೀರಿಗೆ ಸಂಬಂಧಿಸಿದ ಯೋಜನೆಗಳನ್ನು ಪೂರ್ಣಗೊಳಿಸಿ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಸೇರಿ 9 ಜಿಲ್ಲೆಗಳ ಉದ್ದೇಶಿತ ತಾಲೂಕುಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನಂದಿಬೆಟ್ಟದಲ್ಲಿ ಬುಧವಾರ ನಡೆದ ಬೆಂಗಳೂರು ಕಂದಾಯ ವಿಭಾಗದ ವಿಶೇಷ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಬಗ್ಗೆ ಯಾವುದೇ ಅನುಮಾನ ಬೇಡ. ಯೋಜನೆ ಬಗ್ಗೆ ಇಂದಿನ ಸಭೆಯಲ್ಲಿ ಸುದೀರ್ಘ ಚರ್ಚೆ ಆಗಿದೆ.
ಇದು ಮೂಲತಃ ಕುಡಿಯುವ ನೀರಿನ ಯೋಜನೆ. ಕೆರೆಗಳಿಗೆ ನೀರು ತುಂಬಿಸುವುದು ನಂತರದ ಆದ್ಯತೆ. ಯೋಜನೆಯಿಂದ ಒಟ್ಟಾರೆ ಲಭ್ಯವಾಗಬಹುದಾದ 24.1 ಟಿಎಂಸಿ ನೀರಿನಲ್ಲಿ ಕುಡಿಯುವ ನೀರಿಗೆ 14 ಟಿಎಂಸಿ ಬೇಕಾಗಿದೆ. ಆದ್ದರಿಂದ ಮೊದಲು ಕುಡಿಯುವ ನೀರನ್ನು ಕೊಡುವ ಯೋಜನೆ ಮುಗಿಸಿ ಎರಡು ವರ್ಷಗಳಲ್ಲಿ ಉದ್ದೇಶಿತ ಜಿಲ್ಲೆ, ತಾಲೂಕುಗಳ 75 ಲಕ್ಷ ಜನರಿಗೆ ನೀರು ಕೊಡುತ್ತೇವೆ ಎಂದರು.ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡ ಬಳಿಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಕೈಗೊಳ್ಳಲಾಗುವುದು. ಯೋಜನೆಗೆ ಒಟ್ಟು 23,251 ಕೋಟಿ ರು.ಪರಿಷ್ಕೃತ ಅಂದಾಜು ಮಾಡಲಾಗಿತ್ತು. ಈ ಪೈಕಿ ಇಲ್ಲಿಯವರೆಗೂ 17,147 ಕೋಟಿ ಖರ್ಚಾಗಿದೆ. ಸುಮಾರು 6100 ಕೋಟಿ ರು. ಬಾಕಿ ಉಳಿದಿದೆ. ಇದರ ಜೊತೆಗೆ ಇನ್ನು 1900 ಕೋಟಿ ರು. ಹೆಚ್ಚುವರಿ ಅನುದಾನ ಅಗತ್ಯವಿದೆ. ಈ ಬಗ್ಗೆ ಚರ್ಚೆಯಾಗಿದ್ದು, ಹಣ ಒದಗಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲು ನಿರ್ಧಾರಿಸಲಾಗಿದೆ ಎಂದು ತಿಳಿಸಿದರು.
ಪ್ರತಿಪಕ್ಷದವರಿಂದ ಗೊಂದಲ:
ಈ ಯೋಜನೆಯ ನೀರು ಚಿಕ್ಕಬಳ್ಳಾಪುರ, ಕೋಲಾರಕ್ಕೆ ತಲುಪುವ ಗ್ಯಾರಂಟಿ ಇಲ್ಲ ಎಂದು ಪ್ರತಿಪಕ್ಷದವರಿಂದ ಆರೋಪಗಳಿವೆಯಲ್ಲ ಎಂಬ ಪ್ರಶ್ನೆಗೆ, ಬಿಜೆಪಿಯವರು ಜನರಿಗೆ ಸುಳ್ಳು ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈಗಾಗಲೇ 9807ಕೋಟಿ ರು. ಮೊತ್ತದಲ್ಲಿ ಗ್ರಾವಿಟಿ ಮುಖ್ಯ ಕೆನಾಲಿನ ಕೆಲಸ ಶೇ.85 ರಷ್ಟು ಮಗಿದಿದೆ. ಬೇಕಿದ್ದರೆ ಎಲ್ಲಾ ಮಾಧ್ಯಮದವರನ್ನು ಕರೆದೊಯ್ದು ಮುಗಿದಿರುವ ಕಾಮಗಾರಿಗಳ ವೀಕ್ಷಣೆಗೆ ಅವಕಾಶ ನೀಡುವಂತೆ ಪಕ್ಕದಲ್ಲೇ ಇದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸೂಚಿಸಿದರು. ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ದೇಶಿತ ಎಲ್ಲಾ ಜಿಲ್ಲೆಗಳ ಜನರಿಗೂ ನೀರು ಒದಗಿಸಲು ನಮ್ಮ ಸರ್ಕಾರ ಬದ್ದ ಎಂದರು.
ಸಮತೋಲನ ಜಲಾಶಯ:
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾತನಾಡಿ, ಎಲ್ಲಾ ಮಾಧ್ಯಮದವರು ಸಿದ್ದರಾಗಿ ಮುಖ್ಯಮಂತ್ರಿಯವರ ಸೂಚನೆಯಂತೆ ಒಮ್ಮೆ ಎತ್ತಿನಹೊಳೆ ಯೋಜನೆ ಎಲ್ಲೆಲ್ಲಿ ಎಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ, ಎಷ್ಟು ಬಾಕಿ ಇದೆ ಎಂದು ವೀಕ್ಷಿಸಿ ಮಾಹಿತಿ ಒದಗಿಸುವುದಾಗಿ ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರಕ್ಕೆ ಯೋಜನೆಯ ನೀರು ತಲುಪಿಸಲು ಸರ್ಕಾರ ಬದ್ಧವಾಗಿದೆ. ಇದರಲ್ಲಿ ಯಾವುದೇ ಅನುಮಾನಗಳು ಬೇಡ. ಸದ್ಯ ಕೊರಟಗೆರೆ ತಾಲೂಕಿನ ಬೈರಗೊಂಡ್ಲುವಿನಲ್ಲಿ ಗುರುತಿಸಿರುವ ಜಾಗದಲ್ಲಿ ಸಮತೋಲನ ಜಲಾಶಯ ನಿರ್ಮಿಸಿ ಅಲ್ಲಿಂದ ನೀರನ್ನು ಎತ್ತಿ ಎರಡು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ