ಶವ ನೋಡುವಾಗ ಮಹಿಳೆಗೆ ಹಾರ್ಟ್‌ ಅಟ್ಯಾಕ್‌: ರಾಜ್ಯದಲ್ಲಿ ಮುಂದುವರಿದ ಹೃದಯಾಘಾತ ಸರಣಿ

Kannadaprabha News   | Kannada Prabha
Published : Jul 02, 2025, 07:32 AM IST
heart attack

ಸಾರಾಂಶ

ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಘಾತಕಾರಿ ಘಟನೆಯ ಬೆನ್ನಲ್ಲೆ ರಾಜ್ಯದಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದ್ದು, ಕಳೆದ ಎರಡ್ಮೂರು ದಿನದಲ್ಲಿ 10 ಮಂದಿ ಬಲಿಯಾಗಿದ್ದಾರೆ.

ಬೆಂಗಳೂರು (ಜು.02): ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಘಾತಕಾರಿ ಘಟನೆಯ ಬೆನ್ನಲ್ಲೆ ರಾಜ್ಯದಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದ್ದು, ಕಳೆದ ಎರಡ್ಮೂರು ದಿನದಲ್ಲಿ 10 ಮಂದಿ ಬಲಿಯಾಗಿದ್ದಾರೆ. ಹಾಸನದಲ್ಲಿ 2, ಶಿವಮೊಗ್ಗದಲ್ಲಿ 4, ಧಾರವಾಡದಲ್ಲಿ 2 ಹಾಗೂ ತುಮಕೂರು-ಮಂಗಳೂರಲ್ಲಿ ತಲಾ ಒಬ್ಬರು ಹಾರ್ಟ್‌ ಅಟ್ಯಾಕ್‌ಗೆ ಮೃತಪಟ್ಟಿದ್ದು, ಯುವಕರು ಹಾಗೂ ಮಧ್ಯ ವಯಸ್ಸಿನ ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಚೈತ್ರಾ (52) ಅವರು ದಾವಣಗೆರೆಯ ಸೋಗಿಲು ಗ್ರಾಮದಕ್ಕೆ ತಮ್ಮ ಚಿಕ್ಕಮ್ಮನ ಮಗನ ಅಂತ್ಯಕ್ರಿಯೆಗೆ ತೆರಳಿದ್ದರು. ಆಗ ಪಾರ್ಥಿವ ಶರೀರದ ದರ್ಶನದ ವೇಳೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೂ ಹೊಳೆಹೊನ್ನೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 8 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಎನ್.ಸಂದೀಪ್ (48) ಹೃದಯಾಘಾತಕ್ಕೆ ಕೊನೆಯುಸಿರೆಳೆದಿದ್ದಾರೆ.

ಪದವಿ ವಿದ್ಯಾರ್ಥಿ, ಬಾಣಂತಿ ಸಾವು: ಹಾಸನದಿಂದ ಹೆರಿಗಾಗಿ ಶಿವಮೊಗ್ಗದ ದ್ಯಾವಿನಕೆರೆ ಗ್ರಾಮದ ತವರು ಮನೆಗೆ ಬಂದಿದ್ದ ಹರ್ಷಿತಾ (23) ಅವರು ಮೇ 24ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇವರಿಗೆ ಜೂ.30 ಏಕಾಏಕಿ ಎದೆ ಉರಿ ಕಾಣಿಸಿಕೊಂಡಿದ್ದು, ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಶಿವಮೊಗ್ಗ ಹೊರವಲಯದ ಬಸವನಗಂಗೂರು ಗ್ರಾಮದ ಪದವಿ ವಿದ್ಯಾರ್ಥಿ ಶ್ರೀನಿಧಿ (20) ಅವರಿಗೆ ಭಾನುವಾರ ಬೆಳಗ್ಗೆ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.

ಮಗುವಿನೊಂದಿಗೆ ಆಡುವಾಗ ಎದೆನೋವು: ತನ್ನ 9 ತಿಂಗಳು ಮಗುವನ್ನು ನೋಡಲೆಂದು ಹಾಸನ ಜಿಲ್ಲೆಯ ಐಗಶೆಟ್ಟಿಹಳ್ಳಿಯ ಹೆಂಡತಿ ಮನೆಗೆ ಆಗಮಿಸಿದ್ದ ರವಿಕುಮಾರ್ (30) ಎನ್ನುವವರಿಗೆ ಸೋಮವಾರ ಸಂಜೆ ಮಗುವಿನೊಂದಿಗೆ ಆಟವಾಡುವಾಗ ಎದೆನೋವು ಕಾಣಿಸಿಕೊಂಡಿದ್ದು, ಹಠಾತ್ತನೆ ಕುಸಿದು ಬಿದ್ದು ಪ್ರಾಣಬಿಟ್ಟಿದ್ದಾರೆ. ಇನ್ನೂ ಆರೋಗ್ಯವಾಗಿದ್ದ ಅರಸೀಕೆರೆ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಪ್ರಮೀಳಾ (76) ಎನ್ನುವವರು ರಾತ್ರಿ ಊಟ ಮಾಡಿ ಎಲ್ಲರೊಂದಿಗೆ ಮಾತನಾಡುತ್ತಾ ಕುಳಿತಿದ್ದರು. ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ನವಲಗುಂದ ಯುವಕರಿಬ್ಬರ ಸಾವು: ಧಾರವಾಡ ಜಿಲ್ಲೆ ನವಲಗುಂದ ನಿವಾಸಿ ಮುತ್ತಪ್ಪ ಶಂಕ್ರಪ್ಪ ಪೂಜಾರ (44) ಸೋಮವಾರ ರಾತ್ರಿ ಮಲಗಿದಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇನ್ನು ನವಲಗುಂದ ತಾಲೂಕಿನ ಯಮನೂರ ಗ್ರಾಮದ ನಿವಾಸಿ ಕೇಬಲ್ ಆಪರೇಟರ್‌ ಫಕ್ಕಿರಪ್ಪ (45 ) ಸೋಮವಾರ ರಾತ್ರಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ.

ಮಗಳನ್ನು ಶಾಲೆಗೆ ಬಿಟ್ಟು ಬಂದ ತಂದೆ ಮರಣ: ತುಮಕೂರು ಜಿಲ್ಲೆಯ ಊರುಕೆರೆ ಬಿಜೆಪಿ ಗ್ರಾ.ಪಂ ಮಾಜಿ ಅಧ್ಯಕ್ಷ ಹೆಬ್ಬಾಕ ಸ್ವಾಮಿ (36) ಅವರು ಮಗಳನ್ನು ಶಾಲೆಗೆ ಬಿಟ್ಟು ವಾಪಸ್ಸು ಮನೆಗೆ ಬಂದ ಕೆಲವೇ ಕ್ಷಣಗಳಲ್ಲಿ ತಲೆಸುತ್ತು ಬಂದು ಬಿದ್ದಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಹೋಗಿ ಕೊನೆಯುಸಿರೆಳೆದ: ದಕ್ಷಿಣ ಕನ್ನಡದ ಬೆಳ್ತಂಗಡಿಯ ಗಂಪದಕೋಡಿ ನಿವಾಸಿ ವಜ್ರಾಕ್ಷ ಪೂಜಾರಿ (53) ಅವರಿಗೆ ಸೋಮವಾರ ರಾತ್ರಿ ದಿಢೀರ್‌ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ತಾವೇ ಸ್ಕೂಟರ್‌ನಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌