ರಾಜ್ಯಕ್ಕೆ ಲಸಿಕೆ ನೀಡಿಕೆಯಲ್ಲಿ ತಾರತಮ್ಯ: ಸಚಿವ ಸುಧಾಕರ್‌ ಪ್ರತಿಕ್ರಿಯೆ

By Kannadaprabha News  |  First Published Jul 3, 2021, 7:24 AM IST

* ಹೆಚ್ಚಿನ ಲಸಿಕೆ ಕೋರಲು ಸುಧಾಕರ್‌ ನಾಡಿದ್ದು ದಿಲ್ಲಿಗೆ
* ನಿಗದಿಗಿಂತ ಹೆಚ್ಚು ಬಂದಿದೆ: ಆರೋಗ್ಯ ಸಚಿವರಿಂದ ಸ್ಪಪ್ಟನೆ
* ಬೇರೆಯವರಿಂದ ಹೇಳಿಸಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ನನಗಿಲ್ಲ
 


ಬೆಂಗಳೂರು(ಜು.03): ರಾಜ್ಯದ ಜನತೆ ಕೋವಿಡ್‌ ಲಸಿಕೆ ಪಡೆದುಕೊಳ್ಳಲು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಹೀಗಾಗಿ, ರಾಜ್ಯಕ್ಕೆ ಹೆಚ್ಚುವರಿ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲು ಸೋಮವಾರ ದೆಹಲಿಗೆ ತೆರಳುತ್ತಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‌, ರಾಜ್ಯಕ್ಕೆ ಕೋವಿಡ್‌ ಲಸಿಕೆ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ರಾಜ್ಯಕ್ಕೆ ನಿಗದಿಯಾಗಿದ್ದಕ್ಕಿಂತ ಹೆಚ್ಚಿನ ಲಸಿಕೆಯನ್ನೇ ಕೇಂದ್ರ ಸರ್ಕಾರ ನೀಡಿದೆ. ಆದರೆ ರಾಜ್ಯದಲ್ಲಿ ಲಸಿಕೆ ಪಡೆಯಲು ಜನರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ ಎಂದರು.

Latest Videos

undefined

ಜನ ಸಾಂದ್ರತೆ, ಜನ ಸಂಖ್ಯೆ, ಆದ್ಯತಾ ವಲಯಗಳ ಆಧಾರದಲ್ಲಿ ರಾಜ್ಯದಲ್ಲಿ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿಯೂ ಲಸಿಕೆ ಹಂಚಿಕೆಯಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಿಲ್ಲ. ಜಿಲ್ಲೆ, ತಾಲೂಕುಗಳಿಗೆ ಮಾನದಂಡಗಳ ಆಧಾರದಲ್ಲಿಯೇ ಲಸಿಕೆ ಹಂಚಿಕೆ ಮಾಡಲಾಗಿದೆ. ಕೆಲವು ಕಡೆ ಸಣ್ಣಪುಟ್ಟಗೊಂದಲಗಳು ಆಗಿರಬಹುದು. ಆದರೆ ಎಲ್ಲರಿಗೂ ಲಸಿಕೆ ದೊರೆಯುವಂತೆ ಮಾಡುವುದು ನಮ್ಮ ಆದ್ಯತೆ ಎಂದು ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

ಗರ್ಭಿಣಿಯರಿಗೆ ಕೋವಿಡ್ ಲಸಿಕೆ ಅಭಿಯಾನ ವಿಸ್ತರಿಸಿದ ಕೇಂದ್ರ ಆರೋಗ್ಯ ಇಲಾಖೆ

3ನೇ ಅನ್‌ಲಾಕ್‌ ಸಭೆ ನಡೆದಿಲ್ಲ

ಮೂರನೇ ಹಂತದ ಅನ್‌ಲಾಕ್‌ ಬಗ್ಗೆ ಈವರೆಗೆ ಸಭೆ ನಡೆದೇ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ಕರೆದಾಗ ಹೋಗುತ್ತೇನೆ. ಇದಕ್ಕೂ ಮುನ್ನ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸುಧಾಕರ್‌ ತಿಳಿಸಿದ್ದಾರೆ.

ಮೂರನೇ ಹಂತದಲ್ಲಿ ಮಾಲ್‌, ಚಿತ್ರ ಮಂದಿರಗಳಿಗೆ ವಿನಾಯಿತಿ ನೀಡುವ ಬಗ್ಗೆ ಇನ್ನೂ ಚರ್ಚೆಯೇ ಆಗಿಲ್ಲ. ಮಾಧ್ಯಮಗಳಿಗೆ ಈ ಸುದ್ದಿ ಹೇಗೆ ಸಿಗುತ್ತದೆಯೋ ಗೊತ್ತಿಲ್ಲ. ನನಗೂ ಈ ಬಗ್ಗೆ ಅಚ್ಚರಿ ಆಗುತ್ತಿದೆ. ಯಾವ ತಜ್ಞರು ಈ ಬಗ್ಗೆ ಮಾಹಿತಿ ನೀಡಿದ್ದಾರೋ ಗೊತ್ತಿಲ್ಲ. ನಾನು ಈ ಬಗ್ಗೆ ವೈಯಕ್ತಿಕ ಅಭಿಪ್ರಾಯ ಹೇಳುವುದು ಸರಿಯಲ್ಲ ಎಂದು ಸುಧಾಕರ್‌ ಅಭಿಪ್ರಾಯ ಪಟ್ಟಿದ್ದಾರೆ. ರಾಜ್ಯದಲ್ಲಿ 24 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಆದ್ಯತೆಯ ಮೇರೆಗೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಲಸಿಕೆ ನೀಡುತ್ತಿದ್ದೇವೆ. ಲಸಿಕೆ ನೀಡಿದ ಬಳಿಕ ಕಾಲೇಜ್‌ ಆರಂಭದ ಬಗ್ಗೆ ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿದರು.

ಟಾಸ್ಕ್‌ ಫೋರ್ಸ್‌ ರಚನೆ ಬಗ್ಗೆ ಗೊತ್ತಿಲ್ಲ

ಕೋವಿಡ್‌ ಹತೋಟಿಗೆ ಸಂಬಂಧಿಸಿದಂತೆ ಟಾಸ್ಕ್‌ಫೋರ್ಸ್‌ ರಚನೆ ಮಾಡುವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಸುಧಾಕರ್‌, ಟಾಸ್ಕ್‌ ಫೋರ್ಸ್‌ ರಚನೆ ಬಗ್ಗೆ ನನಗೆ ಗೊತ್ತಿಲ್ಲ. ಕೋವಿಡ್‌ ಉಸ್ತುವಾರಿ ಸಚಿವರ ಬದಲಾವಣೆಯ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಆರೋಗ್ಯ ಸಚಿವನಾಗಿ ನಾನು ನನ್ನ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. ಆರ್‌. ಅಶೋಕ್‌ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮೂರನೇ ಅಲೆ ತಡೆಯಲು ಟಾಸ್ಕ್‌ಫೋರ್ಸ್‌ ರಚನೆಯ ಬಗ್ಗೆ ಚರ್ಚಿಸಿರಬಹುದು. ನನಗಂತೂ ಈ ಬಗ್ಗೆ ಮಾಹಿತಿ ಇಲ್ಲ ಎಂದು ಸುಧಾಕರ್‌ ತಿಳಿಸಿದ್ದಾರೆ.

ಡಿಕೆಶಿಗೆ ತಿರುಗೇಟು

ಚಾಮರಾಜನಗರದಲ್ಲಿ ಆಕ್ಸಿಜನ್‌ ಲಭಿಸದೆ ಕೋವಿಡ್‌ ಸೋಂಕಿತರು ಮರಣವನ್ನಪ್ಪಿದಾಗ ಸರ್ಕಾರ ಅವರ ಮನೆಗೆ ಭೇಟಿ ನೀಡಲಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪವನ್ನು ತಳ್ಳಿಹಾಕಿದ ಸುಧಾಕರ್‌, ದುರಂತ ಸಂಭವಿಸಿದಾಗ ಮೊದಲಿಗೆ ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದೆ ನಾನು. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಕೂಡ ಭೇಟಿ ನೀಡಿದ್ದರು. ನಾವು ಸರ್ಕಾರದ ಭಾಗ. ನಾವು ಹೋದರೆ ಸರ್ಕಾರ ಭೇಟಿ ನೀಡಿದಂತೆ ಅಲ್ಲವೆ. ಬೇರೆಯವರಿಂದ ಹೇಳಿಸಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ನನಗಿಲ್ಲ ಎಂದು ಹೇಳಿದರು.
 

click me!