ಜೆಡಿಎಸ್ ಕೋಟೆಯಲ್ಲಿ ದಳಪತಿಗಳ ದಂಡಯಾತ್ರೆ: ಹಾಸನ ವಶಕ್ಕೆ ದೇವೇಗೌಡರ ಸಮಾವೇಶ, ಅರಸೀಕೆರೆಗೆ ರೇವಣ್ಣ ಜಿಗಿತ!

Published : Jan 07, 2026, 05:03 PM IST
HD Revanna

ಸಾರಾಂಶ

2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಎಚ್.ಡಿ. ರೇವಣ್ಣ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನು ಸೋಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

ಹಾಸನ (ಜ.07): 2028ರ ವಿಧಾನಸಭಾ ಚುನಾವಣೆಗೆ ಹಾಸನ ಜಿಲ್ಲೆಯ ರಾಜಕೀಯದ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಭೀಕರ ಸಮರ ಶುರುವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರೇವಣ್ಣ ಕುಟುಂಬವನ್ನೇ ಟಾರ್ಗೆಟ್ ಮಾಡಿ ಹಾಸನ ಕ್ಷೇತ್ರವನ್ನು ಕಸಿದುಕೊಂಡಿದ್ದ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಎಚ್.ಡಿ. ರೇವಣ್ಣ ಈಗ ಅರಸೀಕೆರೆ ವಿಧಾನಸಭಾ ಕ್ಷೇತ್ರದತ್ತ ಕಣ್ಣಿಟ್ಟಿದ್ದಾರೆ. ಆ ಮೂಲಕ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಅರಸೀಕೆರೆಯತ್ತ ರೇವಣ್ಣ ಚಿತ್ತ ಏಕೆ?

ಸದ್ಯ ಹೊಳೆನರಸೀಪುರದ ಶಾಸಕರಾಗಿರುವ ರೇವಣ್ಣ ಅವರು ದಿಢೀರನೆ ಅರಸೀಕೆರೆಗೆ ಶಿಫ್ಟ್ ಆಗಲು ಪ್ರಬಲ ಕಾರಣವಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಗೆದ್ದಿದ್ದ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಅರಸೀಕೆರೆ ಜೆಡಿಎಸ್ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವಿದೆ. ಇತ್ತೀಚೆಗೆ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ರೇವಣ್ಣ ಅವರನ್ನು ಭೇಟಿ ಮಾಡಿದ್ದ ಕಾರ್ಯಕರ್ತರು, 'ಶಿವಲಿಂಗೇಗೌಡರನ್ನು ಸೋಲಿಸಲು ನೀವು ಅರಸೀಕೆರೆಯಿಂದಲೇ ಸ್ಪರ್ಧಿಸಬೇಕು' ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೇವಣ್ಣ, 'ನಾನೇ ಅಭ್ಯರ್ಥಿಯಾಗುತ್ತೇನೆ, ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಿ' ಎಂದು ಆಶ್ವಾಸನೆ ನೀಡುವ ಮೂಲಕ ಸಮರಕ್ಕೆ ನಾಂದಿ ಹಾಡಿದ್ದಾರೆ.

ಹೊಳೆನರಸೀಪುರದಲ್ಲಿ ಭವಾನಿ ಅಥವಾ ಸೂರಜ್?

ಇದೀಗ ಸ್ವತಃ ಹೆಚ್.ಡಿ. ರೇವಣ್ಣ ಅರಸೀಕೆರೆಗೆ ಹೋದರೆ, ಅವರ ಸ್ವಕ್ಷೇತ್ರ ಹೊಳೆನರಸೀಪುರದ ಕಥೆಯೇನು ಎಂಬ ಪ್ರಶ್ನೆ ಎದ್ದಿದೆ. ಮೂಲಗಳ ಪ್ರಕಾರ, ಈ ಕ್ಷೇತ್ರವನ್ನು ತಮ್ಮ ಹಿಡಿತದಲ್ಲೇ ಇಟ್ಟುಕೊಳ್ಳಲು ರೇವಣ್ಣ ಅವರು ಪತ್ನಿ ಭವಾನಿ ರೇವಣ್ಣ ಅಥವಾ ಪುತ್ರ ಸೂರಜ್ ರೇವಣ್ಣ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಭವಾನಿ ಅವರಿಗೆ ಚುನಾವಣೆಗೆ ಸ್ಪರ್ಧಿಸುವ ಹಂಬಲ ಮೊದಲಿನಿಂದಲೂ ಇದ್ದು, ಸೂರಜ್ ಅವರ ಪರಿಷತ್ ಅವಧಿ ಕೂಡ ಮುಗಿಯುತ್ತಾ ಬಂದಿದೆ. ಈ ತಂತ್ರದ ಮೂಲಕ ಎರಡು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ರೇವಣ್ಣ ಅವರ ಲೆಕ್ಕಾಚಾರವಾಗಿದೆ.

ಜೆಡಿಎಸ್‌ಗೆ ವರವಾಗಲಿದೆಯೇ 'ಸಿಂಪತಿ' ಅಲೆ?

ಕಳೆದ ನಾಲ್ಕೈದು ವರ್ಷಗಳಿಂದ ರೇವಣ್ಣ ಕುಟುಂಬ ಕಾನೂನು ಹೋರಾಟ ಮತ್ತು ಕೇಸುಗಳ ಸುಳಿಗೆ ಸಿಲುಕಿ ತೀವ್ರ ಮುಜುಗರ ಅನುಭವಿಸಿದೆ. ಆದರೆ, ಈಗ ರೇವಣ್ಣ ಅವರ ಮೇಲಿನ ಕೇಸುಗಳು ಖುಲಾಸೆಯಾಗುತ್ತಿರುವುದು ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಸಮಾಧಾನ ಜೆಡಿಎಸ್‌ಗೆ ಪ್ಲಸ್ ಪಾಯಿಂಟ್ ಆಗಬಹುದು. ಇದೇ ತಿಂಗಳು ಹಾಸನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಹಾಸನ ಜಿಲ್ಲೆಯನ್ನು ಮತ್ತೆ ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡಲು ದೊಡ್ಡ ಶಕ್ತಿ ಪ್ರದರ್ಶನ ನಡೆಯಲಿದೆ.

ಕಾಂಗ್ರೆಸ್‌ನ 'ಟಾರ್ಗೆಟ್ ಹಾಸನ' ತಂತ್ರವನ್ನು ಮುರಿಯಲು ದೇವೇಗೌಡರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಿರುವುದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ. 'ನಮ್ಮ ಕೆಟ್ಟ ದಿನಗಳು ಕಳೆದು ಒಳ್ಳೆಯ ದಿನಗಳು ಬರುತ್ತಿವೆ' ಎಂಬ ರೇವಣ್ಣ ಅವರ ಮಾತು ಜಿಲ್ಲೆಯ ರಾಜಕೀಯದ ದಿಕ್ಸೂಚಿಯನ್ನು ಬದಲಿಸುವ ಮುನ್ಸೂಚನೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸರ್ಕಾರಿ ಕೆಲಸ ಕೊಡಿಸೋದಾಗಿ ಯುವತಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿದ ಮಂಗಳಮುಖಿ; ಮುಂದಾಗಿದ್ದು ದುರಂತ!
ಕೋಗಿಲು ಲೇಔಟ್ ಕೇಸಲ್ಲಿ ಎಚ್ಚೆತ್ತ ಸರ್ಕಾರ: ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಹಣ ವಸೂಲಿ ಮಾಡಿದ ನಾಲ್ವರ ಮೇಲೆ FIR!