
ಬೆಂಗಳೂರು (ಡಿ.6): ರಾಜ್ಯದ ಪ್ರತಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಇದನ್ನು ನಾವು ನೋಡಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದ ಉಪ ಲೋಕಾಯುಕ್ತ ಜಸ್ಟಿಸ್ ಬಿ ವೀರಪ್ಪ ಅವರ ಹೇಳಿಕೆ ಕುರಿತಾಗಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದು, ಉಪಲೋಕಾಯುಕ್ತರಿಗೆ ಒಂದು ನಮಸ್ಕಾರ, ಭ್ರಷ್ಟಾಚಾರದ ಬಗ್ಗೆ ಕೇವಲ ಮಾತನಾಡಲು ಮಾತ್ರ ಅಧಿಕಾರವಿದೆಯೇ? ಪ್ರಶ್ನಿಸಿದ್ದಾರೆ.
ಇಲಾಖೆಗಳಲ್ಲಿ ಶೇ. 63ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಉಪ ಲೋಕಾಯುಕ್ತರು ಹೇಳುತ್ತಾರೆ. ಹಾಗಾದರೆ ಅವರು ಅಧಿಕಾರವಹಿಸಿಕೊಂಡು ಏನು ಕೆಲಸ ಮಾಡುತ್ತಿದ್ದಾರೆ? ಕೇವಲ ಮಾಧ್ಯಮಗಳ ಮುಂದೆ ಹೇಳಿಕೆ ನೀಡಲು ಮಾತ್ರ ಅವರಿಗೆ ಅಧಿಕಾರ ನೀಡಲಾಗಿದೆಯೇ? ಇಲ್ಲ ದಾಖಲೆಗಳನ್ನು ಸಂಗ್ರಹಿಸಿ ಭ್ರಷ್ಟರ ಮೇಲೆ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಎಂದು ಕಾರ್ಯವೈಖರಿ ಬಗ್ಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟಾಚಾರದ ಬಗ್ಗೆ ತಿಳಿದಿದ್ದರೂ ಉಪ ಲೋಕಾಯುಕ್ತರು ಕೇವಲ ಹೇಳಿಕೆಗಳಿಗೆ ಸೀಮಿತರಾಗಿದ್ದರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ, ಉಪ ಲೋಕಾಯುಕ್ತರ ಹೇಳಿಕೆಯು 2019ರ ಭ್ರಷ್ಟಾಚಾರದ ಬಗ್ಗೆ ಇರಬಹುದು ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದ ವಿಚಾರಕ್ಕೂ ಹೆಚ್‌ಡಿಕೆ ತಿರುಗೇಟು ನೀಡಿದ್ದು, 'ಯಾರ ಕಾಲದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು ಎಂಬುದು ಬೇರೆ ಚರ್ಚೆ. ಇವರು ಅಧಿಕಾರಕ್ಕೆ ಬಂದು ಮೂರು ವರ್ಷ ಆಗಿದೆ. ಈ ಮೂರು ವರ್ಷದ ಆಡಳಿತ ಎಷ್ಟು ಪರಿಶುದ್ಧ, ಎಷ್ಟು ಪಾರದರ್ಶಕವಾಗಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು ತನಿಖೆ ನಡೆಸಿ ವರದಿ ಮಾಡಿಸಲಿ' ಎಂದು ಹೆಚ್‌ಡಿಕೆ ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ