
ಮೈಸೂರು(ಡಿ.6): ನಾವು ವರುಣಾ ಕ್ಷೇತ್ರದ ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ಕ್ಷೇತ್ರದ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ. ಆದರೂ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಕ್ಷೇತ್ರದ ಜನತೆಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಿ, ಅವರ ಋಣ ಭಾರವನ್ನು ಕಡಿಮೆ ಮಾಡಿಕೊಳ್ಳಲು ಶ್ರಮಿಸುತ್ತೇನೆ ಎಂದು ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯನ ತಾಂಡವಪುರ ಗ್ರಾಮದಲ್ಲಿ ಸರ್ಕಾರಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಈ ಹೇಳಿಕೆ ನೀಡಿದರು.
ಕ್ಷೇತ್ರದ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವ ಯತೀಂದ್ರ ಅವರು, ಸಿಎಸ್‌ಆರ್ ನಿಧಿ (CSR Fund) ಮತ್ತು ಸರ್ಕಾರದ ಅನುದಾನದಡಿ ತಾಂಡವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿದರು. ಇದರೊಂದಿಗೆ ಮಲ್ಲುಪುರ ಶಾಲೆ, ಬಿದರಗೂಡು ಶಾಲೆ, ಮರಳೂರು ಶಾಲೆ, ನಗರ್ಲೆ ಶಾಲೆ, ಸುತ್ತೂರು ಶಾಲೆ, ಹಾರೋಪುರ ಶಾಲೆ ಸೇರಿದಂತೆ ಸುಮಾರು 10 ಗ್ರಾಮಗಳಲ್ಲಿ ಹೆಚ್ಚುವರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಮ್ಮ ತಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬಂದಿರಲಿಲ್ಲ. ಆದರೂ ಸ್ವಲ್ಪಮಟ್ಟಿಗೆ ಅಭಿವೃದ್ಧಿಗೆ ಗಮನ ನೀಡಲಾಗಿತ್ತು. ಆದರೆ ಈಗ ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದು, ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ. ಹಾಗಾಗಿ ಕ್ಷೇತ್ರದ ಶಿಕ್ಷಣ, ಮೂಲಭೂತ ಸೌಲಭ್ಯಗಳಿಗೆ ಹಾಗೂ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗುತ್ತಿದ್ದು, ವರುಣಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಇದೇ ವೇಳೆ, ಸಿದ್ದರಾಮಯ್ಯನವರನ್ನು ಎರಡು ಬಾರಿ ಮುಖ್ಯಮಂತ್ರಿಗಳಾಗಿ, ಒಂದು ಬಾರಿ ವಿರೋಧ ಪಕ್ಷದ ನಾಯಕರಾಗಿ ಮಾಡಿದ್ದೀರಿ. ನನ್ನನ್ನು ಸಹ ಒಂದು ಬಾರಿ ಶಾಸಕರಾಗಿ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಇದೇ ರೀತಿ ನಿಮ್ಮ ಪ್ರೀತಿ ವಿಶ್ವಾಸ ಮುಂದೆಯೂ ಸಹ ಹೀಗೆ ಇರಲಿ ಎಂದು ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ