ರಸ್ತೆ ಗುಂಡಿ ಮುಚ್ಚೋಕೇ ಹಣ ಇಲ್ಲ, ಚನ್ನಪಟ್ಟಣದಲ್ಲಿ ಅಭಿವೃದ್ಧಿ ಬಗ್ಗೆ ನಾಟಕ ಮಾಡ್ತೀರ? ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

By Ravi Janekal  |  First Published Oct 6, 2024, 3:35 PM IST

ಇವತ್ತು ಪಕ್ಷದ ಕಾರ್ಯಕರ್ತರು ಮುಖಂಡರ ಸಭೆ ಕರೆದಿದ್ದೇನೆ. ಜಿಪಂ ವ್ಯಾಪ್ತಿಯ 5 ಭಾಗದಲ್ಲಿ ಸಭೆ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.


ಚನ್ನಪಟ್ಟಣ (ಅ.6): ಇವತ್ತು ಪಕ್ಷದ ಕಾರ್ಯಕರ್ತರು ಮುಖಂಡರ ಸಭೆ ಕರೆದಿದ್ದೇನೆ. ಜಿಪಂ ವ್ಯಾಪ್ತಿಯ 5 ಭಾಗದಲ್ಲಿ ಸಭೆ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.

ಇಂದು ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, 10ನೇ ತಾರೀಖು ಮತ್ತೆ ಚನ್ನಪಟ್ಟಣದಲ್ಲಿ ಸಭೆ ಮಾಡ್ತಿದ್ದೇನೆ‌. ಸಭೆ ಮಾಡ್ತಿರೋ ಉದ್ದೇಶವೇ ಜನಾಭಿಪ್ರಾಯ ಪಡೆಯಲು. ಇಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಲು ಏನೇನು ಅಭಿಪ್ರಾಯ ಸಿಗುತ್ತೆ ಅಂತಾ ಸಂಗ್ರಹಿಸುತ್ತಿದ್ದೇನೆ ಎಂದರು.

Latest Videos

undefined

ಡಿಕೆಶಿ ವಿರುದ್ಧ ವಾಗ್ದಾಳಿ:

ಚನ್ನಪಟ್ಟಣಕ್ಕೆ ಡಿಕೆ ಶಿವಕುಮಾರ ಅನುದಾನ ತಂದಿದ್ದೇನೆ ಎಂದು ಹೇಳಿದ್ದಾನೆ. ಎಲ್ಲಿದೆ ಅನುದಾನ? ಎಲ್ಲಿ ತಂದವ್ರೆ? ಯಾವುದೋ ಬೋರ್ಡ್‌ಗಳಲ್ಲಿ ಮಾತ್ರವಾ? ಹಾಗಾದ್ರೆ ನಮ್ಮ ಅಧಿಕಾರಾವಧಿಯಲ್ಲಿ ಏನೂ ಅಭಿವೃದ್ಧಿ ಆಗಿಲ್ವ? ನಾನು ಅಭಿವೃದ್ಧಿ ಮಾಡಿದ್ದೇನೆ ಆ ಕುರಿತು ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಚನ್ನಪಟ್ಟಣಕ್ಕೆ ಅನುದಾನ ತಂದು ಅಭಿವೃದ್ಧಿ ಮಾಡಿದವನು ನಾನು. ಮೂರು ತಿಂಗಳಲ್ಲಿ ಚನ್ನಪಟ್ಟಣಕ್ಕೆ ಇವರ ಕೊಡುಗೆ ಏನಿದೆ? ಸೇತುವೆಗಳ ನಿರ್ಮಾಣಕ್ಕೆ ನಾನು ಅನುಮತಿ ಕೊಡಿಸಿದ್ದೆ. ಅದಕ್ಕೆ ಚೆಕ್ ಡ್ಯಾಂ ಅಂತ ಪಕ್ಕದಲ್ಲಿ ಬೋರ್ಡ್ ಹಾಕೊಂಡು ಓಡಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೂರು ತಿಂಗಳಲ್ಲಿ 20 ದಿನ ಬಂದಿದ್ದೇನೆ ಅಂತಾ ಹೇಳ್ತಿದ್ದಾರಲ್ಲ ಏನು ಮಾಡಿದ್ರಿ ಬಂದು? ಪಟ್ಟಿ ಕೊಡಿ. ಒಬ್ಬ 300 ಕೋಟಿ ಇನ್ವೆಸ್ಟ್ ಮಾಡಿದ್ದೇವೆ ಅಂತಾನೆ, ಇನ್ನೊಬ್ಬ 500 ಕೋಟಿ ಅಂತಾನೆ. ಎಲ್ಲಿದೆ ಹಣ ಇವರ ಕೈಯಲ್ಲಿ? ಮೊಣಕಾಲುಮಟ್ಟ ಮಳೆ ನೀರು ನಿಂತ್ರೂ ರಸ್ತೆ ಗುಂಡಿ ಮುಚ್ಚೋಕೆ ಆಗಿಲ್ಲ ಕೋಟಿ ಕೋಟಿ ಅಭಿವೃದ್ಧಿ ಬಗ್ಗೆ ಮಾತಾಡ್ತಾರೆ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

ಚನ್ನಪಟ್ಟಣ ಬೈಎಲೆಕ್ಷನ್‌ಗೆ ಹಣಕ್ಕೆ ಬೇಡಿಕೆ: ಗೊತ್ತಿಲ್ಲದೆ ಮಾತನಾಡಲು ನಾನು ಕುಮಾರಸ್ವಾಮಿ ಅಲ್ಲ, ಚಲುವರಾಯಸ್ವಾಮಿ

'ಚನ್ನಪಟ್ಟಣದ ಸೀಟು ಖಾಲಿ ಇರೋದಕ್ಕೆ ಬಂದಿದ್ದೇನೆ' ಎಂಬ ಡಿಕೆ ಶಿವಕುಮಾರ ಹೇಳಿಕೆಗೆ ಗರಂ ಆದ ಹೆಚ್‌ಡಿ ಕುಮಾರಸ್ವಾಮಿ, ಚನ್ನಪಟ್ಟಣದ ಚೇರ್ ಖಾಲಿ ಇರೋದಕ್ಕೆ ಬಂದಿದ್ದೀರಾ? ಖಾಲಿ ಇಲ್ಲಂದಿದ್ರೆ ಬರ್ತಿರಲಿಲ್ಲವ? ಹಾಗಾದ್ರೆ ನೀವು ಪದೇಪದೆ ಇಲ್ಲಿಗೆ ಬರ್ತಿರೋದು ಕುರ್ಚಿಗಾಗಿ ತಾನೇ? ಇಲ್ಲವಾದ್ರೆ ಚನ್ನಪಟ್ಟಣದ ಕಡೆ ನೀವು ತಲೆ ಹಾಕ್ತಿದ್ರ? ತಿರುಗಿ ನೋಡ್ತಿರಲಿಲ್ಲ. ಚುನಾವಣೆ, ಕುರ್ಚಿ ಮೇಲೆ ಕಣ್ಣಿಟ್ಟು ಅಭಿವೃದ್ಧಿ ಅಂತಾ ನಾಟಕ ಮಾಡ್ತೀರಾ? ಚನ್ನಪಟ್ಟಣ ಜನರ ಬಗ್ಗೆ ನಿಜವಾಗಿ ಕಾಳಜಿ ಇದ್ದಿದ್ರೆ ಹೀಗೆ ಹೇಳ್ತಿದ್ರ? ಚುನಾವಣೆ ಮುಗಿದ ಮೇಲೆ ನೀವು ಮತ್ತೆ ಚನ್ನಪಟ್ಟಣ ಕಡೆ ಬರೋದಿಲ್ಲ ಟಾಟಾ ಮಾಡ್ಕೊಂಡು ಹೋಗ್ತಿವೆ ಅನ್ನೋದೇ ಇವರ ಮಾತಿನ ಅರ್ಥ ಎಂದು ವಾಗ್ದಾಳಿ ನಡೆಸಿದರು.

ಹೆಚ್‌ಡಿ ಕುಮಾರಸ್ವಾಮಿ, ಆರ್ ಅಶೋಕ್ ಇಬ್ಬರೂ ಹುಚ್ಚರು: ಎನ್‌ಎಸ್ ಬೋಸರಾಜು ಕಿಡಿ

ಇನ್ನು ಇದೇ ವೇಳೆ ಚನ್ನಪಟ್ಟಣ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ದೆ ಮಾಡುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಇಲ್ಲಿ ಎನ್‌ಡಿಎ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ. ಅದು ನಿಖಿಲ್ ಇರ್ತಾರೋ, ಇನ್ಯಾರೋ ಇರ್ತಾರೋ ಅನ್ನೋದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ. ನಾಯಕರು ಕೂತು ತೀರ್ಮಾನ ಮಾಡ್ತಾರೆ ಎಂದರು.
 

click me!