
ಬೆಂಗಳೂರು (ಜೂ.24): ರಾಜ್ಯದಲ್ಲಿ ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರ ನೆರವಿಗೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಧಾವಿಸಿದ್ದಾರೆ. ರಾಜ್ಯದಲ್ಲಿ ಮಾವು ಬೆಳೆಗಾರರ ಕಷ್ಟವನ್ನು ಆಲಿಸಿದ ಕುಮಾರಸ್ವಾಮಿ ನೆರವಿಗೆ ಧಾವಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗೆ ಪತ್ರ ಬರೆದಿದ್ದರು. ರಾಜ್ಯದ ಮಾವಿನಹಣ್ಣುಗಳಿಗೆ ಆಂಧ್ರಪ್ರದೇಶ ನಿಷೇಧ ಹೇರಿದ್ದರಿಂದ ರಾಜ್ಯದಲ್ಲಿ ಮಾವು ಬೆಲೆ ತೀವ್ರ ಕುಸಿತವಾಗಿತ್ತು.
ಜೂನ್ 24ರಂದು, ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಉತ್ತರ ನೀಡಿ ಪತ್ರ ಬರೆದಿದ್ದಾರೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿನ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ಮಾವಿನ ರೈತರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ನೀವು ಬರೆದ ಪತ್ರ ಗಮನಕ್ಕೆ ಬಂದಿದೆ ಎಂದಿದ್ದಾರೆ.
ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಕರ್ನಾಟಕದಲ್ಲಿ 2025-26 ರ ಮಾರುಕಟ್ಟೆ ವರ್ಷಕ್ಕೆ ಮಾವಿನಹಣ್ಣಿಗೆ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ (ಎಂಐಎಸ್) ಅನ್ನು ಅನುಮೋದಿಸಿದೆ. ಈ ಯೋಜನೆಯಡಿಯಲ್ಲಿ, ಕ್ವಿಂಟಲ್‌ಗೆ ರೂ. 1616 ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆಯಲ್ಲಿ ಗರಿಷ್ಠ 2,50,000 ಮೆಟ್ರಿಕ್ ಟನ್ ಮಾವಿನಹಣ್ಣಿನ ಖರೀದಿಗೆ ಅನುಮೋದಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಮಧ್ಯಸ್ಥಿಕೆ ಪರಿಹಾರವನ್ನು ನೀಡುತ್ತದೆ ಮತ್ತು ಕರ್ನಾಟಕದ ಮಾವಿನ ರೈತರ ಕಲ್ಯಾಣಕ್ಕಾಗಿ ಕುಮಾರಸ್ವಾಮಿ ಅವರು ಎತ್ತಿದ ನಿಜವಾದ ಕಳವಳಗಳನ್ನು ಪರಿಹರಿಸುತ್ತದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ಆಶಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದಕ್ಕೆ ಧನ್ಯವಾದ ತಿಳಿಸಿರುವ ಕುಮಾರಸ್ವಾಮಿ, 'ಕರ್ನಾಟಕದ ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಸರಕಾರದ ರೈತಪರ ಬದ್ಧತೆ, ಅಚಲತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಮನವಿ ಮಾಡಿದ ತಕ್ಷಣವೇ ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆ (Market Intervention Scheme-MIS) ಅಡಿಯಲ್ಲಿ ಬೆಂಬಲ ಬೆಲೆ ಘೋಷಿಸಿದ್ದಕ್ಕಾಗಿ ಕೇಂದ್ರದ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕರ್ನಾಟಕದ ಮಾವು ಬೆಳೆಗಾರರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ರೈತರ ಉತ್ಪನ್ನಗಳಿಗೆ ಸ್ಥಿರ ಬೆಲೆಯ ಖಾತರಿ ಸದಾ ಇರುತ್ತದೆ ಎಂಬುದನ್ನು ಈ ಉಪಕ್ರಮವು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಕೃಷಿ ಸಚಿವರಿಗೆ ಬರೆದಿದ್ದ ಪತ್ರದಲ್ಲಿ, ರಾಜ್ಯದಲ್ಲಿನ ವಾತಾವರಣ, ಮಾವಿನ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಮಾವು ಬೆಳೆಗಾರರ ಸಮಸ್ಯೆ ಪರಿಹರಿಸಿ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ಮಾವು ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಭಾರೀ ಬೆಲೆ ಕುಸಿತದಿಂದ ಬೆಳಗಾರರು ಕಂಗಾಲಾಗಿದ್ದಾರೆ. ಇವರಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು.
ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮಾವು ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಬೆಲೆ ಸಿಗದ ಕಾರಣಕ್ಕೆ ಮಾವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಇಂಥ ಕಷ್ಟಕಾಲದಲ್ಲಿ ತಾವು ರೈತರ ನೆರವಿಗೆ ಧಾವಿಸಬೇಕು ಎಂದು ಕುಮಾರಸ್ವಾಮಿ ಅವರು ಕೋರಿದ್ದಾರೆ. ಕೇಂದ್ರ ಸರಕಾರ ನೆರವಿಗೆ ಬಾರದಿದ್ದರೆ ಬೆಳೆಗಾರರಿಗೆ ಬೇರೆ ನೆರವಿನ ಖಾತರಿ ಇಲ್ಲ. ಕೂಡಲೇ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ನಫೆಡ್ ಮತ್ತು ಎನ್‍ಸಿಸಿಎಫ್ ಮೂಲಕ ಕೂಡಲೇ ಮಾವು ಖರೀದಿ ಆರಂಭಿಸಬೇಕು, ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ವಿನಂತಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ