* ಜೆಡಿಎಸ್ ಬಗ್ಗೆ ಮೋದಿ ಕೇಳಿ ತಿಳಿದುಕೊಳ್ಳಿ:ಎಚ್ಡಿಕೆ
* ಬಿಜೆಪಿಗರು ಎಚ್ಡಿಕೆ ಫೋಟೋ ಇಟ್ಟುಕೊಳ್ಳಲಿ-ರೇವಣ್ಣ
* ಜೆಡಿಎಸ್ ಮುಳುಗುತ್ತೆ ಎನ್ನುವ ಭವಿಷ್ಯ ಹೇಳಲು ಅವರು ಯಾರು?
ಚನ್ನಪಟ್ಟಣ/ಹಾಸನ(ಸೆ.03): ಜೆಡಿಎಸ್ ಮುಳುಗುತ್ತಿರುವ ಹಡಗು ಎಂಬ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆಗೆ ಕುಮಾರಸ್ವಾಮಿ ಹಾಗೂ ಸೋದರ ಎಚ್.ಡಿ.ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಬುದ್ಧಿ ಹೇಳುವ ಮೊದಲು ತಮ್ಮ ನಡವಳಿಕೆ ಏನೆಂಬುದನ್ನು ನೋಡಿಕೊಳ್ಳಲಿ, ಜೆಡಿಎಸ್ ಮತ್ತು ನನ್ನ ಬಗ್ಗೆ ಗೊತ್ತಿಲ್ಲ ಎಂದರೆ ಪ್ರಧಾನಿಯವರಿಂದ ಕೇಳಿ ತಿಳಿದು ಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದರೆ, ರಾಜ್ಯದ ಉಸ್ತುವಾರಿಯಾಗಿ 2023ರ ವರೆಗೂ ಅರುಣ್ ಸಿಂಗ್ ಅವರೇ ಮುಂದುವರಿದರೆ ಜೆಡಿಎಸ್ ಮುಳುಗುತ್ತಾ ಅಥವಾ ಬಿಜೆಪಿ ಮುಳುಗುತ್ತಾ ಎಂಬುದನ್ನು ಕಾದು ನೋಡೋಣ ಎಂದು ರೇವಣ್ಣ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ಬಗ್ಗೆ ಅರುಣ್‌ಗೇನು ಗೊತ್ತು?: ಎಚ್‌ಡಿಕೆ ಆಕ್ರೋಶ
ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಎರಡನೇ ಬಾರಿ ದೇಶ ಆಳುತ್ತಿರುವ ಪಕ್ಷದವರು ಸರಿಯಾಗಿ ಮಾತನಾಡುವುದನ್ನು ಕಲಿಯಬೇಕು. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನನ್ನ ಬಗ್ಗೆ, ನಮ್ಮ ಪಕ್ಷದ ಮಾಹಿತಿ ಇಲ್ಲ ಅಂದರೆ ಪ್ರಧಾನಿ ಅವರ ಹತ್ತಿರ ಕೇಳಿ ತಿಳಿದುಕೊಳ್ಳಲಿ ಎಂದರು.
ಹಾಸನದಲ್ಲಿ ಮಾತನಾಡಿದ ಎಚ್.ಡಿ.ರೇವಣ್ಣ, 2023ರವರೆಗೆ ಅರುಣ್ ಸಿಂಗ್ ಅವರೇ ಉಸ್ತುವಾರಿ ಆಗಿದ್ದರೆ ಜೆಡಿಎಸ್ ಮುಳುಗುತ್ತೋ ಅಥವಾ ಬೇರೆ ಪಕ್ಷ ಮುಳುಗುತ್ತೋ ಎನ್ನುವುದು ಗೊತ್ತಾಗುತ್ತೆ. ಅವರನ್ನೇ ಮುಂದುವರೆಸಿ ಬದಲಾವಣೆ ಮಾಡಬೇಡಿ ಎಂದು ನಾನೇ ಆ ಪಕ್ಷದವರಿಗೆ ಮನವಿ ಮಾಡುತ್ತೇನೆ. ಜೆಡಿಎಸ್ ಮುಳುಗುತ್ತೆ ಎನ್ನುವ ಭವಿಷ್ಯ ಹೇಳಲು ಅವರು ಯಾರು? ರಾಜ್ಯ ಬಿಜೆಪಿಯವರು ಎಚ್.ಡಿ. ಕುಮಾರಸ್ವಾಮಿ ಅವರ ಫೊಟೋ ಇಟ್ಟುಕೊಳ್ಳಬೇಕು. 2007ರಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಹೋಗಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂತು ಎಂದರು.