
ಬೆಂಗಳೂರು (ಜು.18): ಗಂಡ ಮಾಜಿ ಪಿಎಂ, ಒಬ್ಬ ಮಗ ಮಾಜಿ ಸಿಎಂ, ಇನ್ನೊಬ್ಬ ಮಗ ಮಾಜಿ ಸಚಿವ. ಇಡೀ ರಾಜಕೀಯ ನಾಯಕರನ್ನು ತನ್ನ ಅಕ್ಕಪಕ್ಕದಲ್ಲೇ ಇರಿಸಿಕೊಂಡರೂ ಚೆನ್ನಮ್ಮ ದೇವೇಗೌಡ ಹೊರಗೆ ಕಾಣಿಸಿಕೊಳ್ಳುತ್ತಿದ್ದದ್ದು ಬಹಳ ವಿರಳ. ದೇವೇಗೌಡರ ಜೊತೆ ಒಮ್ಮೊಮ್ಮೆ ಮಗ ಕುಮಾರಸ್ವಾಮಿ ಜೊತೆ ಫೋಟೋದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಎತ್ತಿ ಆಡಿಸಿದ ಹಿರಿಯ ಜೀವ ಅದು. ಎಚ್‌ಡಿ ದೇವೇಗೌಡರ ಜೊತೆ 72 ವರ್ಷಗಳ ತುಂಬು ಸಂಸಾರ ನಡೆಸಿದ್ದ ಚೆನ್ನಮ್ಮ ಶನಿವಾರ ಸಂಜೆ 4 ಗಂಟೆಗೆ ವಿಧಿವಶರಾದರು.
ಬಿಡದಿ ಟೌನ್‌ಶಿಪ್ ಜಟಾಪಟಿ ನಡುವೆಯೂ ಕಳೆದ ಕೆಲವು ದಿನಗಳಿಂದ ರಾಜಕೀಯ ಚರ್ಚೆಗಳು, ಸಮಾರಂಭಕ್ಕಿಂತ ಹೆಚ್ಚಾಗಿ ಆಸ್ಪತ್ರೆಯ ಆವರಣದಲ್ಲೇ ಕಾಣಿಸಿಕೊಂಡಿದ್ದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ. ತಾಯಿ ಹುಷಾರಾಗುತ್ತಾರೆ ಎಂದು ಖುಷಿಯಿಂದಲೇ ಮಾತನಾಡ್ತಿದ್ದ ಎಚ್‌ಡಿ ಕುಮಾರಸ್ವಾಮಿ, ಶುಕ್ರವಾರ ರಾತ್ರಿಯ ವೇಳೆಗೆ ತಾಯಿಯನ್ನು ಬದುಕಿಸೋದು ವೈದ್ಯರಿಗೂ ಸಾಧ್ಯವಾಗದ ಕೆಲಸ ಅನಿಸಿಬಿಟ್ಟಿತು.
ತಾಯಿಯ ಪರಿಸ್ಥಿತಿಯನ್ನು ನೋಡಿ ಹೊರಬರುತ್ತಿರುವ ವೇಳೆಗೆ ಮಾಧ್ಯಮಗಳು ಎದುರಾದಾಗ, ಅದನ್ನೇ ಹೇಳಿಬಿಟ್ಟರು. ಆಕೆಯನ್ನು ಇನ್ನು ಆಕೆ ನಂಬಿದ ದೇವರೇ ಕಾಪಾಡಬೇಕು. ವೈದ್ಯರು ಶಕ್ತಿ ಮೀರಿ ಪ್ರಯತ್ನ ಮಾಡಿದ್ದಾರೆ ಎಂದಿದ್ದರು. ಇಂದು ಸಂಜೆಯ ವೇಳೆಗೆ ತಾಯಿ ನಿಧನರಾದ ಸುದ್ದಿ ಗೊತ್ತಾಗುತ್ತಿದ್ದಂತೆ ಕುಮಾರಸ್ವಾಮಿ ಬಹಳ ಭಾವುಕರಾದರು. ಮಾಧ್ಯಮಗಳ ಎದುರಾಗಲಿ, ಆಸ್ಪತ್ರೆಯ ಹೊರಗಾಗಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಸಂಜೆಯ ವೇಳೆಗೆ ಆಸ್ಪತ್ರೆಯ ಆವರಣದಿಂದ ಹೊರಬಂದು ಪಾರ್ಥಿವ ಶರೀರವನ್ನು ಸಾಗಿಸುವ ವೇಳೆ ಕಾಣಿಸಿಕೊಂಡರು.
ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ ಕುಮಾರಸ್ವಾಮಿ, ಸದಾ ಶಿವಧ್ಯಾನದಲ್ಲೇ ಇರುತ್ತಿದ್ದ ತಮ್ಮ ತಾಯಿಯನ್ನು ಶಿವನೇ ತನ್ನಲ್ಲಿಗೆ ಕರೆಸಿಕೊಂಡಿದ್ದಾನೆ ಅನ್ನೋ ನಂಬಿಕೆ ನನ್ನದು ಎಂದು ಭಾವುಕವಾಗಿ ಬರೆದಿದ್ದಾರೆ. ಅದರೊಂದಿಗೆ ತಾಯಿಯ ಜೊತೆಗಿನ ನಾಲ್ಕು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೂರು ಫೋಟೋಗಳಲ್ಲಿ ತಾಯಿಯ ಕಾಲಿಗೆ ನಮಸ್ಕಾರ ಮಾಡುವ ಫೋಟೋ ಆಗಿದ್ದರೆ, ಇನ್ನೊಂದು ಫೋಟೋದಲ್ಲಿ ತಾಯಿ ನೀಡುತ್ತಿರುವ ಪ್ರಸಾದವನ್ನು ಸ್ವೀಕರಿಸುತ್ತಿರುವ ಕೊಂಚ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
'ನನ್ನ ಪೂಜ್ಯ ಮಾತೃಶ್ರೀ ಶ್ರೀಮತಿ ಚನ್ನಮ್ಮ ದೇವೇಗೌಡರು ಇಂದು ಶಿವೈಕ್ಯರಾದರು. ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗಿ ಮನೆಗೆ ಮರಳುತ್ತಾರೆನ್ನುವ ನಿರೀಕ್ಷೆ ನನ್ನದಾಗಿತ್ತು. ಆದರೆ, ನನ್ನ ತಾಯಿ ನಮ್ಮನ್ನಗಲಿದ್ದಾರೆ. ಸದಾ ಶಿವಧ್ಯಾನದಲ್ಲಿ ತಲ್ಲೀನರಾಗಿರುತ್ತಿದ್ದ ಅಮ್ಮನವರನ್ನು ಆ ಶಿವನೇ ತನ್ನಲ್ಲಿಗೆ ಕರೆಸಿಕೊಂಡಿದ್ದಾನೆ ಎನ್ನುವುದು ನನ್ನ ನಂಬಿಕೆ. ಆ ಭಗವಂತನ ಸನ್ನಿಧಿಯಲ್ಲಿ ಅವರಿಗೆ ಸದ್ಗತಿ ದೊರೆಯಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ' ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ