
ಬೆಂಗಳೂರು (ಜು.18): ಸುದೀರ್ಘ 72 ವರ್ಷಗಳ ಕಾಲ ಸಂಗಾತಿಯಾಗಿ ತನ್ನೊಂದಿಗೆ ಜೀವನ ನಡೆಸಿದ್ದ ಚೆನ್ನಮ್ಮರನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕೂಡ ಅತ್ಯಂತ ಭಾವುಕವಾಗಿ ಬೀಳ್ಕೊಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ತಮ್ಮ 94ನೇ ವಯಸ್ಸಿನಲ್ಲೂ ಆಸ್ಪತ್ರೆ, ಮನೆ ಎಂದು ತಿರುಗಾಟ ನಡೆಸ್ತಿದ್ದ ದೇವೇಗೌಡರು, ಶುಕ್ರವಾರ ಸಂಜೆ ಮಾಧ್ಯಮಗಳ ಜೊತೆ ಮಾತನಾಡುವಾಗ ಆಕೆ ಚೇತರಿಸಿಕೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಅವರ ದನಿಯಲ್ಲಿ ಪತ್ನಿ ತನ್ನ ಬಿಟ್ಟುಹೋಗಬಹುದು ಎನ್ನುವ ಸಣ್ಣ ಸುಳಿವೂ ಅವರಿಗೆ ಇದ್ದಿರಲಿಲ್ಲ. ಎಂದಿನಂತೆ ವಯೋಸಹಜ ಸಮಸ್ಯೆ, ಚೇತರಿಸಿಕೊಂಡು ಬರುತ್ತಾಳೆ ಅನ್ನೋ ವಿಶ್ವಾಸದಲ್ಲಿದ್ದರು.
ಆದರೆ, ಅದರ ಬೆನ್ನಲ್ಲಿಯೇ ಎಚ್‌ಡಿ ಕುಮಾರಸ್ವಾಮಿ ತಮ್ಮ ತಾಯಿಯನ್ನು ಆಕೆ ನಂಬಿದ ದೇವರೇ ಕಾಪಾಡಬೇಕು ಎಂದಾಗ ಚೆನ್ನಮ್ಮ ಅವರು ಸಾವಿನ ಸನಿಹದಲ್ಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಶನಿವಾರ ಸಂಜೆ 4 ಗಂಟೆಗೆ ಚೆನ್ನಮ್ಮ ಇಹಲೋಕ ತ್ಯಜಿಸಿದರು. ಆದರೆ, ಬೆಳಗ್ಗೆಯಿಂದಲೇ ಧರ್ಮಪತ್ನಿಯ ಪಕ್ಕದಲ್ಲಿಯೇ ಎಚ್‌ಡಿ ದೇವೇಗೌಡ ಅವರು ಕುಳಿತಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ವೈದ್ಯರು ಇನ್ನೇನು ಚೆನ್ನಮ್ಮ ಬದುಕುವ ಸಾಧ್ಯತೆ ಕಡಿಮೆ ಎಂದಾಗ ಭಾವುಕರಾಗಿದ್ದ ಅವರು, ಆಕೆಯ ಹಣೆಗೆ ಕುಂಕುಮ ಇಟ್ಟು, ತಲೆಗೆ ಹೂ ಮುಡಿಸಿದ್ದರು. ಈ ವೇಳೆ ಕೆಲ ಹೊತ್ತು ಚೆನ್ನಮ್ಮನ ಮುಖವನ್ನೇ ದಿಟ್ಟಿಸಿ ದೇವೇಗೌಡರು ಕಣ್ಣೀರಿಟ್ಟಿದ್ದರು. ಅದಾದ ಕೆಲವೇ ಕ್ಷಣದಲ್ಲಿ ಚೆನ್ನಮ್ಮ ಶಿವೈಕಕ್ಯರಾದರು.
ಕಾರ್ಡಿಯಾಕ್ ಅರೆಸ್ಟ್‌ನಿಂದ ಚೆನ್ನಮ್ಮ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ರಾತ್ರಿ 8 ಗಂಟೆಯ ಸುಮಾರಿಗೆ ಆಸ್ಪತ್ರೆಯಿಂದ ಪದ್ಮನಾಭನಗರ ಮನೆಗೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಅಲ್ಲಿಯೇ ಕುಟುಂಬ ಸದಸ್ಯರು ಪೂಜೆ ನಡೆಸಲಿದ್ದು, ಬಳಿಕ ಪದ್ಮನಾಭನಗರ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನಾಳೆ ಮಧ್ಯಾಹ್ನ 1 ಗಂಟೆ ನಂತರ ಹರದನಹಳ್ಳಿಗೆ ಪಾರ್ಥಿವ ಶರೀರ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತದೆ.
ಮಣಿಪಾಲ್ ಆಸ್ಪತ್ರೆಯಿಂದ ಪಾರ್ಥೀವ ಶರೀರವನ್ನು ದೊಮ್ಮಲೂರು ಮಾರ್ಗವಾಗಿ ಅನಿಲ್ ಕುಂಬ್ಳೆ ಸರ್ಕಲ್, ವಿಠ್ಠಲ್ ಮಲ್ಯ ರಸ್ತೆ ಮಾರ್ಗವಾಗಿ ಕಾರ್ಪೊರೇಷನ್, ಕಾರ್ಪೊರೇಷನ್‌ನಿಂದ ಸೌತ್ ಎಂಡ್ ಸರ್ಕಲ್ ಮಾರ್ಗವಾಗಿ ಪದ್ಮನಾಭನಗರ ನಿವಾಸಕ್ಕೆ ತರಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ