ಬಿಎಸ್‌ವೈಗೆ ಅಭಿನಂದಿಸಿದ ಎಚ್‌ಡಿಕೆ: ಕಾರಣ ಏನು..?

By Kannadaprabha NewsFirst Published Jan 10, 2021, 7:42 AM IST
Highlights

ಆತ್ಮನಿರ್ಭರಕ್ಕೂ ಮೊದಲೇ ನಾನು ಕಾಂಪೀಟ್‌ ವಿತ್‌ ಚೀನಾ ಎಂದಿದ್ದೆ | ಕೊಪ್ಪಳದ ಆಟಿಕೆ ಕ್ಲಸ್ಟರ್‌ ನನ್ನ ಯೋಜನೆ: ಎಚ್‌ಡಿಕೆ ಹೇಳಿಕೆ | ಮೋದಿಗಿಂತ ಮೊದಲೇ ನನ್ನ ಸರ್ಕಾರದಲ್ಲಿ ಸ್ವಾವಲಂಬಿ ಕಲ್ಪನೆ

ಬೆಂಗಳೂರು(ಜ.10): ಆತ್ಮನಿರ್ಭರಕ್ಕೂ ಮೊದಲೇ ನನ್ನ ಸರ್ಕಾರ ಸ್ವಾವಲಂಬಿ ಕಲ್ಪನೆಯನ್ನು ಹೊಂದಿದ್ದು, ಚೀನಾ ಹಿಡಿತದಲ್ಲಿರುವ ಜಾಗತಿಕ ಉತ್ಪಾದನೆ ಮಾರುಕಟ್ಟೆಯಲ್ಲಿ ಭಾರತವೂ ಪಾಲು ಪಡೆಯಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿಯಾಗಿದ್ದ ವೇಳೆ ಕಾಂಪೀಟ್‌ ವಿತ್‌ ಚೀನಾ ರೂಪಿಸಲಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಕಾಂಪೀಟ್‌ ವಿತ್‌ ಚೀನಾ ಭಾಗವಾಗಿ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ ರಚಿಸಿ 500 ಕೋಟಿ ರು. ಹಣ ನೀಡಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆ ಕ್ಲಸ್ಟರ್‌ಗೆ ಮರು ಚಾಲನೆ ನೀಡಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಬೆಂಕಿ: 10 ನವಜಾತ ಶಿಶುಗಳ ದಾರುಣ ಸಾವು!

ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಆಟಿಕೆ ಉತ್ಪಾದನಾ ಘಟಕ ಆರಂಭಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಕೇಂದ್ರ ಸರ್ಕಾರ ಆತ್ಮನಿರ್ಭರ ಕಲ್ಪನೆ ಜಾರಿಗೆ ತರುವುದಕ್ಕೂ ಮೊದಲೇ ನನ್ನ ಸರ್ಕಾರ ಸ್ವಾವಲಂಬಿ ಕಲ್ಪನೆಯನ್ನು ಹೊಂದಿತ್ತು. ಅದರ ಭಾಗವಾಗಿಯೇ ಚೀನಾಕ್ಕೆ ಸಡ್ಡು ಹೊಡೆಯುವ ಯೋಜನೆಗಳನ್ನು ರೂಪಿಸಿತ್ತು ಎಂದು ಹೇಳಿದ್ದಾರೆ.

ಏಳು ಲಕ್ಷ ಕೋಟಿ ರು. ಮೊತ್ತದ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಚೀನಾ ಪ್ರಬಲ ಹಿಡಿತ ಹೊಂದಿದೆ. ಇದರಲ್ಲಿ ಅಲ್ಪ ಪಾಲು ಕಸಿದರೂ ನಮ್ಮವರಿಗೆ ಉದ್ಯೋಗ ನೀಡಬಹುದು, ಆದಾಯ ಕೊಡಿಸಬಹುದು ಎಂಬುದು ನನ್ನ ಸರ್ಕಾರದ ದೂರದೃಷ್ಟಿಯಾಗಿತ್ತು. ಅದಕ್ಕೆ ಮರುಚಾಲನೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

click me!