ಇಂದಿನಿಂದ ಬ್ರಿಟನ್‌ ವಿಮಾನ ಶುರು, ಬೆಂಗಳೂರಿಗೆ ಬರಲಿದೆ ವಿಮಾನ!

By Suvarna NewsFirst Published Jan 10, 2021, 7:16 AM IST
Highlights

ಇಂದಿನಿಂದ ಬ್ರಿಟನ್‌ ವಿಮಾನ ಶುರು| ಪ್ರಯಾಣಿಕರಿಗೆ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯ| ಬಂದ ಮೇಲೂ ಪರೀಕ್ಷೆ| ಬೆಂಗಳೂರು ಏರ್‌ಪೋರ್ಟಲ್ಲಿ ಸಿದ್ಧತೆ ಪರಿಶೀಲಿಸಿದ ಆರೋಗ್ಯ ಸಚಿವ ಸುಧಾಕರ್‌

ಬೆಂಗಳೂರು(ಜ.10): ರೂಪಾಂತರಿ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಬ್ರಿಟನ್‌ ವಿಮಾನಯಾನ ಭಾನುವಾರದಿಂದ (ಜ.10) ಪುನಾರಂಭಗೊಳ್ಳಲಿದ್ದು, ಬೆಳಗಿನ ಜಾವ 4ಕ್ಕೆ ಬ್ರಿಟನ್‌ ಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಶನಿವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಬ್ರಿಟನ್‌ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ನಡೆಸುವುದು ಸೇರಿದಂತೆ ಸರ್ಕಾರದ ಮಾರ್ಗಸೂಚಿ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲನೆ ನಡೆಸಿದರು.

ಇದೇ ವೇಳೆ ಬ್ರಿಟನ್‌ನಿಂದ ಹಿಂತಿರುಗುವ ಪ್ರಯಾಣಿಕರು ಕೋವಿಡ್‌ ನೆಗೆಟಿವ್‌ ವರದಿ ಹೊಂದಿರಬೇಕು, ವಿಮಾನ ನಿಲ್ದಾಣದಲ್ಲೇ ಮತ್ತೆ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು ಎಂಬುದು ಸೇರಿದಂತೆ ಒಟ್ಟು 14 ಅಂಶಗಳ ಹೊಸ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಪ್ರಕಟಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸಲು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದೆ.

ಪ್ರತಿ ವಿಮಾನದಲ್ಲಿ 300 ಮಂದಿ ಆಗಮನ:

ಬ್ರಿಟನ್‌ನಿಂದ ಕೆಲ ದಿನಗಳ ನಂತರ ಮತ್ತೆ ವಿಮಾನ ಹಾರಾಟ ಪುನಾರಂಭವಾಗಿರುವ ಹಿನ್ನೆಲೆಯಲ್ಲಿ ಪ್ರತಿ ವಿಮಾನದಲ್ಲೂ ಸುಮಾರು 300ರಿಂದ 350 ಜನರು ಬರುವ ಸಾಧ್ಯತೆ ಇದೆ. ಭಾನುವಾರ ಬೆಳಗ್ಗೆ 4 ಗಂಟೆಗೆ ಮೊದಲ ವಿಮಾನ ಕೆಐಎಲ್‌ಗೆ ಬಂದಿಳಿಯಲಿದೆ ಎಂದು ಈ ವೇಳೆ ಸಚಿವರಿಗೆ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್‌, ಬ್ರಿಟನ್‌ನಿಂದ ಬರುವ ಪ್ರಯಾಣಿಕರಿಗೆ 72 ಗಂಟೆಯೊಳಗೆ ಮಾಡಿಸಿದ ಕೋವಿಡ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ರಾಜ್ಯಕ್ಕೆ ಬಂದಿಳಿಯುತ್ತಿದ್ದಂತೆ ಮತ್ತೊಮ್ಮೆ ವಿಮಾಣ ನಿಲ್ದಾಣದಲ್ಲೇ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ, ಪಾಸಿಟಿವ್‌ ಬಂದವರನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಅಥವಾ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ಕ್ರಮ ವಹಿಸಲಾಗುವುದು. ಈ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದ್ದು, ಅದರಂತೆ ರೂಪಾಂತರಿ ವೈರಾಣು ಹರಡದಂತೆ ತಡೆಯಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

click me!