ಬೆಂಗಳೂರಲ್ಲಿ 1507 ಕೇಂದ್ರದಲ್ಲಿ ಲಸಿಕೆಗೆ ವ್ಯವಸ್ಥೆ

By Kannadaprabha NewsFirst Published Jan 10, 2021, 7:34 AM IST
Highlights

ನಗರದ 1507 ಕೇಂದ್ರದಲ್ಲಿ ಲಸಿಕೆಗೆ ವ್ಯವಸ್ಥೆ | ಪ್ರತಿ ಕೇಂದ್ರದಲ್ಲಿ ತಲಾ 100 ಮಂದಿಗೆ ಲಸಿಕೆ | ಕೇಂದ್ರದಲ್ಲಿ 1 ಆ್ಯಂಬುಲೆನ್ಸ್‌ ನಿಯೋಜನೆ: ಮಂಜುನಾಥ್‌ ಪ್ರಸಾದ್‌ | 5 ಕೇಂದ್ರದ ಮೇಲ್ವಿಚಾರಣೆಗೆ ಒಬ್ಬರಂತೆ 300 ಸೆಕ್ಟರ್‌ ಅಧಿಕಾರಿಗಳ ನಿಯೋಜನೆ | ಅವರಿಗೆ ಸಂಪೂರ್ಣ ಜವಾಬ್ದಾರಿ

ಬೆಂಗಳೂರು(ಜ.10): ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ಹಂತದ ಕೋವಿಡ್‌ ಲಸಿಕೆ ಹಾಕುವುದಕ್ಕೆ 1,507 ಕೇಂದ್ರಗಳನ್ನು ಗುರುತಿಸಲಾಗಿದ್ದು, ಮೇಲ್ವಿಚಾರಣೆಗೆ 300 ಸೆಕ್ಟರ್‌ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಲಸಿಕೆ ಹಂಚಿಕೆ ಹಾಗೂ ಕೋವಿಡ್‌ ಸೋಂಕಿತರ ಸಂಪರ್ಕ ಪತ್ತೆಗೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಶನಿವಾರ ಮಲ್ಲೇಶ್ವರದ ಐಪಿಪಿ ಕಚೇರಿಯಲ್ಲಿ ಸಭೆ ನಡೆಸಿದರು.

ಜಮೀರ್ ಅಹ್ಮದ್‌ ಖಾನ್‌ಗೆ ಕೇಸರಿ ಶಾಲು ಹಾಕಿ ಸನ್ಮಾನಿಸಿದ ತೇಜಸ್ವಿ ಸೂರ್ಯ: ಕಾರಣ..?

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮರ್ಪಕವಾಗಿ ಯೋಜನೆ ರೂಪಿಸಿಕೊಂಡು ನಗರದಲ್ಲಿ ಕೋವಿಡ್‌ ಮೊದಲ ಹಂತದ ಲಸಿಕೆ ಅಭಿಯಾನ ಯಶಸ್ವಿಗೊಳಿಸಬೇಕಿದೆ. ಸಂಕ್ರಾಂತಿಯ ವೇಳೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಬಿಬಿಎಂಪಿ ಸಹ ಲಸಿಕೆ ಹಾಕುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರದಲ್ಲಿ ಒಟ್ಟು 1,507 ಕೋವಿಡ್‌ ಲಸಿಕಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ಪ್ರತಿ ಐದು ಕೇಂದ್ರದ ಮೇಲ್ವಿಚಾರಣೆಗೆ ಒಬ್ಬರಂತೆ 300 ಸೆಕ್ಟರ್‌ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಸೆಕ್ಟರ್‌ ಅಧಿಕಾರಿಗಳು ಲಸಿಕಾ ಕೇಂದ್ರದ ಸಂಪೂರ್ಣ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಪ್ರತಿ ಲಸಿಕಾ ಕೇಂದ್ರದಲ್ಲಿ ದಿನಕ್ಕೆ 100 ಮಂದಿಗೆ ಲಸಿಕೆ ಹಾಕುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಲಸಿಕೆ ಪಡೆದ ವ್ಯಕ್ತಿಗೆ ಆರೋಗ್ಯದಲ್ಲಿ ಏರುಪೇರಾದಲ್ಲಿ ಕೂಡಲೆ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಪ್ರತಿ ಲಸಿಕಾ ಕೇಂದ್ರಕ್ಕೂ ಒಂದು ಆ್ಯಂಬುಲೆನ್ಸ್‌ ಹಾಗೂ ಆಸ್ಪತ್ರೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿ ಲಸಿಕಾ ಕೇಂದ್ರಕ್ಕೆ ಅಗತ್ಯವಿರುವ ಸಿಬ್ಬಂದಿ ನಿಯೋಜಿಸಲಾಗಿದೆ. ಲಸಿಕಾ ಕೇಂದ್ರದಲ್ಲಿ ಕಾಯುವ ಕೊಠಡಿ, ಲಸಿಕೆ ನೀಡುವ ಕೊಠಡಿ ಹಾಗೂ ನಿಗಾ ಕೊಠಡಿಗಳಿರಲಿವೆ. ಲಸಿಕೆ ನೀಡುವ ಕೇಂದ್ರಗಳಲ್ಲಿ ನಿರ್ದೇಶನ ನಾಮಫಲಕ, ಕುಡಿಯುವ ನೀರು, ಕುರ್ಚಿ ಹಾಗೂ ಕಂಪ್ಯೂಟರ್‌ ಮತ್ತು ಇಂಟರ್‌ನೆಟ್‌ ಸೌಲಭ್ಯ ಸೇರಿದಂತೆ ಇನ್ನಿತರೆ ವ್ಯವಸ್ಥೆ ಮಾಡಬೇಕು. ಈ ಕುರಿತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರಿಂದ ದೂರಿನ ಸುರಿಮಳೆ: ವ್ಹೀಲಿಂಗ್‌ ಮಾಡಿದ್ರೆ ಕ್ರಿಮಿನಲ್‌ ಕೇಸ್

ನಗರದಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಲು 1,75 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಕೋವಿನ್‌ ಪೋರ್ಟಲ್‌ನಲ್ಲಿ ದಾಖಲಿಸಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುತ್ತಿದ್ದು, ಎರಡನೇ ಹಂತದಲ್ಲಿ ಕೋವಿಡ್‌ ಸಮಯದಲ್ಲಿ ಕಾರ್ಯನಿರ್ವಹಿಸಿರುವ ಪಾಲಿಕೆ ಸಿಬ್ಬಂದಿ, ಶಿಕ್ಷಕರು, ಪೊಲೀಸ್‌ ಸಿಬ್ಬಂದಿ, ಕಂದಾಯ ಅಧಿಕಾರಿಗಳು ಸೇರಿದಂತೆ ಮುನ್ನೆಲೆಯಲ್ಲಿ ನಿಂತು ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು.

ಮೂರನೇ ಹಂತದ ಲಸಿಕಾ ಅಭಿಯಾನಕ್ಕೆ ಮತದಾರರ ಪಟ್ಟಿಯ ಆಧಾರಿಸಿ 50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಮತ್ತು 50 ವರ್ಷಕ್ಕಿಂತ ಕಡಿಮೆ ಇದ್ದು ವಿವಿಧ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಲಸಿಕೆ ನೀಡಲಾಗುತ್ತದೆ ಎಂದು ವಿವರಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್‌, ಜೆ.ಮಂಜುನಾಥ್‌, ಮನೋಜ್‌ ಜೈನ್‌, ಬಸವರಾಜು, ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿ ಡಾ ವಿಜೇಂದ್ರ, ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

click me!