
ಬೆಂಗಳೂರು: ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ತಲೆದೋರಿರುವ ಕುಡಿಯುವ ನೀರು ಮತ್ತು ಕೃಷಿ ಬಿಕ್ಕಟ್ಟಿನ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಪರಿಹಾರ ಒದಗಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಆರು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಕಾವೇರಿ ಜಲ ನಿರ್ವಹಣೆಯಲ್ಲಿರುವ ಪ್ರಮುಖ ದೋಷಗಳು, ಪ್ರಾಧಿಕಾರಕ್ಕೆ ನೀಡಿರುವ ಸಂವಿಧಾನಬಾಹಿರ ಅಧಿಕಾರಗಳು ಹಾಗೂ ಮೇಕೆದಾಟು ಯೋಜನೆ ಅನುಷ್ಠಾನದ ತುರ್ತು ಅಗತ್ಯವನ್ನು ಎಳೆಎಳೆಯಾಗಿ ವಿವರಿಸಲಾಗಿದೆ. ರಾಷ್ಟ್ರೀಯ ಜಲನೀತಿ ಅಡಿಯಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುವ ಕುರಿತು ಪ್ರಧಾನಿ ಅವರ ಗಮನ ಸೆಳೆದಿದ್ದಾರೆ.
1990ರಲ್ಲಿ ರಚನೆಯಾದ ನ್ಯಾಯಮಂಡಳಿ, ಇತಿಹಾಸದಲ್ಲೇ ಮೊದಲ ಬಾರಿಗೆ 12 ತಿಂಗಳ ಮಾಸಿಕ ಬಿಡುಗಡೆ ವೇಳಾಪಟ್ಟಿಯನ್ನು ನಿಗದಿಪಡಿಸುವ ಅಸಹಜ ಮಧ್ಯಂತರ ಆದೇಶ ನೀಡಿತು. 2007ರ ಅಂತಿಮ ತೀರ್ಪಿನಲ್ಲೂ ಕರ್ನಾಟಕಕ್ಕೆ ನ್ಯಾಯಸಮ್ಮತವಾಗಿ ಸಿಗಬೇಕಿದ್ದ ಪ್ರಮಾಣಕ್ಕಿಂತ ಕಡಿಮೆ ನೀರನ್ನು ಹಂಚಿಕೆ ಮಾಡುವ ಮೂಲಕ ಸ್ಪಷ್ಟ ತಾರತಮ್ಯ ಮಾಡಲಾಗಿದೆ ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಲಸಂಪನ್ಮೂಲ ಸಚಿವಾಲಯವು 2018ರಲ್ಲಿ ಸಿದ್ಧಪಡಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕರಡು ಯೋಜನೆಯು ರಾಜ್ಯಗಳ ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ.
ತಮಿಳುನಾಡು ಸರ್ಕಾರವು ಮೇಕೆದಾಟು ವಿಚಾರಕ್ಕೆ ಸಂಬಂಧಿಸಿ ಹೊಸ ನ್ಯಾಯಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ದೂರು ಸಲ್ಲಿಸಿದೆ. ಪ್ರಸ್ತಾವಿತ ಹೊಸ ನ್ಯಾಯಮಂಡಳಿ ರಚನೆಯಾದಾಗ, ಹಳೆಯ ಕಾವೇರಿ ತೀರ್ಪಿನ ಮರು ಪರಿಶೀಲನೆಯ ಜವಾಬ್ದಾರಿಯನ್ನೂ ಅದೇ ನ್ಯಾಯಮಂಡಳಿಗೆ ವಹಿಸಬೇಕು ಎಂದು ಅವರು ಕೋರಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮೇಕೆದಾಟು ಕುಡಿಯುವ ನೀರು ಸರಬರಾಜು ಯೋಜನೆ ಅತ್ಯಂತ ಅಗತ್ಯವಾಗಿದೆ. ಈ ಸಂಬಂಧ ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯುಸಿ) ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಲ್ಲಿಸಲಾಗಿದ್ದು, ಆದ್ಯತೆ ಮೇರೆಗೆ ಅನುಮೋದನೆ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯೂಡಿಎ) ಯೋಜಿಸುತ್ತಿರುವ ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಒಟ್ಟು 147.7 ಟಿಎಂಸಿ ಪೈಕಿ ಕರ್ನಾಟಕಕ್ಕೆ ಕೇವಲ 15.9 ಟಿಎಂಸಿ ನೀರು ತಾತ್ಕಾಲಿಕವಾಗಿ ಹಂಚಿಕೆಯಾಗಿದೆ. ಈ ಪ್ರಮಾಣ ಇತರ ರಾಜ್ಯಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದ್ದು, ಸಮಾನತೆ ಮತ್ತು ನೈಸರ್ಗಿಕ ನ್ಯಾಯದ ಆಧಾರದ ಮೇಲೆ ಕರ್ನಾಟಕದ ಹಂಚಿಕೆಯನ್ನು ಹೆಚ್ಚಿಸುವಂತೆಯೂ ದೇವೇಗೌಡರು ಆಗ್ರಹಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ರಾಜ್ಯವು ಭಾರೀ ಮಳೆ ಕೊರತೆ ಎದುರಿಸುತ್ತಿದೆ. ಕೇವಲ ಶೇ.60ರಷ್ಟು ಮಾತ್ರ ಮಳೆಯಾಗಿದೆ. ಇದರಿಂದಾಗಿ ರಾಜ್ಯದ ಜಲಾಶಯಗಳು ತಮ್ಮ ಸಾಮರ್ಥ್ಯದ ಶೇ.50-55ರಷ್ಟು ಮಾತ್ರ ತುಂಬಿವೆ. ಇಂತಹ ಭೀಕರ ಪರಿಸ್ಥಿತಿಯಲ್ಲೂ ಮುಂಬರುವ ಬೇಸಿಗೆಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಕಾಯ್ದಿರಿಸಬೇಕಾದ ಅಲ್ಪ ನೀರನ್ನೂ ತಮಿಳುನಾಡಿನ ಕೃಷಿ ಅಗತ್ಯಗಳಿಗೆ ಬಿಡುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಪದೇ ಪದೆ ನಿರ್ದೇಶನ ನೀಡುತ್ತಿರುವುದು ಆತಂಕಕಾರಿ ಎಂದು ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕಕ್ಕೆ ಹಂಚಿಕೆಯಾದ ನೀರನ್ನು ತನ್ನ ಹಿತಾಸಕ್ತಿಗೆ ಅನುಗುಣವಾಗಿ ಬಳಸುವ ಸ್ವಾತಂತ್ರ್ಯವಿದೆ. ಅದಕ್ಕೆ ಹಂಚಿಕೆಯಾದ ನೀರಿನ ಪ್ರಮಾಣ ಕಡಿಮೆಯಾಗದ ಹೊರತು ಬೇರೆ ಯಾವುದೇ ರಾಜ್ಯ ಈ ವಿಷಯದಲ್ಲಿ ಹಸ್ತಕ್ಷೇಪಿಸುವ ಹಕ್ಕಿಲ್ಲ ಎಂಬ 2025ರ ನ.13ರ ಸುಪ್ರೀಂ ಕೋರ್ಟ್ ಆದೇಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಆದೇಶದ ಅನ್ವಯ, ಸಿಡಬ್ಲ್ಯೂಎಂಎ ಅಧಿಕಾರವನ್ನು ಕೇವಲ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಬಿಳಿಗುಂಡ್ಲು ಅಳತೆ ಕೇಂದ್ರದಲ್ಲಿ ನೀರಿನ ಹರಿವಿನ ಮೇಲ್ವಿಚಾರಣೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಗೌಡರು ಒತ್ತಾಯಿಸಿದ್ದಾರೆ.
ಸಂವಿಧಾನದ 7ನೇ ಅನುಸೂಚಿಯ ರಾಜ್ಯಪಟ್ಟಿಯ ನಮೂದು 17ರ ಪ್ರಕಾರ ನೀರಾವರಿ ಎಂಬುದು ಸಂಪೂರ್ಣವಾಗಿ ರಾಜ್ಯಗಳ ವ್ಯಾಪ್ತಿಗೆ ಬರುವ ವಿಷಯವಾಗಿದೆ. ಆದರೆ, ಕಾವೇರಿ ನೀರಿನ ಸಂಗ್ರಹ, ಹಂಚಿಕೆ, ಬೆಳೆ ಪದ್ಧತಿಯ ಬದಲಾವಣೆ ಮತ್ತು ಜಲಾಶಯಗಳ ಕಾರ್ಯಾಚರಣೆಯಂಥ ಸೂಕ್ಷ್ಮ ವಿಚಾರಗಳಲ್ಲಿ ಪ್ರಾಧಿಕಾರಕ್ಕೆ ಹಸ್ತಕ್ಷೇಪ ಮಾಡಲು ವ್ಯಾಪಕ ಅಧಿಕಾರ ನೀಡಿರುವುದು ಸಂವಿಧಾನಬಾಹಿರ
ನ್ಯಾಯಮಂಡಳಿಯ ತೀರ್ಪುಗಳ ಮರುಪರಿಶೀಲನೆ ಅಗತ್ಯ
ಕಾವೇರಿ ನ್ಯಾಯಮಂಡಳಿಯು 50 ವರ್ಷಗಳಿಗಿಂತ ಹಳೆಯ ದತ್ತಾಂಶಗಳ ಆಧಾರದ ಮೇಲೆ ನೀರು ಹಂಚಿಕೆ ಮಾಡಿದೆ. ಪ್ರಸ್ತುತ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಮುಂಗಾರು ಚಕ್ರ ಸಂಪೂರ್ಣವಾಗಿ ಅನಿಶ್ಚಿತವಾಗಿದೆ. ಹೀಗಾಗಿ, ಬದಲಾಗಿರುವ ಪ್ರಸ್ತುತ ಪರಿಸ್ಥಿತಿಗಳಿಗೆ ಅನುಗುಣವಾಗಿ ನ್ಯಾಯಮಂಡಳಿಯ ತೀರ್ಪು ಹಾಗೂ ಸುಪ್ರೀಂ ಕೋರ್ಟಿನ 2018ರ ಆದೇಶಗಳನ್ನು ಸಮಗ್ರವಾಗಿ ಮರುಪರಿಶೀಲಿಸುವ ಕಾಲ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ