
ಹಾವೇರಿ (ಮೇ.4): ಎಸ್ಸೆಸ್ಸೆಲ್ಸಿ ಪರೀಕ್ಷೆ ಇನ್ನೇನು 15 ದಿನ ಬಾಕಿ ಇರುವಾಗ ಹೃದಯಾಘಾತದಿಂದ ತಾಯಿ ತೀರಿಕೊಂಡ ದುಃಖದಲ್ಲೇ ಓದಿ, ಪರೀಕ್ಷೆ ಎದುರಿಸಿದ ಹಾನಗಲ್ಲ ತಾಲೂಕಿನ ಕೂಡಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಅನ್ನಪೂರ್ಣ ಬಾಳಿಕಾಯಿ 612 ಅಂಕ ಪಡೆಯುವ ಮೂಲಕ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.
ಕೃಷಿ ಕುಟುಂಬದ ಅನ್ನಪೂರ್ಣ ಬಸವರಾಜ ಬಾಳಿಕಾಯಿ ಕನ್ನಡಕ್ಕೆ 125, ಹಿಂದಿ 100 ಹಾಗೂ ಸಮಾಜ ವಿಜ್ಞಾನಕ್ಕೆ 100 ಅಂಕಗಳನ್ನು ಪಡೆದ್ದಾಳೆ. ಇಂಗ್ಲಿಷ್ 95, ಗಣಿತ 98 ಹಾಗೂ ವಿಜ್ಞಾನ ವಿಷಯದಲ್ಲಿ 94 ಅಂಕ ಪಡೆದಿದ್ದಾಳೆ. ಇವಳ ತಾಯಿ ರತ್ನವ್ವ ಮಾ. 1ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಇದಾಗಿ ಕೇವಲ 15 ದಿನಗಳಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆದಿದ್ದು, ತಾಯಿ ತೀರಿಕೊಂಡ ದುಃಖದಲ್ಲೇ ಅಭ್ಯಾಸ ಮಾಡಿ ಉತ್ತಮ ಅಂಕ ಪಡೆದಿದ್ದಾಳೆ. ತನ್ನ ಈ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಕುಟುಂಬದವರ ಸಹಕಾರವನ್ನು ಸ್ಮರಿಸುವ ಅನ್ನಪೂರ್ಣ, ಮುಂದೆ ಚೆನ್ನಾಗಿ ಓದಿ ತಾಯಿಯ ಕನಸು ನನಸಾಗಿಸಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾಳೆ.
ಇದನ್ನೂ ಓದಿ: SSLC ಗ್ರೇಸ್ ಅಂಕಗಳ ರಹಸ್ಯ: ಫಲಿತಾಂಶದ ಹಿಂದಿನ ಗುಟ್ಟೇನು?
ಕಾವಲುಗಾರನ ಮಗ ಜಿಲ್ಲೆಗೆ ಎರಡನೇ ಸ್ಥಾನ
ರಾಣಿಬೆನ್ನೂರು: ನಗರದ ಬೈಕ್ ಶೋರೂಮ್‌ನ ಕಾವಲುಗಾರನಾಗಿ ಕೆಲಸ ಮಾಡುವ ವ್ಯಕ್ತಿಯ ಪುತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 99.52 ಅಂಕಗಳನ್ನು ಪಡೆದು ಜಿಲ್ಲೆಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ತಾಲೂಕಿನ ಮಾಕನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಯ ವಿದ್ಯಾರ್ಥಿ ಪೃಥ್ವೀಶ ಗೋವಿಂದಪ್ಪ ಗೊಲ್ಲರಹಳ್ಳಿ ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳನ್ನು ಪಡೆದು(ಶೇ. 99.52) ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾನೆ.
ಇದನ್ನೂ ಓದಿ: SSLC Result 2025: ಕಲಬುರಗಿ ಫಲಿತಾಂಶದಲ್ಲಿ ಈ ಪರಿ ಕುಸಿತಕ್ಕೆ ಕಾರಣಗಳೇನು?
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಪೃಥ್ವೀಶ, ಪ್ರತಿದಿನ 12 ಗಂಟೆಗಳ ಕಾಲ ಅಭ್ಯಾಸ ಮಾಡಿದ ಫಲ ಮತ್ತು ನಮ್ಮ ಶಿಕ್ಷಕರು ನಮ್ಮ ಮೇಲೆ ಹೆಚ್ಚಿನ ಕಾಳಜಿ ತೋರುವುದರೊಂದಿಗೆ ಉತ್ತಮ ಶಿಕ್ಷಣ ನೀಡಿದ್ದರಿಂದ ನಾನು ಸಾಧನೆ ಮಾಡಲು ಸಾಧ್ಯವಾಯಿತು ಎಂದನು.
ಸಾಧನೆಗೆ ಕಾರಣ: ವಿದ್ಯಾರ್ಥಿ ಪೃಥ್ವೀಶ ಎಲ್ಲ ವಿದ್ಯಾರ್ಥಿಗಳೊಂದಿಗೆ ಸ್ನೇಹ ಭಾವನೆಯಿಂದ ನಡೆದುಕೊಳ್ಳುವ ಜತೆಗೆ ಶಿಕ್ಷಕರು ಹೇಳಿದ ಪಾಠಗಳನ್ನು ಅಂದೇ ಮನನ ಮಾಡಿಕೊಳ್ಳುವುದು ಅವನ ಸಾಧನೆಗೆ ಕಾರಣವಾಗಿದೆ ಎಂದು ಮೊರಾರ್ಜಿ ಶಾಲೆಯ ಪ್ರಾಚಾರ್ಯ ಮುಸ್ತಾಪ್ ಶೇತಸನದಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ