ರಾಜ್ಯದಲ್ಲಿ ಯಶಸ್ವಿಯಾಗದ ಮೋಡ ಬಿತ್ತನೆ ಕಾರ್ಯ ಬೇಡವೆಂದಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆದು ಶಾಸಕ ಪ್ರಕಾಶ್ ಕೋಳಿವಾಡ, ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಆರಂಭಿಸಿದ್ದಾರೆ.
ಹಾವೇರಿ (ಸೆ.03): ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮೂಲಕ ಬೆಳೆಗಳನ್ನು ಕಾಪಾಡುವ ಬಗ್ಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣಬೈರೇಗೌಡ ಚಿಂತನೆ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋಡ ಬಿತ್ತನೆ ಮಾಡುವುದಿಲ್ಲ. ಯಾವಾಗ ಮೋಡ ಬಿತ್ತನೆ ಮಾಡಿದರೂ ಯಶಸ್ವಿಯಾಗಿಲ್ಲ ಎಂದು ಹೇಳಿದ್ದರು. ಆದರೆ, ಈಗ ಸ್ವಪಕ್ಷೀಯ ಶಾಸಕ ಪ್ರಕಾಶ್ ಕೋಳಿವಾಡ ಅವರು ಸರ್ಕಾರಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆದು ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಮುಂದಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ ಕೋಳಿವಾಡ ಅವರು, ಹಾವೇರಿ ಜಿಲ್ಲೆಯಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಮೋಡ ಬಿತ್ತನೆ ಮಾಡಲಾಗುವುದು ನಮ್ಮ ಪಿಕೆಕೆ (ಪಕ್ಷಾತೀತ ಕಾಯಕದ ಕನಸು) ಸಂಸ್ಥೆಯ ವತಿಯಿಂದ ಈ ಮೋಡ ಬಿತ್ತನೆ ಮಾಡಲಾಗುತ್ತಿದೆ. ಸೆ.4ರಂದು ಮಧ್ಯಾಹ್ನ 2ಕ್ಕೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಸರ್ಕಾರದಿಂದ ಯೋಜನೆಯನ್ನು ಕೈ ಬಿಟ್ಟರೂ, ಶಾಸಕ ಪ್ರಕಾಶ ಕೋಳಿವಾಡ ಮಾತ್ರ ಮೋಡ ಬಿತ್ತನೆ ಮಾಡಿಯೇ ತಿರುತ್ತೇನೆ ಎಂದು ಸಿದ್ಧವಾಗಿದ್ದಾರೆ.
undefined
ಮೋಡ ಬಿತ್ತನೆ ಕಾರ್ಯಕ್ಕೆ ಎಳ್ಳು ನೀರು ಬಿಟ್ಟ ಸಿಎಂ ಸಿದ್ದರಾಮಯ್ಯ: ಕೃಷಿ ಸಚಿವರ ಚಿಂತನೆ ಠುಸ್!
ಇನ್ನು ವಿಮಾನ ಮೂರು ದಿನಗಳ ಕಾಲ ಸ್ಥಳೀಯವಾಗಿ ಲಭ್ಯವಿದ್ದು, ಮೋಡಗಳ ಲಭ್ಯತೆಯ ಅನುಗುಣವಾಗಿ ಅಲ್ಲಲ್ಲಿ ಮೋಡಬಿತ್ತನೆ ಮಾಡಲಿದೆ. ಈ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹೆಚ್ಚಿನ ಮೋಡಗಳು ಸಿಗಲಿವೆ ಎನ್ನುವ ಮಾಹಿತಿಯಿದೆ. ಈಗಾಗಲೇ ಮೋಡಬಿತ್ತನೆ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದುಕೊಳ್ಳಲಾಗಿದೆ. ಸಚಿವರಾದ ಶಿವಾನಂದ ಪಾಟೀಲ, ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಸಂತೋಷ ಲಾಡ್ ಹಾಗೂ ಹಾವೇರಿ, ಧಾರವಾಡ ಜಿಲ್ಲೆಗಳ ಶಾಸಕರು ಈ ಮೋಡ ಬಿತ್ತನೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಹವಾಮಾನ ಇಲಾಖೆಯಿಂದ ಮಾಹಿತಿ: ಇನ್ನು ಜಿಲ್ಲೆಯಲ್ಲಿ ಮಳೆಯ ಮೋಡಗಳು ಹೆಚ್ಚಾಗಿರುವ ಅವಧಿಯ ಬಗ್ಗೆ ಮಾಹಿತಿ ಕಲೆ ಹಾಕಿರುವ ಶಾಸಕ ಪ್ರಕಾಶ್ ಕೋಳಿವಾಡ ಅವರು, ರಾಜ್ಯ ಹವಾಮಾನ ಇಲಾಖೆಯ ಸಂಪೂರ್ಣ ಮಾಹಿತಿಯನ್ನು ಆಧರಿಸಿ ಮೋಡ ಬಿತ್ತನೆ ಕಾರ್ಯವನ್ನು ಕೈಗೊಂಡಿದ್ದಾರೆ. ಮುಂದಿನ ಊರು ದಿನಗಳ ಕಾಲ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಸುರಿಸುವ ಮೋಡಗಳು ಕಂಡುಬರಲಿವೆ. ಈ ವೇಳೆ ಮೋಡಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಬಿತ್ತನೆ ಮಾಡುವ ಮೂಲಕ ಮಳೆ ಸುರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಕರುನಾಡಿಗೆ ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲು ನಿರ್ಧಾರ
ಮೋಡ ಬಿತ್ತನೆಗೆ ಬೇಡವೆಂದಿದ್ದ ಸಿಎಂ ಸಿದ್ದರಾಮಯ್ಯ: ಬರಗಾಲ ಪರಿಸ್ಥಿತಿ ನಿರ್ವಹಣೆ ವಿಚಾರವಾಗಿ ಆ.28ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೋಡ ಬಿತ್ತನೆ ಯಾವ ಕಾಲದಲ್ಲೂ ಯಶಸ್ವಿಯಾಗಿಲ್ಲ. ಮೋಡ ಬಿತ್ತನೆಯಿಂದ ಯಾವುದೇ ಪ್ರಯೋಜನೆ ಇಲ್ಲ. ಬರಕ್ಕೆ ಬೇಕಾದಂತಹ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಮೊದಲು ಬರ ಪೀಡಿತ ಪ್ರದೇಶ ಘೋಷಣೆ ಮಾಡಲಾಗುವುದು ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಕೇಂದ್ರ ಸರ್ಕಾರ ಬರಗಾಲ ನಿರ್ವಹಣೆಗೆ ಬೇಕಾದ ನೆರವು ನೀಡುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ (NDRF) ನಿಯಮಾನುಸಾರ ಕೇಂದ್ರದಿಂದ ಪರಿಹಾರ ನೀಡಲಾಗುತ್ತದೆ. ಇನ್ನು ರಾಜ್ಯ ಸರ್ಕಾರಕ್ಕೆ ಕೇಂದ್ರದ ನೆರವು ಬಂದ ನಂತರ ತಾಲೂಕುವಾರು ನಾವು ನಿರ್ವಹಣೆ ಮಾಡುತ್ತೇವೆ ಎಂದು ತಿಳಿಸಿದ್ದರು.