
- ವಿಧಾನ ಪರಿಷತ್ ಮುಖ್ಯ ಸಚೇತಕ
ದ್ವೇಷಭಾಷಣ ತಡೆ ಮಸೂದೆ ಇದೀಗ ಪಾಸಾಗಿದೆ. ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಹಾಗೂ ಸೌಹಾರ್ದತೆ ಕಾಪಾಡಲು ವಿಧೇಯಕ ಅನಿವಾರ್ಯವಾಗಿತ್ತು!
ಹೌದು.. ಇಂದಿನ ಸಮಾಜದಲ್ಲಿ ಮಾತಿನ ಶಕ್ತಿ ಬಹಳ ದೊಡ್ಡದು. ಒಳ್ಳೆಯ ಮಾತು ಸಮಾಜವನ್ನು ಕಟ್ಟುತ್ತದೆ, ಆದರೆ ದ್ವೇಷದಿಂದ ಕೂಡಿದ ಮಾತು ಸಮಾಜವನ್ನು ಒಡೆಯುತ್ತದೆ. ದ್ವೇಷ ಭಾಷಣ ಮಸೂದೆಯನ್ನು ವಿರೋಧ ಪಕ್ಷಗಳು ರಾಜಕೀಯವಾಗಿ ಬಿಂಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ರಾಜಕೀಯ ಭಾಷಣಕ್ಕೋ , ರಾಜಕೀಯ ದ್ವೇಷಕ್ಕೋ ಸೀಮಿತವಲ್ಲ. ಬದಲಾಗಿ ಧರ್ಮ, ಜಾತಿ, ಭಾಷೆ, ಲಿಂಗ ಅಥವಾ ಸಮುದಾಯದ ಆಧಾರದಲ್ಲಿ ಜನರ ವಿರುದ್ಧ ದ್ವೇಷ ಹರಡುವ ಮಾತುಗಳನ್ನಾಡುವುದಾಗಿದೆ.
ದ್ವೇಷ ಭಾಷಣ ಪ್ರಕರಣಗಳು ಇಂದು ಜೋರಾಗಿವೆ. ದ್ವೇಷ ಭಾಷಣವು ಸಮಾಜಕ್ಕೆ ದೊಡ್ಡ ಅಪಾಯ ಆಗಿರುವುದರಿಂದ ರಾಜ್ಯ ಸರ್ಕಾರವು ದ್ವೇಷ ಭಾಷಣ ಮಸೂದೆ ಜಾರಿಗೆ ತರಲು ಮುಂದೆ ಬಂತು. ದ್ವೇಷ ಭಾಷಣ ಸಮಾಜದಲ್ಲಿ ಅಶಾಂತಿ ಮತ್ತು ಹಿಂಸೆಯನ್ನು ಹುಟ್ಟಿಸುತ್ತದೆ. ಒಂದು ಸಮುದಾಯದ ವಿರುದ್ಧ ಹೇಳುವ ದ್ವೇಷಪೂರ್ಣ ಮಾತುಗಳು ಮತ್ತೊಂದು ಸಮುದಾಯದ ಭಾವನೆಗಳನ ನೋಯಿಸಿ ಗಲಭೆ, ಹಿಂಸೆ ಮತ್ತು ದ್ವೇಷಕ್ಕೆ ಕಾರಣವಾಗುತ್ತವೆ. ಇವು ರಾಜ್ಯದ ಶಾಂತಿ ಮತ್ತು ಏಕತೆಗೆ ಧಕ್ಕೆಯಾಗುತ್ತವೆ.
ಪ್ರಸ್ತುತ ಕಾಲಘಟ್ಟದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಹೆಚ್ಚಾದಂತೆ ದ್ವೇಷಭಾಷಣ ಕೂಡ ವೇಗವಾಗಿ ಹರಡುತ್ತಿದೆ. ಒಂದು ತಪ್ಪು ಅಥವಾ ದ್ವೇಷದ ಸಂದೇಶ ಕೆಲವೇ ಕ್ಷಣಗಳಲ್ಲಿ ಸಾವಿರಾರು ಜನರಿಗೆ ತಲುಪುತ್ತದೆ. ಇದರಿಂದ ತಪ್ಪು ಮಾಹಿತಿ, ಭಯ ಮತ್ತು ದ್ವೇಷ ಸಮಾಜದಾದ್ಯಂತ ಹರಡುತ್ತದೆ.
ಇದರಿಂದ ಯುವಕರಲ್ಲಿ ಕೋಮುಭಾವನೆಯ ಕಿಡಿ ಹೊತ್ತಿ ಕೋಮುಗಲಭೆ ಉಂಟಾಗಿ ಕೊಲೆಯಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತದೆ.
ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ಮಾತ್ರವಲ್ಲ, ಆ ಮೂಲಕ ಅಮಾಯಕರ ಕೊಲೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟಾಗಲಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕೆಂಬ ಉದ್ದೇಶದೊಂದಿಗೆ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವನ್ನು ತರಲಾಗಿದೆ.
ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರಸರಣ, ಪ್ರಕಟಣೆ ಅಥವಾ ಪ್ರಚಾರ ಮಾಡುವುದರಿಂದ ಸಮಾಜದ ಸಾಮರಸ್ಯ ಹದಗೆಡಿಸುವುದು ಮತ್ತು ದ್ವೇಷ ಹರಡಿಸುವಿಕೆಗೆ ಕಡಿವಾಣ ಹಾಕಲು ಮತ್ತು ಅಂತಹ ಅಪರಾಧಗಳನ್ನು ಎಸಗುವ ವ್ಯಕ್ತಿ, ವ್ಯಕ್ತಿಗಳು, ಸಂಘಟನೆಯವರನ್ನು ಶಿಕ್ಷೆಗೆ ಒಳಪಡಿಸುವ ಮುಖ್ಯ ಉದ್ದೇಶದಿಂದ ಈ ಮಸೂದೆಯನ್ನು ರೂಪಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ನೋವಾಗುವ ರೀತಿಯಲ್ಲಿ ಮಾತುಗಳನ್ನು ಆಡುವ ಜನರ ಪ್ರಮಾಣ ಜಾಸ್ತಿಯಾಗಿದೆ. ಸಮಾಜದ ಸ್ವಾಸ್ಥ್ಯ, ಸಾಮರಸ್ಯ ಕಾಪಾಡಲು ದ್ವೇಷಭಾಷಣಗಳನ್ನು ನಿಯಂತ್ರಣ ಮಾಡಬೇಕಾಗಿದೆ. ಈ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಬೇಕು ಎನ್ನುವ ಸಂಕಲ್ಪ ನಮ್ಮ ಸರ್ಕಾರದ್ದಾಗಿದೆ.
ಪ್ರತಿಯೊಬ್ಬ ನಾಗರಿಕನಿಗೂ ಗೌರವದಿಂದ ಬದುಕುವ ಹಕ್ಕಿದೆ. ದ್ವೇಷಭಾಷಣವು ವ್ಯಕ್ತಿಯ ಗೌರವ, ಮತ್ತು ಮಾನವ ಹಕ್ಕುಗಳನ್ನು ಹಾನಿಗೊಳಿಸುತ್ತದೆ. ಇದನ್ನು ತಡೆಯಲು ಮತ್ತು ದುರ್ಬಲ ಸಮುದಾಯಗಳನ್ನು ರಕ್ಷಿಸಲು ದ್ವೇಷಭಾಷಣ ಮಸೂದೆ ಅಗತ್ಯವಾಗಿದೆ.
ಮಾತಿನ ಸ್ವಾತಂತ್ರ್ಯ ಎಂಬುದು ಸಂವಿಧಾನದ ಹಕ್ಕು ಆಗಿದ್ದರೂ, ಅದು ಇತರರ ಹಕ್ಕುಗಳಿಗೆ ಹಾನಿಯಾಗುವ ಮಟ್ಟಿಗೆ ಬಳಸಬಾರದು. ವಿರೋಧ ಪಕ್ಷಗಳು, ‘ದ್ವೇಷ ಭಾಷಣ ನಿರ್ಬಂಧ ವಿಧೇಯಕವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಹಾಗೂ ಸರ್ಕಾರ ಮಾತಿನ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ’ ಎಂದು ಅಪಪ್ರಚಾರ ಮಾಡುತ್ತಿವೆ. ಆದರೆ ದ್ವೇಷ ಭಾಷಣ ವಿಧೇಯಕದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಿಲ್ಲ ಹಾಗೂ ಮಸೂದೆ ಮಾತಿನ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಿಲ್ಲ.
ಬದಲಾಗಿ ಭಾಷಣಕಾರರು ಮಾತನ್ನು ಜವಾಬ್ದಾರಿಯಿಂದ ಬಳಸುವಂತೆ ಮಾಡಲು ವಿಧೇಯಕ ಎಚ್ಚರಿಸುತ್ತದೆ. ದ್ವೇಷ ಭಾಷಣದಿಂದ ಯುವಕರು ಪ್ರಚೋದನೆಗೊಳಗಾಗಿ ದಾರಿ ತಪ್ಪುತ್ತಿದ್ದಾರೆ. ಸರ್ವರನ್ನೂ ಸಮಾನವಾಗಿ ಗೌರವಿಸುವ ಸಂಸ್ಕೃತಿ ಯನ್ನು ಎಲ್ಲರಲ್ಲೂ ಬೆಳೆಸುವುದು ಮಸೂದೆಯ ಉದ್ದೇಶ. ದ್ವೇಷ, ಪ್ರಚೋದನೆ ಹಾಗೂ ಗಲಾಟೆಗಳ ಮೂಲಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂಬ ದೃಷ್ಟಿಯಿಂದ ಈ ಕಾನೂನು ತರಲಾಗಿದೆ.
ಈ ಮಸೂದೆಯಿಂದ ರಾಜ್ಯಕ್ಕೂ ಹಾಗೂ ಸಮಾಜಕ್ಕೂ ಒಳ್ಳೆಯದಾಗಲಿದೆ. ಸಮಾಜದಲ್ಲಿ ಧಾರ್ಮಿಕ ಸಹಬಾಳ್ವೆಯನ್ನು ಎತ್ತಿಹಿಡಿಯಲು ಈ ಮಸೂದೆ ಅಗತ್ಯವಾಗಿದೆ. ರಾಜ್ಯದಲ್ಲಿ ಸಹೋದರತ್ವ ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ.
ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಏಕತೆ ಕಾಪಾಡಲು ದ್ವೇಷಭಾಷಣ ಮಸೂದೆ ಅನಿವಾರ್ಯ. ದ್ವೇಷದ ಮಾತುಗಳನ್ನು ನಿಯಂತ್ರಿಸುವ ಮೂಲಕ ಮಾತ್ರ ಒಗ್ಗಟ್ಟಿನ ಮತ್ತು ಸುಖ ಸಮಾಜವನ್ನು ನಿರ್ಮಿಸಲು ಸಾಧ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ