ಕೋವಿಡ್ ಇದ್ರೂ ರೈತರಿಗೆ ಬ್ಯಾಂಕ್ ಸಾಲ ನೋಟಿಸ್!| ಸಾಲ ಪಾವತಿಗೆ ಕೆನರಾ ಬ್ಯಾಂಕ್ ತಾಕೀತು| ಚನ್ನರಾಯಪಟ್ಟಣದ 40 ರೈತರು ಕಂಗಾಲು
ಹಾಸನ(ಮೇ.08): ಕೊರೋನಾ ಸೋಂಕಿನ 2ನೇ ಅಲೆಯ ಹೊಡೆತಕ್ಕೆ ರೈತರು ತಮ್ಮ ಬೆಳೆಗಳನ್ನು ಮಾರಲಾಗದೆ ತಲೆ ಮೇಲೆ ಕೈಹೊತ್ತು ಕುಳಿತಿರುವ ಸಂದರ್ಭದಲ್ಲೇ ರಾಷ್ಟ್ರೀಕೃತ ಬ್ಯಾಂಕ್‌ವೊಂದು ಸಾಲ ಮರುಪಾವತಿಸದ 40ಕ್ಕೂ ಹೆಚ್ಚು ರೈತರಿಗೆ ನೋಟಿಸ್ ನೀಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಕೆನರಾ ಬ್ಯಾಂಕ್‌ನ ದತ್ತು ಗ್ರಾಮಗಳಾದ ದಿಂಡಗೂರು, ಶೆಟ್ಟಿಹಳ್ಳಿ ವ್ಯಾಪ್ತಿಯ 40ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ವತಿಯಿಂದ ಸಾಲ ತೀರಿಸುವಂತೆ ನೋಟಿಸ್ ನಿಡಲಾಗಿದೆ. ಕೊರೋನಾ ಸಂಕಷ್ಟದಲ್ಲಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾಲ್ಕೈದು ವರ್ಷಗಳ ಹಿಂದಿನ ಸಾಲ ತೀರಿಸುವಂತೆ ನೋಟಿಸ್ ನೀಡಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ಸಣ್ಣಪುಟ್ಟಸಾಲ ಮಾಡಿದ ರೈತರಿಗಷ್ಟೆ ಬ್ಯಾಂಕ್‌ನಿಂದ ನೋಟಿಸ್ ನೀಡಲಾಗಿದೆ. ಲಕ್ಷಗಟ್ಟಲೆ ಸಾಲ ಮಾಡಿರುವವರಿಗೆ ಯಾವ ನೋಟಿಸ್ ಕೂಡ ನೀಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ನೋಟಿಸ್ ಪಡೆದಿರುವ ರೈತರು ತಹಸೀಲ್ದಾರ್ ಹಾಗೂ ಶಾಸಕ ಬಾಲಕೃಷ್ಣ ಅವರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬ್ಯಾಂಕ್‌ನ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವುದಾಗಿ ತಹಸೀಲ್ದಾರ್ ಅವರು ರೈತರಿಗೆ ಭರವಸೆ ನೀಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona