ಸ್ಟೆಪ್‌ಡೌನ್ ಆಸ್ಪತ್ರೆ ಅಥವಾ ಕೊರೋನಾ ಆರೈಕೆ ಕೇಂದ್ರಕ್ಕೆ ಸ್ಥಳಾಂತರ| ಖಾಲಿಯಾಗುವ ಹಾಸಿಗೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ| ಕೋವಿಡ್ ಕಾರ್ಯಪಡೆ ಸಭೆ ನಿರ್ಧಾರ| ಚಿಕಿತ್ಸೆ, ಆರೋಗ್ಯ ಮಾಹಿತಿಯನ್ನು ಬಂಧುಗಳಿಗೆ ಆಸ್ಪತ್ರೆಗಳು ತಿಳಿಸುವುದು ಕಡ್ಡಾಯ: ಅಶ್ವತ್ಥನಾರಾಯಣ|
ಬೆಂಗಳೂರು(ಮೇ.08): ಮಹತ್ವದ ತೀರ್ಮಾನವೊಂದರಲ್ಲಿ ಗಂಭೀರ ಸ್ಥಿತಿ ಇರದಿದ್ದರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರನ್ನು ಸ್ಟೆಪ್‌ಡೌನ್ ಇಲ್ಲವೇ ಕೊರೋನಾ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಿ, ಖಾಲಿಯಾಗುವ ಹಾಸಿಗೆಗಳನ್ನು ಗಂಭೀರ ಸ್ಥಿತಿಯಲ್ಲಿ ಇರುವ ಸೋಂಕಿತರಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿಎನ್. ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಚಿಕಿತ್ಸೆ ಶಿಷ್ಟಾಚಾರ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶೇ.30ರಿಂದ 40ರಷ್ಟು ಗಂಭೀರವಲ್ಲದ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೂಡಲೇ ಇವರೆಲ್ಲರನ್ನೂ ಸ್ಟೆಪ್‌ಡೌನ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಬೇಕು. ಇದರಿಂದ ಖಾಲಿಯಾಗುವ ಹಾಸಿಗೆಗಳನ್ನು ಗಂಭೀರ ಸ್ಥಿತಿಯಲ್ಲಿ ಇರುವ ಸೋಂಕಿತರಿಗೆ ನೀಡಬಹುದು ಎಂದು ತಜ್ಞರು ನೀಡಿದ ಸಲಹೆಗೆ ಸಚಿವರು ಸಮ್ಮತಿ ಸೂಚಿಸಿದರು. ತಕ್ಷಣ ಈ ಬಗ್ಗೆ ಆದೇಶ ಮಾಡಲಾಗುವುದು, ಖಾಸಗಿ ಆಸ್ಪತ್ರೆಗಳು ಕೂಡ ಈ ಆದೇಶವನ್ನು ಪಾಲನೆ ಮಾಡಬೇಕು. ನೋಡೆಲ್ ಅಧಿಕಾರಿಗಳ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ಕಟ್ಟುನಿಟ್ಟಾಗಿ ನಡೆಯಬೇಕು ಎಂದು ಸೂಚನೆ ನೀಡಿದರು.
ಹಲವು ಮಂದಿ ಸೋಂಕಿನ ಭೀತಿಯಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯಬೇಕು ಹಾಗೂ ಅವರನ್ನು ಮನೆಯಲ್ಲಿ ಪ್ರತ್ಯೇಕವಾಸ ಇರಿಸಿ ಚಿಕಿತ್ಸೆ ಕೊಡಬೇಕು. ಸರಕಾರದ ಮಾರ್ಗಸೂಚಿ ಪ್ರಕಾರ 90ಕ್ಕಿಂತ ಕಡಿಮೆ ಸ್ಯಾಚುರೇಷನ್ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಹಣ ಕೊಡುತ್ತಾರೆ ಎಂದು ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳಬಾರದು ಎಂದು ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಸಿದರು.
ಕರ್ನಾಕಟದಲ್ಲಿ ಕೊರೋನಾ ಅಟ್ಟಹಾಸ: ಇಲ್ಲಿದೆ ಮೇ.07ರ ಅಂಕಿ-ಸಂಖ್ಯೆ
ಚಿಕಿತ್ಸೆಯಲ್ಲಿ ಲೋಪವಾದರೆ ಕಠಿಣ ಕ್ರಮ: ಸರಕಾರ ರೂಪಿಸಿರುವ ಕೋವಿಡ್ ಚಿಕಿತ್ಸಾ ವಿಧಾನದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಖಾಸಗಿ ಆಸ್ಪತ್ರೆಗಳೂ ಪಾಲಿಸಬೇಕು. ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ದೂರುಗಳು ಬಂದರೆ ಕರಾರುವಾಕ್ಕಾಗಿ ಪರಿಶೀಲಿಸಿ ಚಿಕಿತ್ಸೆಯಲ್ಲಿ ಎಲ್ಲಾದರೂ ಲೋಪವಾಗಿದ್ದರೆ ಕಠಿಣ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಂಬಂಧಿಕರಿಗೆ ಮಾಹಿತಿ ಕಡ್ಡಾಯ: ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಯಾವ ಚಿಕಿತ್ಸೆ ನೀಡಲಾಗುತ್ತಿದೆ? ಅವರ ಆರೋಗ್ಯ ಹೇಗಿದೆ? ಎಂಬ ಮಾಹಿತಿಯನ್ನು ಸಂಬಂಧಿಕರಿಗೆ ಕಡ್ಡಾಯವಾಗಿ ನೀಡಬೇಕು. ಸಾವುಗಳ ಬಗ್ಗೆಯೂ ಸಮರ್ಪಕ ಆಡಿಟ್ ನಡೆಯಬೇಕು ಎಂದರು.
ಸಭೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ, ಚಿಕಿತ್ಸೆಯ ಶಿಷ್ಟಾಚಾರ ಸಮಿತಿ ಅಧ್ಯಕ್ಷರೂ ಆದ ಆರೋಗ್ಯ ವಿವಿ ಕುಲಪತಿ ಡಾ.ಸಚ್ಚಿದಾನಂದ ಸೇರಿದಂತೆ ಇತರ ಹಿರಿಯ ವೈದ್ಯರು ಹಾಜರಿದ್ದರು.
ಮನೆಯಲ್ಲಿರುವ ಸೋಂಕಿತರು ರಕ್ತ ಪರೀಕ್ಷೆ ಮಾಡಿಸಿ
ಇತ್ತೀಚಿನ ಕೆಲ ದಿನಗಳಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದಲ್ಲಿ ಬಹಳ ಏರುಪೇರಾಗುತ್ತಿರುವ ವರದಿಗಳು ಬರುತ್ತಿವೆ. ಹೀಗಾಗಿ ಅವರೆಲ್ಲರ ರಕ್ತ ಪರೀಕ್ಷೆ ಮಾಡಿ, ಸಮಸ್ಯೆ ಪತ್ತೆ ಹಚ್ಚಬೇಕು. ಸೋಂಕು ಪತ್ತೆ ಹಚ್ಚುವ ಕೆಲಸ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಮುಗಿಯಬೇಕು ಎಂದು ಅಧಿಕಾರಿಗಳಿಗೆ ಡಾ.ಅಶ್ವತ್ಥನಾರಾಯಣ ಸೂಚಿಸಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona