
ಹಾಸನ (ಅ.08): ಹಾಸನದ ಪ್ರಸಿದ್ಧ 'ಹಾಸನಾಂಬ ಜಾತ್ರಾ ಮಹೋತ್ಸವದ ಈ ಬಾರಿಯ ಆಚರಣೆಗೆ ಜಿಲ್ಲಾಡಳಿತದಿಂದ ಭಾರೀ ಷರತ್ತು ವಿಧಿಸಲಾಗಿದೆ. ಎಲ್ಲ ಭಕ್ತರೂ ಸಾಂಪ್ರದಾಯಿಕ ಉಡುಗೆಗಳನ್ನೇ ಧರಿಸಿಕೊಂಡು ಬರಬೇಕು. ಜೊತೆಗೆ, ವಿಐಪಿ ಟಿಕೆಟ್, ಹಣಕ್ಕೆ ಖರೀದಿಸಿದ ವಿಶೇಷ ದರ್ಶನ ಟಿಕೆಟ್ ಹಾಗೂ ಧರ್ಮದರ್ಶನ ಮಾಡುವ ಭಕ್ತರಿಗೆ ಪ್ರತ್ಯೇಕ ಸಮಯ ಮತ್ತು ಸರತಿ ಸಾಲುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಬಾರಿ ಜಾತ್ರೆಯನ್ನು ಅತ್ಯಂತ ಸಡಗರ ಮತ್ತು ಸಂತೋಷದಿಂದ ಆಚರಿಸಲಾಗುತ್ತಿದೆ. ಜಿಲ್ಲಾಡಳಿತವು ಭರದಿಂದ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಭಕ್ತರಿಗೆ ಸುಗಮ ದರ್ಶನಕ್ಕೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಹಲವು ಹೊಸ ಬದಲಾವಣೆಗಳನ್ನು ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಭಕ್ತರು ಯಾವುದೇ ಗೊಂದಲವಿಲ್ಲದೆ ದೇವಿಯ ದರ್ಶನ ಪಡೆಯಲು ವ್ಯವಸ್ಥಿತ ಕ್ಯೂಗಳನ್ನು ಮಾಡಲಾಗಿದೆ:
1. ಸಾಮಾನ್ಯ ದರ್ಶನಕ್ಕೆ ಒಂದು ಸರತಿ ಸಾಲು
2. ಟಿಕೆಟ್ ಖರೀದಿಸಿ ಬರುವವರಿಗೆ ದೇವಿ ದರ್ಶನಕ್ಕೆ ಎರಡು ಪ್ರತ್ಯೇಕ ಸರತಿ ಸಾಲುಗಳು.
3. ಗಣ್ಯರಿಗೆ ಅಂದರೆ ಶಿಷ್ಟಾಚಾರದ ದರ್ಶನಕ್ಕೆ ಬರುವವರಿಗೆ ಮತ್ತೊಂದು ಪ್ರತ್ಯೇಕ ಸರತಿ ಸಾಲು ಮಾಡಲಾಗಿದೆ.
ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸುಮಾರು 120 ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದ್ದು, ಅವುಗಳ ನಿರ್ವಹಣೆಗೆ ಓರ್ವ ಸಿಬ್ಬಂದಿ ನಿಯೋಜಿಸಲಾಗಿದೆ. ಆರೋಗ್ಯ ಇಲಾಖೆ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇನ್ನು ಹಾಸನಾಂಬ ದೇವಾಲಯಕ್ಕೆ ಬರುವವರು ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು. ಅಲ್ಲದೆ, ಸಚಿವರು ಮತ್ತು ವಿಐಪಿಗಳು ತಮ್ಮ ವಾಹನಗಳನ್ನು ಐಬಿಯಲ್ಲಿ ನಿಲ್ಲಿಸಿ, ಜಿಲ್ಲಾಡಳಿತದ ವಾಹನದಲ್ಲಿ ದೇವಾಲಯಕ್ಕೆ ತೆರಳಬೇಕು ಎಂದು ತಿಳಿಸಿದರು. ದೇವಸ್ಥಾನದ ಸುತ್ತಲೂ ಪಾದರಕ್ಷೆಗಳನ್ನು ಬಿಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಭಕ್ತರಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ