
ಮೇಲುಕೋಟೆ (ಅ.8): ಯೋಗಾನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ಕೋತಿ ದಾಳಿಗೆ ಮಹಿಳೆ ಗಾಯಗೊಂಡಿರುವ ಘಟನೆ ಮಂಗಳವಾರ ಮತ್ತೆ ಮರುಕಳಿಸಿದೆ. ಈ ಹಿಂದೆಯೂ ಇಂತಹ ಘಟನೆಯಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ಸ್ವಾಮಿ ದರ್ಶನಕ್ಕೆ ಬಂದ ಭಕ್ತರಿಗೆ ಮತ್ತೊಮ್ಮೆ ತೊಂದರೆ ಎದುರಾಗಿದೆ.
ಯೋಗಾನರಸಿಂಹಸ್ವಾಮಿ ಬೆಟ್ಟದಲ್ಲಿ ಕೋತಿಗಳ ಹಾವಳಿ:
ಕೋತಿ ದಾಳಿಯಿಂದ ಗಾಯಗೊಂಡ ಮಹಿಳೆ ತಲೆಗೆ ಕರ್ಚಿಪು ಸುತ್ತಿಕೊಂಡು ನೋವು ಅನುಭವಿಸುತ್ತಾ ಹೋಗುತ್ತಿರುವ ದೃಶ್ಯ ಮನಕಲಕುವಂತಿತ್ತು. ಆದರೆ, ಗಾಯಗೊಂಡ ಭಕ್ತೆಯ ಮಾಹಿತಿ ಲಭ್ಯವಾಗಲಿಲ್ಲ. ಕೋತಿ ಹಾವಳಿಗೆ ಕಡಿವಾಣ ಹಾಕದಿದ್ದರೆ ಮೇಲುಕೋಟೆಗೆ ಕೆಟ್ಟ ಹೆಸರು ಬರುತ್ತದೆ. ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದೇಗುಲಕ್ಕೆ ಬರುವ ಭಕ್ತರ ಮೇಲೆ ಕೊತಿಗಳ ದಾಳಿ ದಿನನಿತ್ಯ ಜರುಗುತ್ತಿದ್ದು, ಮಹಿಳಾ ಭಕ್ತರು ತೀವ್ರತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸದಿದ್ದರೆ ಮುಂಬರುವ ಶನಿವಾರದಂದು ಚೆಲುವನಾರಾಯಣಸ್ವಾಮಿ ದೇವಾಲಯದ ಕಚೇರಿ ಹಾಗೂ ಗ್ರಾಪಂ ಕಚೇರಿ ಹಾಗೂ ಅರಣ್ಯ ಇಲಾಖೆ ಕಚೇರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸ್ತ್ರ ಹೇಳುವ ನೆಪದಲ್ಲಿ ವೃದ್ಧೆ ಚಿನ್ನಾಭರಣ ಮಾಯ!
ಮಳವಳ್ಳಿ: ಬುಡಬುಡಿಕೆಯ ವೇಷಧಾರಿ ಶಾಸ್ತ್ರ ಹೇಳುವ ನೆಪದಲ್ಲಿ ವೃದ್ಧೆಯ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗ್ರಾಮದ ಗುಜ್ಜಮ್ಮ ವಂಚನೆಗೆ ಒಳಗಾದ ವೃದ್ಧೆ. ಭಾನುವಾರ ಬೆಳಗ್ಗೆ ಬುಡಬುಡಿಕೆಯ ವೇಷಧಾರಿ ಗುಜ್ಜಮ್ಮ ಅವರ ಮನೆಗೆ ಬಳಿ ಬಂದು ನಿಮ್ಮ ಮಗನಿಗೆ ತೊಂದರೆಯಾಗಲಿದೆ. ಅದನ್ನು ತಪ್ಪಿಸಲು ಕುಡಿಕೆ ಮಾಡಿಕೊಡುವುದಾಗಿ ಹೇಳಿ ಕುಡಿಕೆಯೊಳಗೆ ಚಿನ್ನಾಭರಣ ಹಾಕುವಂತೆ ಹೇಳಿದ ಹಿನ್ನೆಲೆಯಲ್ಲಿ ಗುಜ್ಜಮ್ಮ ತಮ್ಮಲ್ಲಿದ್ದ 12 ಚಿನ್ನದ ಕಾಸು ಹಾಗೂ ಗುಂಡು (ಸುಮಾರು 25 ಸಾವಿರ ಮೌಲ್ಯ)ಗಳನ್ನು ಕೊಟ್ಟಿದ್ದಾರೆ. ನಂತರ ಪೂಜೆ ಮಾಡಿ ದುಷ್ಕರ್ಮಿ ಸಂಜೆ ನಂತರ ಚಿನ್ನಾಭರಣ ತೆಗೆದುಕೊಳ್ಳುವಂತೆ ಹೇಳಿ ಅಲ್ಲಿಂದ ತೆರಳಿದ್ದಾನೆ.
ವೃದ್ಧೆ ಗುಜ್ಜಮ್ಮ ಕುಡಿಕೆ ಪರಿಶೀಲಿಸಿದ ವೇಳೆ ಮೋಸ ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ವೃದ್ಧೆಯ ಪುತ್ರ ಮೂಗೀರೇಗೌಡ ನೀಡಿದ ದೂರಿನ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ