
ಚಿತ್ರದುರ್ಗ (ಅ.08): ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿರುವ ಪ್ರಸಿದ್ಧ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮೀಜಿಗಳ ಆರೋಗ್ಯದಲ್ಲಿ ಏರುಪೇರಾದ ಕಾರಣ ಭಕ್ತರು ಮತ್ತು ಮಠದ ಆಡಳಿತ ಮಂಡಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮೂಲಗಳ ಪ್ರಕಾರ, ಸ್ವಾಮೀಜಿಗಳು ಚಿತ್ರದುರ್ಗಕ್ಕೆ ಆಗಮಿಸಿದ್ದ ಸಂದರ್ಭದಲ್ಲೇ ಅಸ್ವಸ್ಥರಾಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಅವರ ದೇಹದಲ್ಲಿ ಸಕ್ಕರೆ ಪ್ರಮಾಣ (ಶುಗರ್ ಲೆವೆಲ್) ತೀವ್ರವಾಗಿ ಏರುಪೇರಾದ ಕಾರಣ ಈ ಅನಾರೋಗ್ಯ ಉಂಟಾಗಿದೆ. ಹೀಗಾಗಿ, ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಅಸ್ವಸ್ಥರಾಗಿದ್ದ ಕಾರಣ, ನಿನ್ನೆ (ಅ. 07) ನಡೆದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿಯೂ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದ ಪ್ರಮುಖರು ಹಾಗೂ ಸರ್ಕಾರಿ ಗಣ್ಯರು ಪಾಲ್ಗೊಂಡಿದ್ದ ಪ್ರಮುಖ ಕಾರ್ಯಕ್ರಮದಿಂದ ಶ್ರೀಗಳು ಗೈರಾಗಿದ್ದರು. ಅವರ ಆರೋಗ್ಯ ಸರಿಯಿಲ್ಲ ಎಂಬ ಮಾಹಿತಿ ಆಗಲೇ ತಿಳಿದುಬಂದಿದ್ದರೂ, ಇಂದು (ಅ. 08) ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದು ಖಚಿತವಾಗಿದೆ.
ಪ್ರಸ್ತುತ, ಸ್ವಾಮೀಜಿಗಳನ್ನು ಚಿತ್ರದುರ್ಗದಲ್ಲಿರುವ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಖಾಸಗಿ ಆಸ್ಪತ್ರೆ) ದಾಖಲಿಸಿ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ಮತ್ತು ಆಪ್ತರು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಶ್ರೀಗಳ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆ, ರಾಜ್ಯದ ವಿವಿಧ ಭಾಗಗಳಿಂದ ಮಠದ ಭಕ್ತರು, ಸಮುದಾಯದ ಮುಖಂಡರು ಮತ್ತು ರಾಜಕೀಯ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ. ಯಾವುದೇ ಗೊಂದಲ ಉಂಟಾಗದಂತೆ ಆಸ್ಪತ್ರೆಯ ಆವರಣದಲ್ಲಿ ಮತ್ತು ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
440ಕ್ಕೆ ತಲುಪಿದ್ದ ಶುಗರ್ ಲೆವೆಲ್, ಚೇತರಿಕೆ ಬಗ್ಗೆ ವೈದ್ಯರ ಮಾಹಿತಿ:
ವಾಲ್ಮೀಕಿ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರಾದ ಡಾ. ವಿಶ್ವಾಸ್ ಅವರು ಶ್ರೀಗಳ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ವಾಲ್ಮೀಕಿ ಶ್ರೀಗಳು ಆಸ್ಪತ್ರೆಗೆ ಬಂದಾಗ ಅವರ ಶುಗರ್ ಲೆವೆಲ್ 440ರಷ್ಟಿದ್ದು, ಜ್ವರವೂ ಇತ್ತು. ಶುಗರ್ ಅನ್‌ಕಂಟ್ರೋಲ್ಡ್ ಆಗಿದ್ದ ಕಾರಣ ಅವರು ಅಸ್ವಸ್ಥರಾಗಿದ್ದರು. ಚಿಕಿತ್ಸೆ ನೀಡಿದ ಬಳಿಕ ಈಗ ಸಕ್ಕರೆ ಪ್ರಮಾಣವು ನಿಯಂತ್ರಣಕ್ಕೆ ಬಂದಿದ್ದು, 160ಕ್ಕೆ ಇಳಿದಿದೆ. ಸದ್ಯ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಸ್ವಾಮೀಜಿ ಅವರಿಗೆ ಇನ್ನೂ ಕೆಲ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಿದೆ ಎಂದು ಹೇಳಿದರು.
ಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಸ್ವತಃ ಪ್ರಸನ್ನಾನಂದಪುರಿ ಶ್ರೀಗಳು ತಮ್ಮ ಅನಾರೋಗ್ಯದ ಕುರಿತು ಪ್ರತಿಕ್ರಿಯಿಸಿದ್ದಾರೆ. 'ಅ.6 ರಂದು ಕಾರ್ಯಕ್ರಮ ನಿಮಿತ್ತ ಚಿತ್ರದುರ್ಗಕ್ಕೆ ಬಂದಿದ್ದೆನು. ಮಾಚಿದೇವ ಮಠದ ಬಳಿ ವಾಕಿಂಗ್ ಮಾಡುವಾಗ ಸುಸ್ತಾಯಿತು. ಅಂದು ಮಾಚಿದೇವ ಮಠದಲ್ಲಿ ಉಳಿದು ವಿಶ್ರಾಂತಿ ಪಡೆದೆವು. ಬೆಳಗ್ಗೆ ಮತ್ತೆ ಸುಸ್ತಾದಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದೆನು. ವೈದ್ಯರ ಸೂಚನೆ ಮೇರೆಗೆ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದೇನೆ. ಸಕ್ಕರೆ ಖಾಯಿಲೆಯಲ್ಲಿ ವ್ಯತ್ಯಾಸ ಆದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ವಿವರಿಸಿದರು.
ಸ್ವಾಮೀಜಿಗಳ ಅನಾರೋಗ್ಯದ ಸುದ್ದಿ ತಿಳಿದು ಆಸ್ಪತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದ ಇತರ ರೋಗಿಗಳಿಗೆ ಮತ್ತು ಆಸ್ಪತ್ರೆ ಆಡಳಿತಕ್ಕೆ ತೊಂದರೆಯಾಗುತ್ತಿರುವುದರಿಂದ, 'ಭಕ್ತರು ಹೆಚ್ಚು ಬರುತ್ತಿರುವುದರಿಂದ ಮತ್ತೊಂದು ಸೂಕ್ತ ಸ್ಥಳಕ್ಕೆ ಸ್ವಾಮೀಜಿಯವರನ್ನು ಸ್ಥಳಾಂತರ ಮಾಡುವ ಕುರಿತು ಯೋಚಿಸುತ್ತಿದ್ದೇವೆ' ಎಂದು ಡಾ. ವಿಶ್ವಾಸ್ ಮಾಹಿತಿ ನೀಡಿದ್ದಾರೆ. ಶ್ರೀಗಳು ಶೀಘ್ರ ಗುಣಮುಖರಾಗುವ ವಿಶ್ವಾಸ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ