
ದಾವಣಗೆರೆ (ಸೆ.1): ಗಣೇಶ ಹಬ್ಬದ ಪೆಂಡಾಲ್‌ನಲ್ಲಿಯೇ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಹುಟ್ಟಿದ್ದು. ಈ ಹಬ್ಬ ಕ್ರಾಂತಿಕಾರಿಗಳನ್ನು ಹುಟ್ಟುಹಾಕುವ ಕಾರ್ಖಾನೆಯಾಗಿ ಮಾರ್ಪಟ್ಟಿತ್ತು ಎಂದು ಯುವ ವಾಗ್ಮಿ, ಲೇಖಕಿ ಹಾರಿಕ ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಹಳೇ ಕುಂದುವಾಡದಲ್ಲಿ ಹಿಂದೂ ಯುವ ಸೇನಾ ವತಿಯಿಂದ 79ನೇ ಸ್ವಾತಂತ್ರ್ಯ ವರ್ಷ, ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಗಣೇಶ ಹಬ್ಬ ಅಂಗವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣರ ಪಾತ್ರ, ಸ್ವತಂತ್ರ ಹೋರಾಟದಲ್ಲಿ ಗಣೇಶ ಚತುರ್ಥಿಯ ಹಬ್ಬ ಬಂದಿದ್ದು ಹೇಗೆ, ಯುವಕರಲ್ಲಿ ದೇಶಭಕ್ತಿ, ಸಂಸ್ಕೃತಿ ಮೂಡಿಸುವುದು ಹೇಗೆ ಎಂಬ ವಿಷಯಗಳ ಕುರಿತು ಅವರು ದಿಕ್ಸೂಚಿ ಭಾಷಣ ಮಾಡಿದರು.
ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಲೆಂದೇ ಬಾಲಗಂಗಾಧರ ತಿಲಕ್ ಅವರು ಗಣೇಶ ಚತುರ್ಥಿ ಪ್ರಾರಂಭ ಮಾಡಿದರು. ಈ ಹಬ್ಬ ದೇಶದ ಜನರ ಒಗ್ಗೂಡಿಕೆಗೆ ಸಾಕ್ಷಿಯಾಗಿ ಮುಂದೆ ಸ್ವಾತಂತ್ರ್ಯೋತ್ಸವಕ್ಕೂ ಕಾರಣವಾಯಿತು. ವೀರ ಸಾವರ್ಕರ್ ಅವರ ಪ್ರಥಮ ಭಾಷಣ ನಡೆದಿದ್ದೆ ಗಣೇಶೋತ್ಸವದ ಪೆಂಡಲ್‌ನಲ್ಲಿ. ಕ್ರಾಂತಿಕಾರಿಗಳು ಹುಟ್ಟಿಕೊಂಡಿದ್ದು ಗಣೇಶೋತ್ಸವ ಕಾರ್ಯಕ್ರಮಗಳಿಂದ. ಗಣೇಶನ ಹಬ್ಬ ಕ್ರಾಂತಿಕಾರಿಗಳ ಕಾರ್ಖಾನೆಯಾಗಿ ಮಾರ್ಪಟ್ಟು ಮುಂದೆ ಸ್ವತಂತ್ರದ ಕಿಚ್ಚು ಹಚ್ಚಿಸುವಲ್ಲಿ ಪ್ರಮುಖ ಘಟ್ಟವಾಗಿತ್ತು ಎಂದರು.
ಈ ಸಂದರ್ಭ ಮಾಜಿ ಮೇಯರ್ ಎಸ್.ಟಿ.ವೀರೇಶ್, ಎಚ್.ಎನ್. ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಜಿ. ಗಣೇಶಪ್ಪ, ಮುಖಂಡರಾದ ಜೆಸಿ ದೇವರಾಜ್, ಬಸವರಾಜ್ ಹಕ್ಕಿ, ಎನ್.ಟಿ. ನಾಗರಾಜ್, ಸಂಪತ್ ಕುಮಾರ್, ಮಧು ನಾಗರಾಜ್, ರಮೇಶ್, ಅಜಯ್, ಅಶೋಕ್, ಹಿಂದೂ ಯುವಸೇನೆ ಸದಸ್ಯರು, ಮತ್ತಿತರರಿದ್ದರು.
ಆರು ಅಡಿ ಎತ್ತರದ ದೇಹ ಹೊಂದಿದ್ದ ಸಂಗೊಳ್ಳಿ ರಾಯಣ್ಣ ಅವರ ಜೀವನವೇ ಆದರ್ಶಮಯವಾಗಿದೆ. ಹುಟ್ಟಿದರೆ ಈ ನಾಡಿಗಾಗಿ ಎಂಬ ಸಂದೇಶ ಕೊಟ್ಟು ಹೋದವರು ಸಂಗೊಳ್ಳಿ ರಾಯಣ್ಣ. ಅವರ ಇಡೀ ಜೀವನ ದೇವನಿರ್ಮಿತ. ಅವರು ಹುಟ್ಟಿದ್ದು ಆಗಸ್ಟ್ 15 ನಮಗೆ ಸ್ವಾತಂತ್ರ್ಯ ದಿನಾವಾದರೆ, ಹುತಾತ್ಮರಾಗಿದ್ದು ಜ.26, ಈ ದಿನ ನಮಗೆ ಗಣರಾಜ್ಯೋತ್ಸವ. ಎರಡು ದಿನವೂ ಭಾರತದ ಸೌಭಾಗ್ಯದ ದಿನವಾಗಿವೆ.
- ಹಾರಿಕ ಮಂಜುನಾಥ್, ಯುವ ವಾಗ್ಮಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ