
ಬೆಂಗಳೂರು( ಜೂ. 29) ನವೋದಯ ಕನ್ನಡ ಕವಿ, ವಿಮರ್ಶಕ, ನಾಟಕಕಾರ, ಸಾಹಿತಿ ಸುಬ್ರಾಯ ಚೊಕ್ಕಾಡಿಯವರಿಗೆ ಜನ್ಮದಿನದ ಶುಭಾಶಯ. ಸುಳ್ಯ ತಾಲೂಕಿನ ಕನ್ನಡದ ಕವಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ಅವರ ರಚನೆಯ ಗೀತೆಯನ್ನು ಹಾಡಿ ಸಂಭ್ರಮಿಸಿದ್ದಾರೆ.
ವಿಕಾಸ ಪ್ರಕಾಶನ ಬೆಂಗಳೂರು ಆಶ್ರಯದಲ್ಲಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ 'ಕಾಲದೊಂದೊಂದೇ ಹನಿ' ಪುಸ್ತಕ ಮಾರ್ಚ್ 28 ರಂದು ಲೋಕಾರ್ಪಣೆಯಾಗಿತ್ತು.
ಸುಬ್ರಾಯ ಚೊಕ್ಕಾಡಿ ಜೀವನ ಅನುಭವ ಕಥನ
ಚೊಕ್ಕಾಡಿಯವರ ಜೀವನ: ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಜನಿಸಿದ ಸುಬ್ರಾಯ ಅವರ ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ಪ್ರಾಥಮಿಕ ಶಿಕ್ಷಣ ಚೊಕ್ಕಾಡಿಯಲ್ಲೇ ಆಯಿತು. ಪಂಜದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದುಕೊಂಡರು. ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ.ಎ. (ಕನ್ನಡ) ಪದವಿ ಪಡೆದುಕೊಂಡರು.
ಯಕ್ಷಗಾನ, ಕಾಡು, ನದಿ, ಹಕ್ಕಿಗಳ ಕೂಗು ಚೊಕ್ಕಾಡಿಯವರ ಸಾಹಿತ್ಯ ಸೃಷ್ಟಿಗೆ ಪ್ರೇರಣೆ ನೀಡಿತು. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವರ್ಷಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸಲ್ಲಿಸಿದ ಸೇವೆ ಸಲ್ಲಿಸಿದರು. ಇದರೊಂದಿಗೆ ಸಾಹಿತ್ಯದ ಕೃಷಿಯನ್ನು ಮಾಡಿದರು.
ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ. ಗೀತೆಗಳು-ಹಾಡಿನ ಲೋಕ, ಬಂಗಾರದ ಹಕ್ಕಿ ಕವನ ಸಂಕಲನಗಳು ಮಾನ್ಯತೆ ಪಡೆದುಕೊಂಡವು . ಚೊಕ್ಕಾಡಿಯವರ ಕವನಗಳು ಕ್ಯಾಸೆಟ್ ಲೋಕದಲ್ಲಿಯೂ ಸಂಚಲನ ಮಾಡಿದವು.
65ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದ.ಕ. ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ, ಸಾಹಿತ್ಯಕಲಾನಿ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿಗೆ ಚೊಕ್ಕಾಡಿ ಪಾತ್ರವಾಗಿದ್ದು ಇನ್ನೊಮ್ಮೆ ಜನ್ಮದಿನದ ಶುಭಾಶಯ ಕೋರುತ್ತಿದ್ದೇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ