ಸುತ್ತೂರು ಶ್ರೀಗಳನ್ನ ಭೇಟಿಯಾದ ಅಶ್ವತ್ಥ್ ನಾರಾಯಣ, ಮಹತ್ವದ ಚರ್ಚೆ

By Suvarna NewsFirst Published Jun 29, 2021, 3:53 PM IST
Highlights

* ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಭೇಟಿ ಮಾಡಿ ಡಿಸಿಎಂ
* ಬೆಂಗಳೂರಿನ ಜಯನಗರದಲ್ಲಿರುವ ಮಠದ ಶಾಖಾ ಕೇಂದ್ರಕ್ಕೆ ಭೇಟಿ
* ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಚರ್ಚೆ

ಬೆಂಗಳೂರು, (ಜೂನ್.29):  ಉಪಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥ್ ನಾರಾಯಣ ಅವರು ಇಂದು (ಮಂಗಳವಾರ) ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಇಂದು (ಮಂಗಳವಾರ) ಮಧ್ಯಾಹ್ನ ಬೆಂಗಳೂರಿನ ಜಯನಗರದಲ್ಲಿರುವ ಮಠದ ಶಾಖಾ ಕೇಂದ್ರಕ್ಕೆ ಭೇಟಿ ನಿಡಿದ ಡಿಸಿಎಂ, ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಶ್ರೀಗಳಿಗೆ ವಿವರಿಸಿದರು. 

 ನೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ಈ ವರ್ಷದಿಂದಲೇ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳಲ್ಲಿ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡುವುದಾಗಿ ತಿಳಿಸಿದರು. ಇದು ಒಳ್ಳೆಯ ಆರಂಭ ಎಂದು ಡಿಸಿಎಂ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. 

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ವಿಷಯವಾರು ತಜ್ಞರ ನೇಮಕ

ಯುವಕರಿಗೆ ಗುಣಮಟ್ಟದ ಮತ್ತು ಭರವಸೆಯ ಶಿಕ್ಷಣ ನೀಡುವುದೂ ಸೇರಿ ಶಿಕ್ಷಣದ ಎಲ್ಲ ಹಂತಗಳಲ್ಲೂ ತಂತ್ರಜ್ಞಾನ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳಬೇಕು ಎಂದು ಸ್ವಾಮೀಜಿ ಅವರು ಮಾರ್ಗದರ್ಶನ ನೀಡಿದರು ಎಂಬುದಾಗಿ ಡಿಸಿಎಂ ಹೇಳಿದರು. 

ಕೋವಿಡ್‌ ನಿರ್ವಹಣೆ ಬಗ್ಗೆಯೂ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಲಾಯಿತು. ಅತಿ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಆಮ್ಲಜನಕ ಘಟಕಗಳ ಸ್ಥಾಪನೆ, ತುರ್ತು ಚಿಕಿತ್ಸೆ, ಐಸಿಯು ಮುಂತಾದ ಸೌಲಭ್ಯಗಳ ಬಗ್ಗೆ ಶ್ರೀಗಳು ಪ್ರಸ್ತಾಪ ಮಾಡಿದರು. ಶ್ರೀಗಳ ಆಶಯದಂತೆ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂದರು.

ರಾಜಕೀಯ ಉದ್ದೇಶದ ಭೇಟಿ ಅಲ್ಲ: 
ಸುತ್ತೂರು ಮಠಕ್ಕೆ ರಾಜಕೀಯ ಉದ್ದೇಶಕ್ಕೆ ಭೇಟಿ ನೀಡಿದ್ದೀರಾ? ಎಂಬ ಪ್ರಶ್ನೆಗೆ ಉತ್ತರ ನೀಡಿದ ಡಿಸಿಎಂ, "ನನ್ನದು ಖಂಡಿತಾ ರಾಜಕೀಯ ಉದ್ದೇಶಿತ ಭೇಟಿ ಅಲ್ಲ. ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯುವುದಷ್ಟೇ ಉದ್ದೇಶವಾಗಿತ್ತು" ಎಂದರು. 

ಗೊಂದಲ ಅಲ್ಲ, ಮಕ್ಕಳ ಹಿತವಷ್ಟೇ ಮುಖ್ಯ: 
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಇಬ್ಬರೂ ಸಚಿವರು ಮಕ್ಕಳ ಹಿತದ ಬಗ್ಗೆ ಮಾತ್ರ ಆಲೋಚನೆ ಮಾಡಿದ್ದಾರಷ್ಟೇ. ಪರೀಕ್ಷೆ ಕೂಡ ಮುಖ್ಯ. ಯಾವ ಸಂದರ್ಭದಲ್ಲಿ ಏನೇನು ಆಗಬೇಕೋ ಅದೆಲ್ಲ ನಡೆದರೆ ಉತ್ತಮ ಎಂದ ಡಿಸಿಎಂ, ಈಗ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಪರೀಕ್ಷೆ ನಡೆಸಿದರೆ ತಪ್ಪೇನೂ ಇಲ್ಲ. ಮಕ್ಕಳ ಭವಿಷ್ಯವೂ ಮುಖ್ಯ ಎಂದರು. 

ಜುಲೈ 5ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಇದೆ. ಕೋವಿಡ್‌ ಹಿನ್ನೆಲೆಯಲ್ಲಿ ಯಾವುದಕ್ಕೆಲ್ಲ ಅವಕಾಶ ನೀಡಬೇಕು-ನೀಡಬಾರದು ಎಂದು ಅಂದು ನಿರ್ಧಾರ ಕೈಗೊಳ್ಳಲಾಗುವುದು. ಉನ್ನತ ಶಿಕ್ಷಣದ ಶೈಕ್ಷಣಿಕ ವರ್ಷ ಈಗಾಗಲೇ ಆನ್‌ಲೈನ್‌ ಮೂಲಕ ನಡೆಯುತ್ತಿದೆ. ನೇರ ತರಗತಿಗಳ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

click me!