ಹಾನಗಲ್ ಸಮೀಕ್ಷೆ: ಸಜ್ಜನರ, ಮಾನೆ ನಡುವೆ ನೇರ ಸ್ಪರ್ಧೆ

By Kannadaprabha News  |  First Published Oct 27, 2021, 4:53 PM IST

ತೀವ್ರ ಕುತೂಹಲ ಮೂಡಿಸಿರುವ ಹಾನಗಲ್ ಉಪಚುನಾವಣೆ ಪ್ರಚಾರ ಇದೀಗ ರೋಚಕ ಘಟ್ಟ ತಲುಪಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಕ್ಷೇತ್ರದಲ್ಲಿ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ.


ಬೆಂಗಳೂರು (ಅ. 27): ತೀವ್ರ ಕುತೂಹಲ ಮೂಡಿಸಿರುವ ಹಾನಗಲ್ ಉಪಚುನಾವಣೆ ಪ್ರಚಾರ ಇದೀಗ ರೋಚಕ ಘಟ್ಟ ತಲುಪಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಕ್ಷೇತ್ರದಲ್ಲಿ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ.

ಸಿ.ಎಂ.ಉದಾಸಿ ನಿಧನದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಉಪಚುನಾವಣೆ ಪ್ರಚಾರದ ಭರಾಟೆ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಹಾಗೆ ನೋಡಿದರೆ ಈ ಕ್ಷೇತ್ರದ ಫಲಿತಾಂಶದಿಂದ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಆಗದಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಚುನಾವಣೆ ಆಗಿರುವ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Latest Videos

undefined

ಬಿಜೆಪಿಯಿಂದ ಶಿವರಾಜ ಸಜ್ಜನರ, ಕಾಂಗ್ರೆಸ್‌ನಿಂದ ಶ್ರೀನಿವಾಸ ಮಾನೆ, ಜೆಡಿಎಸ್ ನಿಂದ ನಿಯಾಜ್ ಶೇಖ್ ಸೇರಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 13 ಅಭ್ಯರ್ಥಿಗಳಿದ್ದರೂ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಇರೋದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ. ಆಡಳಿತಾರೂಢ ಬಿಜೆಪಿಗೆ ಕ್ಷೇತ್ರ ಉಳಿಸಿಕೊಳ್ಳುವ ಅನಿವಾರ್ಯತೆ ಜತೆಗೆ ಹಾವೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾಗಿರುವುದರಿಂದ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಹೀಗಾಗಿ ಗೆಲುವಿಗೆ ಬೇಕಿರುವ ಎಲ್ಲ ರೀತಿಯ ರಣತಂತ್ರಗಳನ್ನು ಬಿಜೆಪಿ ರೂಪಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಈಗಾಗಲೇ ಜಂಟಿ ಪ್ರಚಾರ ನಡೆಸಿದ್ದು, ಸಚಿವ ಸಂಪುಟದ ಹೆಚ್ಚಿನ ಸಚಿವರು ಹಾನಗಲ್‌ನಲ್ಲಿ ಬೀಡು ಬಿಟ್ಟು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಅಲ್ಪಸಂಖ್ಯಾತರ ವೋಟಿಗಾಗಿ ಸಿದ್ದು ಜೊಲ್ಲು ಸುರಿಸುತ್ತಿದ್ಧಾರೆ: ಜ್ಞಾನೇಂದ್ರ

ಇನ್ನು ಕಾಂಗ್ರೆಸ್ ಕೂಡ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದಿಯಾಗಿ ಕಾಂಗ್ರೆಸ್‌ನ ಅನೇಕ ನಾಯಕರು ಬಿರುಸಿನ ಪ್ರಚಾರವನ್ನೇ ನಡೆಸಿದ್ದಾರೆ. ಬಿಜೆಪಿ ತಕ್ಕೆಯಿಂದ ಈ ಕ್ಷೇತ್ರ ವಶಪಡಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ವಾಕ್ಸಮರ ಜೋರಾಗಿಯೇ ನಡೆದಿದೆ.

ಆರೋಪ-ಪ್ರತ್ಯಾರೋಪ, ಬಿರುಸಿನ ಪ್ರಚಾರದಿಂದಾಗಿ ದಿನದಿಂದ ದಿನಕ್ಕೆ ಇಲ್ಲಿನ ಕದನ ಕಣ ರೋಚಕತೆ ಪಡೆದುಕೊಳ್ಳುತ್ತಿದೆ. ಸಿ.ಎಂ.ಉದಾಸಿ ಅವರು ಹಿಂದೆ ಶಾಸಕರಾಗಿ, ಸಚಿವರಾಗಿದ್ದ ವೇಳೆ ಮಾಡಿದ ಕೆಲಸಗಳ ಬಗ್ಗೆ ಜನರು ಸ್ಮರಿಸುತ್ತಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವವೂ ಕಂಡು ಬರುತ್ತಿದೆ. ಮೋದಿ ಇರೋವರೆಗೆ ನಮ್ ವೋಟ್ ಬಿಜೆಪಿಗೆ ಎಂದು ಹಲವರು ಹೇಳುತ್ತಿದ್ದಾರೆ.

‘ಮೋದಿ ಚೊಲೋ ಕೆಲಸ ಮಾಡಾಕತ್ತಾರ, ಉದಾಸಿ ಅಣ್ಣಾರು ಎಲ್ಲ ಸೌಲತ್ತು ಕೊಡಸ್ಯಾರ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡ್ಯಾರ. ಪ್ರತಿ ವರ್ಷ ಬೆಳೆ ವಿಮೆ ಸಿಗಾಕತ್ತೇತಿ. ಈಗ ಮುಖ್ಯಮಂತ್ರಿ ನಮ್ಮ ಜಿಲ್ಲೆಯವರ ಅದಾರ. ಇನ್ನೂ ಹೆಚ್ಚ ಅಭಿವೃದ್ಧಿ ಆಗಬೋದು ಅನ್ನೋ ನಿರೀಕ್ಷೆ ಅದ. ಅದ್ಕಾಗಿ ನಾವು ಕ್ಯಾಂಡಿಡೇಟ್ ಮುಖ ನೋಡಾಂಗಿಲ್ಲ. ನಮ್ದು ಏನಿದ್ರೂ ಕಮಲಕ್ಕೆ ಮತ’ ಎಂಬ ಅಭಿಪ್ರಾಯವನ್ನು ಹಲವು ಮತದಾರರು ಹೊರಹಾಕುತ್ತಿದ್ದಾರೆ.

ಕುಮಾರಸ್ವಾಮಿಯಿಂದ ಸೂಟ್‌ಕೇಸ್ ರಾಜಕಾರಣ: ಜಮೀರ್ ಅಹ್ಮದ್

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರವಾಗಿಯೂ ತಾಲೂಕಿನಲ್ಲಿ ಉತ್ತಮ ಹೆಸರಿದೆ. ಕ್ಷೇತ್ರದಲ್ಲಿ ಅವರದ್ದೇ ಆದ ಹವಾವೂ ಇದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಬ್ಬರದ ಪ್ರಚಾರ, ಜತೆಗೆ ಕೋವಿಡ್ ಸಂದರ್ಭದಲ್ಲಿ ಕಷ್ಟದಲ್ಲಿದ್ದವರಿಗೆ ಮಾನೆ ಅವರು ಮಾಡಿದ ನೆರವು ಈಗ ಕಾಂಗ್ರೆಸ್ ನೆರವಿಗೆ ಬರುತ್ತಿದೆ. ಜನರು ಮಾನೆ ಮಾಡಿದ ನೆರವನ್ನು ಈಗಲೂ ಸ್ಮರಿಸಿಕೊಳ್ಳುತ್ತಿದ್ದಾರೆ. ‘ಉದಾಸಿ ಅಣ್ಣಾರಿದ್ದಾಗ ಅವರಿಗೆ ಬೆಂಬಲ ಕೊಟ್ಟೇವಿ. ಆದ್ರ ಈ ಸಲ ಮಾನೆ ಸಾಹೇಬ್ರಿಗೆ ವೋಟ್‌ರಿ. ಕೊರೋನಾ ಬಂದಾಗ ಯಾರೂ ನಮ್ ಕಷ್ಟಕ್ಕೆ ಬಂದಿಲ್ಲರಿ. ಆದ್ರೆ, ಮಾನೆ ಸಾಹೇಬ್ರು ಊರೂರು ಅಡ್ಡಾಡಿ ಮನಿ ತನಕ ಬಂದು ಹಣ ಕೊಟ್ಟಾರಿ, ಆಸ್ಪತ್ರೆ ಖರ್ಚು, ಮದುವೆಗೆ ಹಣ
ನೀಡಿದಾರೆ’ ಎಂಬ ಮಾತು ಗ್ರಾಮೀಣ ಭಾಗದ ಕೆಲವೆಡೆ ಕೇಳಿಬರುತ್ತಿವೆ.

ಲಿಂಗಾಯತರ ಪ್ರಾಬಲ್ಯ

ಹಾನಗಲ್ ಕ್ಷೇತ್ರದಲ್ಲಿ ಲಿಂಗಾಯತರೇ ಅತಿ ದೊಡ್ಡ ಸಮುದಾಯ. ನಂತರದ ಅತಿದೊಡ್ಡ ಸಮುದಾಯ ಮುಸ್ಲಿಮರದು. ಲಿಂಗಾಯತರು 65 ಸಾವಿರ, ಮುಸ್ಲಿಮರು 40 ಸಾವಿರ, ಗಂಗಾಮತ 25 ಸಾವಿರ, ಪರಿಶಿಷ್ಟ ಜಾತಿ, ಪಂಗಡದ 40 ಸಾವಿರ ಮತದಾರರಿದ್ದಾರೆ. ಇದಲ್ಲದೆ ಕುರುಬ 7 ಸಾವಿರ, ಮರಾಠಾ 7 ಸಾವಿರ, ಬ್ರಾಹ್ಮಣ 3 ಸಾವಿರ, ಕಮಾಟಿಗ ಸಮುದಾಯದ 3 ಸಾವಿರ ಮತದಾರರಿದ್ದಾರೆ. ವೈಶ್ಯ, ಈಡಿಗ, ಬಲಿಜ ಸೇರಿ ಇನ್ನುಳಿದ ಸಮುದಾಯದ 10 ಸಾವಿರ ಮತದಾರರಿದ್ದಾರೆ.

ಬಿಜೆಪಿ ಲಿಂಗಾಯತ ಮತಗಳನ್ನೇ ನೆಚ್ಚಿಕೊಂಡಿದೆ. ಕಾಂಗ್ರೆಸ್ ಹಿಂದುಳಿದ, ಅಲ್ಪಸಂಖ್ಯಾತರ ಮತಗಳನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಎಸ್ಸಿ, ಎಸ್ಟಿ ಹಾಗೂ ಗಂಗಾಮತ ಸಮುದಾಯದ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಆಗಲಿದೆ.

ಹಿಂದಿನ ಫಲಿತಾಂಶಗಳು
1972ರಲ್ಲಿ ಪಿ.ಸಿ. ಶೆಟ್ಟರ್(ಕಾಂಗ್ರೆಸ್), 1978ರಲ್ಲಿ ಮನೋಹರ ತಹಶೀಲ್ದಾರ್ (ಕಾಂಗ್ರೆಸ್), 1983ರಲ್ಲಿ ಸಿ.ಎಂ. ಉದಾಸಿ ಪಕ್ಷೇತರರಾಗಿ, 1985ರಲ್ಲಿ ಸಿ.ಎಂ. ಉದಾಸಿ ಜನತಾಪಕ್ಷದಿಂದ, 1989ರಲ್ಲಿ ಮನೋಹರ ತಹಶೀಲ್ದಾರ್ (ಕಾಂಗ್ರೆಸ್), 1994ರಲ್ಲಿ ಸಿ.ಎಂ. ಉದಾಸಿ ಜನತಾದಳದಿಂದ, 1999ರಲ್ಲಿ ಮನೋಹರ ತಹಶೀಲ್ದಾರ್ (ಕಾಂಗ್ರೆಸ್), 2004, 2008ರಲ್ಲಿ ಬಿಜೆಪಿಯಿಂದ ಸಿ.ಎಂ. ಉದಾಸಿ, 2013ರಲ್ಲಿ ಮನೋಹರ ತಹಶೀಲ್ದಾರ್ (ಕಾಂಗ್ರೆಸ್), 2018ರಲ್ಲಿ ಸಿ.ಎಂ. ಉದಾಸಿ ಬಿಜೆಪಿಯಿಂದ ಗೆದ್ದು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

- ನಾರಾಯಣ ಹೆಗಡೆ

click me!