ಬಿಸಿಲು ಮರೆಸುವ ಗುಲ್ ಮೊಹರ್ ಮರಗಳು!

By Web Desk  |  First Published May 7, 2019, 6:56 PM IST

ಬಿರು ಬೇಸಿಗೆಯ ಮಧ್ಯೆ ಜನರ ತನುಮನಕೆ ತಂಪು ನೀಡ್ತಿರೋ ಗುಲ್ ಮೊಹರ್ ಹೂವಿನ ಭರಾಟೆ| ನಗರದ ಸೌಂದರ್ಯದೊಂದಿಗೆ ತಂಪು ಇಂಪಿನ ಸೊಬಗು ನೀಡುತ್ತಿವೆ ಗುಲ್ ಮೊಹರ್ ಮರಗಳು| ಬೇಸಿಗೆಯಲ್ಲಿ ಮಕ್ಕಳು ಆಟವಾಡಲು ವರದಾನವಾಗಿರುವ ಸೌಂದರ್ಯಖನಿ ಹೂಮರಗಳು| ರಸ್ತೆಯ ಇಕ್ಕೆಲಗಳಲ್ಲಿ ವಧುವವರಂತೆ ಸಿಂಗಾರಗೊಂಡು ಸ್ವಾಗತ ಕೋರುವ ಗುಲ್ ಮೊಹರ್ ಮರಗಳು|


ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಮೇ.07): ಈಗ ಎಲ್ಲಿ ನೋಡಿದ್ರೂ ಬಿಸಿಲೇ ಬಿಸಿಲು. ಅದರಲ್ಲೂ ಉತ್ತರ ಕರ್ನಾಟಕದಲ್ಲಂತೂ ಜಜನರು ರಸ್ತೆ ಬದಿಯಲ್ಲಿ ನೆರಳನ್ನು ಹುಡಿಕೊಂಡು ಹೋಗೋ ಅನಿವಾರ್ಯತೆ ಎದುರಾಗಿದೆ.

Tap to resize

Latest Videos

ಆದರೆ ಇದನ್ನು ನೀಗಿಸಲೆಂದೇನೋ ಗೊತ್ತಿಲ್ಲ. ಇಂತಹ ಬಿರು ಬೇಸಿಗೆಯಲ್ಲೂ ದೇಹಕ್ಕೂ ಮತ್ತು ನೋಡುವ ಕಣ್ಣಿಗೂ ತಂಪು ನೀಡುವ ಗುಲ್ ಮೊಹರ್ ಮರಗಳು ಇದೀಗ ಬಾಗಲಕೋಟೆ ನಗರದೆಲ್ಲೆಡೆ ಮೈದೆಳೆದು ನಿಂತಿವೆ. ಜನರ ಮನಸ್ಸನ್ನು ಮೋಹಕಗೊಳಿಸುತ್ತಾ ತಮ್ಮತ್ತ ಕೈ ಬೀಸಿ ಕರೆಯುತ್ತಿವೆ.

"

 ಈಗ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಬಿಸಿಲಿನ ತಾಪ ಗರಿಷ್ಟ ಮಟ್ಟಕ್ಕೇರಿದೆ. ಈ ಬೇಸಿಗೆ ಬಿಸಿಲಿಗೆ ಗಾಳಿ ಬೀಸುತ್ತ, ಕೆಂಪು ಹಾಸಿನ ಸುಂದರ ಸ್ವಾಗತ ಕೋರುತ್ತ, ಜನರ ಮನಸ್ಸನ್ನು ಸೂರೆಗೊಳ್ಳುತ್ತಿರುವ ಈ ಮರದ ಹೆಸರು ಗುಲ್ ಮೊಹರ್. 

ಬಾಗಲಕೋಟೆಯಲ್ಲಿ ವಿದೇಶಿ ಮೂಲದ ಈ ಮರಗಳು ತನ್ನ ಕೆಂಪು, ಹಳದಿ, ದಟ್ಟ ಕೆಂಪು ಹೀಗೆ ನಾನಾ ವರ್ಣದ ಹೂಗಳಿಂದ ಜನರ ಗಮನ ಸೆಳೆಯುತ್ತಿವೆ. ನಗರದ ವಿದ್ಯಾಗಿರಿ, ನವನಗರ ಸೇರಿದಂತೆ ಜಿಲ್ಲೆಯ ಮುಧೋಳ, ಕೆರೂರ, ರಬಕವಿ, ಬನಹಟ್ಟಿ ಸೇರಿದಂತೆ ಹುಬ್ಬಳ್ಳಿ-ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಬೆಳೆದು ನಿಂತಿರೋ ಈ ಮರಗಳು ಇದೀಗ ಜನರ ಪಾಲಿಗೆ ಸದ್ದಿಲ್ಲದೆ ತಂಪು ನೀಡುವ ಕಾಯಕದಲ್ಲಿ ನಿರತವಾಗಿವೆ.

"

ಇದರಿಂದ ನಗರ ಮತ್ತು ರಸ್ತೆಗಳ ಸೌಂದರ್ಯವೂ ಹೆಚ್ಚಿದೆ. ಇಷ್ಟೇ ಅಲ್ಲದೆ ರಸ್ತೆ ಇಕ್ಕೆಲಗಳಲ್ಲಿಯ ಈ ಮರಗಳ ಸಾಲು ಬೆಳಿಗ್ಗೆ ಹಾಗೂ ಸಂಜೆ ವಾಯುವಿವಾರಕ್ಕೆ ತೆರಳುವವರಿಗೆ ಈಗ ರಾಜಮಾರ್ಗದಂತೆ ಗೋಚರಿಸುತ್ತಿವೆ. 

ಒಟ್ಟಿನಲ್ಲಿ ಇಂತಹ ಗುಲ್ ಮೊಹರ್ ಮರಗಳು ಇದೀಗ ಬಿರು ಬೇಸಿಗೆಯಲ್ಲೂ ನೋಡುಗರ ಕಣ್ಣಿಗೆ ತಂಪು ನೀಡಿ, ಸೌಂದರ್ಯದ ಆಗರವಾಗಿ ಗೋಚರಿಸುತ್ತಿವೆ.

ಇನ್ನು ಈ ಮರದಲ್ಲಿ ಮೇ ಮತ್ತು ಜೂನ್ ನಲ್ಲಿ ಮಾತ್ರ ಹೂ ಅರಳುವುದರಿಂದ ಇದು ಬೇಸಿಗೆಯ ಸಂಕಟ ನಿವಾರಿಸುವ ಮರವು ಹೌದು. ತಂಪಿಗೂ ಹೆಸರುವಾಸಿ, ಬಿಸಿಲಿನಲ್ಲಿ ಬಳಲಿದವರು ಕೆಲಹೊತ್ತು ಈ ಮರದ ಕೆಳಗೆ ಕುಳಿತು ವಿರಮಿಸದ್ರೆ ಸಾಕು ತಂಗಾಳಿ ಹಾಗೆ ಮೈ ಸೋಕುತ್ತೆ.

"
ಇನ್ನು ಬೇಸಿಗೆಯ ರಜೆಯಲ್ಲಿರುವ ಮಕ್ಕಳು ಇದೇ ಮರದಡಿ ಆಟವಾಡಿ ಬೇಸಿಗೆಯ ಬೇಸರ ಕಳೆಯುತ್ತಿರೋದು ವಿಶೇಷ. ಹೀಗೆ ತನ್ನ ಭಿನ್ನ ವಿಭಿನ್ನ ಹೂಗಳಿಂದ ಜನರ ಕಣ್ಮನ ಸೆಳೆಯುತ್ತಿರುವ ಈ ಮರಗಳ ಬಗ್ಗೆಯೂ ಜನರಿಗೆ ಎಲ್ಲಿಲ್ಲದ ಪ್ರೀತಿ. 

ಬರದ ನಾಡಿಗೆ ತಂಪು ನೀಡುತ್ತಿರುವ ಇಂತಹ ಮರಗಳು ಮುಂದಿನ ಬೇಸಿಗೆ ಬರುವುದರೊಳಗಾಗಿ ನಗರದೆಲ್ಲೆಡೆ ಹೆಚ್ಚಾಗಿ ರಾರಾಜಿಸಲಿ ಎನ್ನೋದು ಜನರ ಆಶಯ.
             
ಒಟ್ಟಿನಲ್ಲಿ ಬಿರುಬೇಸಿಗೆಯಿಂದ ಕಂಗೆಟ್ಟಿರೋ ಬಾಗಲಕೋಟೆ ಜಿಲ್ಲೆಯ ಜನತೆಗೆ ಕೊಂಚ ನಿರಾಳತೆಯನ್ನ ತನ್ಮಯತೆಯನ್ನ ನೀಡುವಲ್ಲಿ ಗುಲ್ಮೊಹರ್ ಮರದ ಹೂಗಳು ಸಹಕಾರಿಯಾಗಿವೆ. 

"

ಇಂತಹ ಮರಗಳನ್ನು ನೆಡುವಲ್ಲಿ ಸಾರ್ವಜನಿಕರು ಉತ್ಸಾಹ ತೋರಲಿ. ಮುಂದಿನ ಬೇಸಿಗೆ ದಿನಗಳಲ್ಲಾದ್ರೂ ನೆಮ್ಮದಿ ಕಾಣುವಂತಾಗಲಿ ಅನ್ನೋದೆ ಎಲ್ಲರ ಹಾರೈಕೆ.

click me!