ಉನ್ನತ ಶಿಕ್ಷಣ ಸಚಿವ ಜಿ. ಟಿ ದೇವೇಗೌಡ ಮಾಜಿ ಸಿಎಂ ಸಿದ್ದರಾಮಯ್ಯರ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಬಳ್ಳಾರಿ[ಡಿ.29]: ಸದ್ಯ ರಾಜ್ಯ ರಾಜಕೀಯದಲ್ಲಿ ಜಾರಕೊಕಿಹೊಳಿ ಸಹೋದರರು ಭಾರೀ ಸದ್ದು ಮಾಡುತ್ತಿದ್ದಾರೆ. ಸತೀಶ್ ಜಾರಕಿಹೊಳಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆಯಾದರೂ, ಯಾವುದೇ ಸ್ಥಾನ ಪಡೆಯದ ರಮೇಶ್ ಜಾರಕಿಹೊಳಿ ಮಾತ್ರ ಮೌನ ತಾಳಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಸದ್ಯ ಈ ಕುರಿತಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿದ್ದು, ಜಾರಕಿಹೊಳಿ ಸಹೋದರರು ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತಾರೆ ಎನ್ನುವ ಮೂಲಕ ಎಲ್ಲರೂ ಮಾಜಿ ಸಿಎಂ ಕಡೆ ಅನುಮಾನದ ದೃಷ್ಟಿ ಹರಿಸುವಂತೆ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಟಿಡಿ 'ಜಾರಕಿಹೊಳಿ ಸಹೋದರರಿಗೆ ಸಚಿವ ಸ್ಥಾನ ಕೊಟ್ಟಿದ್ದು, ಹಿಂಪಡೆದಿದ್ದು ಸಿದ್ದರಾಮಯ್ಯರ ನಿರ್ಧಾರ. ಸತೀಶ್ ಜಾರಕಿಹೊಳಿ ಹಾಗೂ ರಮೆಶ್ ಜಾರಕಿಹೊಳಿ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತಾರೆ. ಸಚಿವ ಸ್ಥಾನ ಸಿಗದ ರಮೇಶ್ ಜಾರಕಿಹೊಳಿಗೆ ಕೋಪವಿದೆ, ಅದನ್ನು ಶಮನ ಮಾಡುತ್ತೇವೆ. ಒಂದೇ ಪಕ್ಷದ ಸರ್ಕಾರವಿದ್ದಾಗಲೇ ಸಣ್ಣಪುಟ್ಟ ತೊಂದರೆಯಿರುತ್ತವೆ. ಸಮ್ಮಿಶ್ರ ಸರ್ಕಾರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಸಿಎಂ ಕುಮಾರಸ್ವಾಮಿ, ಹೆಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಬಗೆಹರಿಸುತ್ತಾರೆ. ಸಮ್ಮಿಶ್ರ ಸರ್ಕಾರ ಭದ್ರವಾಗಿದೆ' ಎಂದಿದ್ದಾರೆ.
ಸದ್ಯ ಜಿ. ಟಿ ದೇವೇಗೌಡರ ಈ ಹೇಳಿಕೆಗೆ ಮಾಜಿ ಸಿಎಂ ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.