ಇಂಗ್ಲಿಷ್‌ ಮಾಧ್ಯಮ: ಸಿದ್ದುಗೆ ರೇವಣ್ಣ ತಿರುಗೇಟು!

By Web DeskFirst Published Dec 29, 2018, 9:24 AM IST
Highlights

ದುಡ್ಡಿರುವವರು, ಸಾಹಿತಿಗಳ ಮಕ್ಕಳು ಮಾತ್ರ ಇಂಗ್ಲಿಷ್‌ನಲ್ಲಿ ಓದಬೇಕಾ?| ಇಂಗ್ಲಿಷ್‌ ಶಾಲೆ ಆರಂಭಿಸುವಂತೆ ನಾನೇ ಸಿಎಂ ಭೇಟಿ ಮಾಡಿ ಕೇಳುತ್ತೇನೆ.

ಬೆಂಗಳೂರು[ಡಿ.29]: ರಾಜ್ಯದಲ್ಲಿ ಮುಂದಿನ ವರ್ಷದಿಂದ ಹೊಸದಾಗಿ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿರುವುದಕ್ಕೆ ತಿರುಗೇಟು ನೀಡಿರುವ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ , ಕೇವಲ ದುಡ್ಡಿದ್ದವರ ಮಕ್ಕಳು, ಸಾಹಿತಿಗಳ ಮಕ್ಕಳು ಮಾತ್ರ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಬೇಕೇ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ, ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿ​ಸು​ವಂತೆ ತಾವೇ ಖುದ್ದಾಗಿ ಮುಖ್ಯ​ಮಂತ್ರಿ​ಯ​ವ​ರನ್ನು ಭೇಟಿ ಮಾಡಿ ಆಗ್ರ​ಹಿ​ಸು​ವುದಾ​ಗಿಯೂ ಹೇಳಿ​ದ್ದಾ​ರೆ.

ಶುಕ್ರ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಬಡವರ ಮಕ್ಕಳು ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಓದಬಾರದೇ? ಓದಿ ಮುಂದೆ ಬರಬಾರದೇ? ಕೇವಲ ದುಡ್ಡಿದ್ದವರು, ಸಾಹಿತಿಗಳ ಮಕ್ಕಳು ಮಾತ್ರ ಓದಬೇಕೆ? ನಾನು ಈ ವಿಷಯದಲ್ಲಿ ಬಡವರ ಪರವಾಗಿದ್ದೇನೆ. ಮಕ್ಕಳು ಇಂಗ್ಲಿಷ್‌ ಓದಲಿ, ಬದಲಾದ ಪರಿಸ್ಥಿತಿಯಲ್ಲಿ ಅವರು ಓದಿ ಶಕ್ತಿ ಪಡೆಯಲಿ. ಈ ವಿಷಯದಲ್ಲಿ ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇನೆ ಎಂದರು.

ರಾಜ್ಯ ಸರ್ಕಾರ 2019-20ನೇ ಸಾಲಿನಿಂದ ಒಂದು ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಿದೆ. ಈ ಬಗ್ಗೆ ತಮ್ಮ ಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ಕನ್ನಡ ಭಾಷೆ ಕಲಿಕೆ ಮತ್ತು ಕನ್ನಡ ಮಾಧ್ಯಮದ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಇಂಗ್ಲಿಷ್‌ನಲ್ಲಿ ಕಲಿತವರೆಲ್ಲ ಬುದ್ಧಿವಂತರಾ? ನಾನು ಹೈಸ್ಕೂಲ್‌ವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತವನು, ನಾನೇನು ಪೆದ್ದನಾ? 1000 ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಪ್ರಸ್ತಾವನೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದರು. ಇದಕ್ಕೆ ರೇವಣ್ಣ ತಿರು​ಗೇಟು ನೀಡಿ​ದ್ದಾ​ರೆ.

click me!