ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಕೃಷ್ಣಪ್ಪ ಅವರು ಪುರುಷರಿಗೆ ವಾರಕ್ಕೆ 2 ಬಾಟಲಿ ಮದ್ಯವನ್ನು ಉಚಿತವಾಗಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಂತೆ ಪುರುಷರಿಗೂ ಉಚಿತ ಮದ್ಯ ನೀಡುವ ಬಗ್ಗೆ ಚರ್ಚೆ ನಡೆದಿದೆ.
ಬೆಂಗಳೂರು (ಮಾ.20): ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ 2000 ರೂ. ಕೊಡುವ ಮಾದರಿಯಲ್ಲಿಯೇ ಎಲ್ಲ ಪುರುಷರಿಗೂ ವಾರಕ್ಕೆ 2 ಬಾಟಲಿ ಮದ್ಯವನ್ನು ಉಚಿತವಾಗಿ ಕೊಡುವ ಯೋಜನೆ ಜಾರಿಗೆ ತರುವಂತೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ.
ಇದೇನಿದು.. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಎಲ್ಲರೂ ಹೇಳಿದರೆ ಸರ್ಕಾರದಿಂದಲೇ ಜನರ ಆರೋಗ್ಯ ಹಾಳುವ ಮಾಡುವಂತೆ ಉಚಿತವಾಗಿ ಮದ್ಯವನ್ನು ಕೊಡುವ ಯೋಜನೆ ಜಾರಿಗೆ ತನ್ನಿಉ ಎಂದು ಹೇಳುತ್ತಿದ್ದಾರೆ ಎಂದು ಆಶ್ಚರ್ಯಪಡಬೇಡಿ. ಈ ಮಾತನ್ನು ಕರ್ನಾಟಕ ಸರ್ಕಾರದ ಆಡಳಿತ ಕೇಂದ್ರವಾಗಿರುವ ವಿಧಾನಸೌಧದ ಅಧಿವೇಶನದಲ್ಲಿ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಸರ್ಕಾರದ ಮುಂದೆ ಸಲಹೆಯನ್ನು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಅಬಕಾರಿ ಆದಾಯ ಗುರಿಯನ್ನು 36,500 ಕೋಟಿ ರೂ.ಗಳಿಂದ 40,000 ಕೋಟಿ ರೂ.ಗಳಿಗೆ ಹೆಚ್ಚಿಸಿದ್ದಾರೆ. ಇದರ ಬದಲಾಗಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಂತೆ ಪುರುಷರಿಗೆ 2 ಬಾಟಲಿ ಉಚಿತವಾಗಿ ಮದ್ಯ ಪೂರೈಕೆ ಯೋಜನೆ ಜಾರಿಗೆ ತರುವಂತೆ ಪ್ರಸ್ತಾಪಿಸಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ಶಾಸಕ ಎಂ.ಟಿ. ಕೃಷ್ಣಪ್ಪ ಅವರು, ಈ ಬಾರಿ ಆದಾಯ ತೆರಿಗೆಯನ್ನು 40 ಸಾವಿರ ರೂ.ಗೆ ಹೆಚ್ಚಳ ಮಾಡುವ ಗುರಿ ಇಟ್ಟಿದ್ದಾರೆ. ಪುನಃ ಮದ್ಯದ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಾರೆ. ನೀವು ಹೆಣ್ಣು ಮಕ್ಕಳಿಗೆ 2,000 ರೂ. ಫ್ರೀ ಕರೆಂಟ್ ಕೊಡ್ತೀರಿ ಅಲ್ವಾ.? ಅದು ನಮ್ಮದೇ ದುಡ್ಡು ಅಲ್ವಾ? ಸರ್ಕಾರವು ಮಹಿಳೆಯರಿಗೆ 2 ಸಾವಿರ ರೂ. ನೀಡುವ ಕಲ್ಯಾಣ ಕಾರ್ಯಕ್ರಮದಂತೆಯೇ, ಪುರುಷರಿಗೂ ವಾರಕ್ಕೆ ಎರಡು ಉಚಿತ ಮದ್ಯದ ಬಾಟಲಿಗಳನ್ನು ವಿತರಿಸಬೇಕು. ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೇ ಪುರುಷರಿಗೆ 2 ಬಾಟಲಿ ಮದ್ಯ ವಿತರಿಸುವ ಯೋಜನೆಯನ್ನು ಜಾರಿಗೊಳಿಸಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಹನಿಟ್ರ್ಯಾಪ್ ಒಪ್ಪಿಕೊಂಡ ಕೆ.ಎನ್. ರಾಜಣ್ಣ : 48 ರಾಜಕಾರಣಿಗಳ ಪೆನ್‌ಡ್ರೈವ್ ಬಹಿರಂಗ? ತನಿಖೆಗೆ ಆದೇಶ
ಕಳೆದ ಒಂದು ವರ್ಷದಲ್ಲಿ 3 ಬಾರಿ ಅಬಕಾರಿ ಇಲಾಖೆಗೆ ಟ್ಯಾಕ್ಸ್ ಹೆಚ್ಚಳ ಮಾಡಿದ್ದಾರೆ. ಇದು ಬಡವರ ತಲೆಯ ಮೇಲೆ ಹೊಡೆಯುವ ಕೆಲಸ ಮಾಡಿದ್ದಾರೆ. ನಾವು ಬಡವರಿಗೆ ಕುಡಿತವನ್ನು ಬಿಡಿಸಲು ಆಗುವುದಿಲ್ಲ. ಕೂಲಿ ಮಾಡುವವರು ಸೇರಿ ಅನೇಕ ವರ್ಗದವರು ಕುಡಿದೇ ಕುಡಿಯುತ್ತಾರೆ. ಆದರೆ, ಇಂತಹ ಬಡಜನರ ತಲೆಯ ಮೇಲೆ ಹೊಡೆದು ಹೆಣ್ಣು ಮಕ್ಕಳಿಗೆ 2,000 ಕೊಡುತ್ತೀರಿ. ಇದಕ್ಕೆ ನಮ್ಮ ವಿರೋಧವಿಲ್ಲ. ಅದನ್ನಾದರೂ ಸರಿಯಾಗಿ ಒಂದು ದಿನಾಂಕ ನಿಗದಿ ಮಾಡಿ ಕೊಡಿ. ಚುನಾವಣೆ ಬಂದಾಗ ಮಾತ್ರ ಕೊಡಬೇಡಿ. ಇನ್ನು ದುಡ್ಡಿಯುವ ಕಾರ್ಮಿಕರು, ಜನರು ಮದ್ಯ ಸೇವಿಸುತ್ತಾರೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪುರುಷರಿಗೆ ಉಚಿತವಾಗಿ ವಾರಕ್ಕೆ 2 ಬಾಟಲಿ ಮದ್ಯ ವಿತರಿಸುವ ಯೋಜನೆಯನ್ನ ರಾಜ್ಯ ಸರ್ಕಾರ ತರಬೇಕು. ಸಹಕಾರ ಸಂಘಗಳ ಮೂಲಕ ಉಚಿತ ಮದ್ಯ ವಿತರಿಸಬೇಕು ತಮ್ಮ ಅಭಿಪ್ರಾಯ ತಿಳಿಸಿದರು.
ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆಜೆ ಜಾರ್ಜ್, ಮದ್ಯಸೇವನೆ ಕಡಿಮೆ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ನಿಮ್ಮ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ನೀವೇ ಫ್ರಿಯಾಗಿ ನೀಡಿ. ಚುನಾವಣೆಯಲ್ಲಿ ಗೆದ್ದು, ಸರ್ಕಾರ ರಚಿಸಿ ಮತ್ತು ಇದನ್ನು ಮಾಡಿ. ನಾವು ಜನರು ಕಡಿಮೆ ಕುಡಿಯುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಉತ್ತರ ನೀಡಿದರು. ಆದರೆ, ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಸಂಪೂರ್ಣ ವಿರುದ್ಧವಾದ ನಿಲುವನ್ನು ತೆಗೆದುಕೊಂಡು ಸಂಪೂರ್ಣ ಮದ್ಯ ನಿಷೇಧಕ್ಕೆ ಕರೆ ನೀಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ಈಗಲೇ ಕುಡುಕರ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.. ಇನ್ನು ಫ್ರೀ ಕೊಟ್ಟರೆ ಹೇಗೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದನ್ನೂ ಓದಿ: ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಈ 3 ಸ್ಥಳಗಳು ಅಂತಿಮ!