ಆತ್ಮಹತ್ಯೆಗೀಡಾದ ರೈತರ ಪತ್ನಿಯರಿಗೆ ₹2000 ಪಿಂಚಣಿ ಮರುಜಾರಿ: ಸಿಎಂ

Published : Jul 26, 2023, 05:08 AM ISTUpdated : Jul 26, 2023, 05:09 AM IST
ಆತ್ಮಹತ್ಯೆಗೀಡಾದ ರೈತರ ಪತ್ನಿಯರಿಗೆ ₹2000 ಪಿಂಚಣಿ ಮರುಜಾರಿ: ಸಿಎಂ

ಸಾರಾಂಶ

ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಈ ಹಿಂದೆ ನಮ್ಮ ಸರ್ಕಾರ ತಿಂಗಳಿಗೆ .2,000 ಸಹಾಯಧನ ನೀಡುತ್ತಿತ್ತು. ಆ ಯೋಜನೆಯನ್ನು ಮತ್ತೆ ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಾವೇರಿ (ಜು.26) : ಇಲ್ಲಿಯ ಜಿ.ಪಂ. ಸಭಾಭವನದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರೈತರ ಆತ್ಮಹತ್ಯೆ ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದೆ ಎಂದು ‘ಕನ್ನಡಪ್ರಭ’ದಲ್ಲಿ ಬಂದ ವರದಿ ನೋಡಿ ಇಲ್ಲಿಯೇ ಮೊದಲು ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ. ಬಹಳ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ರೈತರ ಆತ್ಮಹತ್ಯೆ ಕಡಿಮೆಯಿದೆ. ಹಾಗಂತ ಈ ಬಗ್ಗೆ ನಾವು ಬೆನ್ನು ತಟ್ಟಿಕೊಳ್ಳುತ್ತಿಲ್ಲ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿನ ರೈತರ ಆತ್ಮಹತ್ಯೆ ಪ್ರಕರಣಗಳಿಗೂ ನಾವು ಪರಿಹಾರ ಕೊಡುತ್ತೇವೆ. ಹಿಂದೆ ನಾನು ಸಿಎಂ ಆಗಿದ್ದಾಗ ರೈತರ ಆತ್ಮಹತ್ಯೆಗೆ ನೀಡುವ ಪರಿಹಾರವನ್ನು .5 ಲಕ್ಷಕ್ಕೆ ಹೆಚ್ಚಳ ಮಾಡಿದ್ದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ಈ ಹಿಂದೆ ನಮ್ಮ ಸರ್ಕಾರ .2,000 ಸಹಾಯಧನ ನೀಡುತ್ತಿದ್ದ ಯೋಜನೆಯನ್ನೂ ಈಗ ಆರಂಭಿಸುತ್ತೇವೆ ಎಂದು ಹೇಳಿದರು.

ಸರ್ಕಾರ ಉರುಳಿಸಲು ಎಚ್‌ಡಿಕೆ ಪಿತೂರಿ: ಯಾವ ಶಾಸಕರಿಗೆ ಗಾಳ ಅಂತ ಗೊತ್ತಿದೆ -ಡಿಕೆಶಿ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾವೇರಿ ಜಿಲ್ಲೆಯಲ್ಲಿ 6 ರೈತರ ಆತ್ಮಹತ್ಯೆ ಪ್ರಕರಣಗಳಾಗಿವೆ. ಆ ಪೈಕಿ ಮೂರು ಪ್ರಕರಣಗಳಿಗೆ ಸಂಬಂಧಿಸಿ ಪರಿಹಾರ ನೀಡಲಾಗಿದ್ದು, ಇನ್ನೂ ಮೂರು ಪ್ರಕರಣಗಳಲ್ಲಿ ಎಫ್‌ಎಸ್‌ಎಲ್‌ ವರದಿ ಬರಬೇಕಿದೆ ಎಂದು ತಿಳಿಸಿದರು.

ರೈತರ ಆತ್ಮಹತ್ಯೆ ಎಷ್ಟಾಗಿದೆ ಎನ್ನುವುದಕ್ಕಿಂತ ರೈತರ ಆತ್ಮಹತ್ಯೆ ಆಗದಂತೆ ತಡೆಗಟ್ಟುವುದು ಮುಖ್ಯ. ಅಧಿಕಾರಿಗಳು ರೈತರ ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಜನವರಿಯಿಂದ 64 ರೈತರ ಆತ್ಮಹತ್ಯೆ:

ಇದಕ್ಕೂ ಮುನ್ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರು, ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಜೂನ್‌ವರೆಗೆ 64 ರೈತರ ಆತ್ಮಹತ್ಯೆ ಪ್ರಕರಣಗಳಾಗಿವೆ. ಈ ಬಗ್ಗೆ ನನ್ನಲ್ಲಿ ಎಫ್‌ಐಆರ್‌ ದಾಖಲೆಗಳಿವೆ. ಆದರೆ, ಜಿಲ್ಲಾಡಳಿತ ನೀಡಿದ ಮಾಹಿತಿಯಲ್ಲಿ ಕೇವಲ 16 ರೈತರ ಆತ್ಮಹತ್ಯೆ ಎಂದಿದೆ. ಸರ್ಕಾರದ ಪ್ರಕಾರ ಉಳಿದವರು ರೈತರಲ್ಲವೇ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಹೌದೇನ್ರಿ ಎಸ್ಪಿಯವರೇ? 64 ರೈತರ ಆತ್ಮಹತ್ಯೆ ಬಗ್ಗೆ ಎಫ್‌ಐಆರ್‌ ಆಗಿದೆಯೇ’ ಎಂದು ಪ್ರಶ್ನಿಸಿದರು. ‘ಹೌದು ಸರ್‌, ಜನವರಿಯಿಂದ ಜೂನ್‌ವರೆಗೆ 64 ಕೇಸ್‌ ಆಗಿವೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದರು. ‘ಹಾಗಾದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅಂದರೆ, ಮೇ 20ರ ಬಳಿಕ ಎಷ್ಟುರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಸಿ’ ಎಂದು ಎಸ್ಪಿಗೆ ಸೂಚಿಸಿದರು. ‘6 ಕೇಸ್‌ ಆಗಿವೆ’ ಎಂದು ಎಸ್ಪಿ ವಿವರಿಸಿದರು.

ಆಗ ಸಂಕನೂರ ಅವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ‘ನಿಮ್ಮ ಸರ್ಕಾರದ ಅವಧಿಯಲ್ಲೇ ಹೆಚ್ಚು ರೈತರ ಆತ್ಮಹತ್ಯೆ ಆಗಿವೆ’ ಎಂದು ಕಾಲೆಳೆದರು. ‘ನಮ್ಮ, ನಿಮ್ಮ ಕಾಲದಲ್ಲಿ ಅನ್ನೋದು ಬೇಡ, ರೈತರ ಆತ್ಮಹತ್ಯೆ ಬಗ್ಗೆ ನಿಖರವಾಗಿ ಮಾಹಿತಿ ಕೊಡಿ. ನನ್ನಲ್ಲಿ ಎಫ್‌ಐಆರ್‌ ದಾಖಲಾಗಿರುವ ಮಾಹಿತಿಯಿದೆ’ ಎಂದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸಿಎಂ ಸೂಚಿಸಿದರು.

ಅಧಿಕಾರಿಗಳಲ್ಲಿ ಉದಾರತೆಯಿರಲಿ:

ರೈತರ ಆತ್ಮಹತ್ಯೆ ಸಂಬಂಧ ಪರಿಹಾರ ಕೊಡುವ ವಿಚಾರದಲ್ಲಿ ಅಧಿಕಾರಿಗಳು ಉದಾರ ಮನೋಭಾವ ತೋರಬೇಕು. ತಾಂತ್ರಿಕ ಕಾರಣವೊಡ್ಡಿ ಪರಿಹಾರ ತಿರಸ್ಕರಿಸಬಾರದು. ನೀವೇನು ಸ್ವಂತ ಕಿಸೆಯಿಂದ ಪರಿಹಾರ ಕೊಡುತ್ತೀರಾ? ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕೊಟ್ಟರೆ ನಿಮ್ಮನ್ನು ನಾವೇನು ನೇಣಿಗೆ ಹಾಕಲ್ಲ ಎಂದು ಸಿಎಂ ಸೂಚಿಸಿದರು.

ನೈತಿಕತೆ ಬಗ್ಗೆ ಮಾತು ಸಾಲದು, ನೈಸ್‌ ಸದನ ಸಮಿತಿ ವರದಿ ಬಗ್ಗೆ ಕ್ರಮ ಏಕಿಲ್ಲ? ಸಿದ್ದುಗೆ ದೇವೇಗೌಡ ಚಾಟಿ

ರೈತರ ಆತ್ಮಹತ್ಯೆ ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದೆ ಎಂದು ‘ಕನ್ನಡಪ್ರಭ’ದಲ್ಲಿ ಬಂದ ವರದಿ ನೋಡಿ ಇಲ್ಲಿಯೇ ಮೊದಲು ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ರೈತರ ಆತ್ಮಹತ್ಯೆ ಕಡಿಮೆಯಿದೆ. ಹಾಗಂತ ಈ ಬಗ್ಗೆ ನಾವು ಬೆನ್ನು ತಟ್ಟಿಕೊಳ್ಳುತ್ತಿಲ್ಲ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್